ತುಮಕೂರು ಜಿಲ್ಲೆಯಲ್ಲಿ ಅನ್ಯಾಯಕ್ಕೊಳಗಾದ ಪರಿಶಿಷ್ಟರು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ನೀಡಿದರೆ, ಪ್ರಕರಣ ದಾಖಲಿಸಿಕೊಳ್ಳದೆ ಕೆಲ ಪೊಲೀಸ್ ಅಧಿಕಾರಿಗಳು ಸಂತ್ರಸ್ತರನ್ನೇ ಬೆದರಿಸುತ್ತಾರೆ. ಪ್ರಕರಣದ ಸೂಕ್ತ ತನಿಖೆ ನಡೆಸದೆ, ಆರೋಪಿಗಳನ್ನು ಬಂಧಿಸದೆ, ಸಂತ್ರಸ್ಥರನ್ನೇ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ದ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜನವರಿ 25ರಿಂದ 28ರವರೆಗೆ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಬಿ ರಾಜೇಶ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಾದಿಗ ಸಮಾಜ ಸಂಘಟನೆಯ ಪುನಶ್ಚೇತನ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು. “ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡನಹಳ್ಳಿ ಸೇರಿದಂತೆ ಜಿಲ್ಲೆಯಲ್ಲಿ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ಪೊಲೀಸರು ಬಹಳ ಲಘುವಾಗಿ ಪರಿಗಣಿಸುತ್ತಿದ್ದಾರೆ. ಆರೋಪಿಗಳ ಪರವಾಗಿ ನಿಲ್ಲುತ್ತಿರುವುದು ಸಾಮಾನ್ಯವಾಗುತಿವೆ. ಹಾಗಾಗಿ, ಇತ್ತೀಚೆಗೆ ದಾಖಲಾಗಿರುವ ಎಲ್ಲ ಅಟ್ರಾಸಿಟಿ ಪ್ರಕರಣಗಳನ್ನು ಕೂಲಂಕಷ ತನಿಖೆ ನಡೆಸಿ, ತಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯ” ಎಂದು ಹೇಳಿದರು.
“ಅಂಡನಹಳ್ಳಿಯಲ್ಲಿ ಸವರ್ಣೀಯ ವ್ಯಕ್ತಿಯೊಬ್ಬರು ದಲಿತರೊಂದಿಗೆ ನಡೆಯುತ್ತಿದ್ದ ಜಮೀನು ವಿವಾದದಿಂದ ಕುಪಿತರಾಗಿ ದಲಿತರ ಕಾಲೋನಿಯ ಸುತ್ತ ಮಣ್ಣು ಸುರಿದಿದ್ದರು. ಪರಿಣಾಮ, 2019ರಲ್ಲಿ ಆದ ಭೀಕರ ಮಳೆಗೆ ಅಂಡನಹಳ್ಳಿ ದಲಿತ ಕಾಲೋನಿಯ ಸುಮಾರು 4 ಮನೆಗಳು ಮಳೆ ನೀರಿಗೆ ಕುಸಿದು ಸಂಪೂರ್ಣ ಹಾಳಾಗಿದ್ದವು. ಈ ಸಂಬಂಧ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆ ಪ್ರಕರಣದ ವಿಚಾರಣೆ ನಡುತ್ತಿದೆ ಈ ನಡುವೆ, ಇತ್ತೀಚೆಗೆ, ಅಲ್ಲಿನ ದಲಿತ ಕಾಲೋನಿಯ ಕೊಳಚೆ ನೀರು ಹೊರ ಹೋಗಲು ತೆಗೆದಿದ್ದ ಚರಂಡಿಯನ್ನು ಮುಚ್ಚಲು ಆತ ಮುಂದಾಗಿದ್ದ. ಅದನ್ನು ಪ್ರಶ್ನಿಸಿದ ದಲಿತರ ಮೇಲೆ ಹಲ್ಲೆಗೆ ನಡೆಸಿದ್ದಾರೆ. ಆ ಬಗ್ಗೆ, 2024ರ ಜನವರಿ 10 ರಂದು ಚೇಳೂರು ಪೊಲೀಸ್ ಠಾಣೆಗೆ ಮತ್ತೊಂದು ದೂರು ನೀಡಲಾಗಿತ್ತು. ಆದರೆ, ಇದೂವರೆಗೆ ಎಫ್‌ಐಆರ್ ದಾಖಲಾಗಿಲ್ಲ” ಎಂದು ರಾಜೇಶ್ ಆರೋಪಿಸಿದ್ದಾರೆ.
“ಆರೋಪಿಯನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡದೆ, ವೃಥಾ ಕಾಲಾಹರಣ ಮಾಡುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ ದೂರು ನೀಡಿದವರನ್ನು ಬೇದರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಹಾಗಾಗಿ ಜನವರಿ 25 ರಿಂದ 28ರವರಗೆ ನಡೆಯುವ ಪ್ರತಿಭಟನಾ ಧರಣಿಯ ವೇಳೆ ಪೊಲೀಸ್ ಅಧಿಕ್ಷಕರು ಸ್ಥಳಕ್ಕೆ ಬಂದು ನಮ್ಮ ಅಹವಾಲು ಸ್ವೀಕರಿಸುಬೇಕು. ತಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಾದಿಗ ಸಮಾಜ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗಿರೀಶ್.ಜಿ.ಆರ್, ಪ್ರಸನ್ನಕುಮಾರ್ ,ಗುಬ್ಬಿ ತಾಲೂಕು ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ಆಶೋಕ್, ತಿಪಟೂರು ವಿಭಾಗೀಯ ಅಧ್ಯಕ್ಷ ಗವಿರಂಗಪ್ಪ, ಗುಬ್ಬಿ ತಾಲೂಕು ಯುವಘಟಕದ ಅಧ್ಯಕ್ಷ ಅಮರ್, ವಿವಿಧ ತಾಲೂಕು ಅಧ್ಯಕ್ಷರಾದ ರಾಜು, ಮೂರ್ತಪ್ಪ, ಉದಯ್ ಮತ್ತಿತರರು ಇದ್ದರು.