ರಾಜಕೀಯ ಎಂಬ ಪದಕ್ಕೆ ಬಹಳ ಅರ್ಥಗಳಿವೆ. ನನ್ನ ದೃಷ್ಟಿಯಲ್ಲಿ ಜನರ ಸಮಸ್ಯೆಗಳ ಜೊತೆಗೆ ನಿಲ್ಲುವುದೇ ರಾಜಕೀಯ ಎಂದು ಮಾಜಿ ಜಿಲ್ಲಾಧಿಕಾರಿ, ಸಂಸದ ಸಸಿಕಾಂತ್ ಸೆಂಥಿಲ್ ಅಭಿಪ್ರಾಯಪಟ್ಟರು.
ರಾಯಚೂರು ನಗರದ ರಂಗಮಂದಿರದಲ್ಲಿ ಶನಿವಾರ ʼಈದಿನ.ಕಾಮ್ʼ ಮಾಧ್ಯಮ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ʼಈ ಹಿಂದೆ ನಾನು ರಾಜಕೀಯ ವ್ಯಕ್ತಿ ಅಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆ, ಆದರೆ, ಈಗ ಹಾಗಿಲ್ಲ ಒಂದು ಪಕ್ಷದ ಸಿದ್ಧಾಂತದೊಂದಿಗೆ ಗುರುತಿಸಿಕೊಂಡು, ಸಂಸದನಾಗಿ ಜನರ ಸಮಸ್ಯೆಗಳೊಂದಿಗೆ ನಿಲ್ಲುವ ನಾನು ರಾಜಕೀಯ ವ್ಯಕ್ತಿ ಎಂದು ಹೇಳಲು ಹೆಮ್ಮೆಯಿದೆʼ ಎಂದರು.
ʼರಾಯಚೂರು ಜಿಲ್ಲೆಯ ಜನ ಎಂದರೆ ನನ್ನ ಕುಟುಂಬದ ಸದಸ್ಯರಿದ್ದಂತೆ, ರಾಯಚೂರು ಬರಬೇಕೆಂದರೆ ಮನೆಗೆ ಬಂದಷ್ಟು ಸಂತೋಷ. ಇಲ್ಲಿ ಜಿಲ್ಲಾಧಿಕಾರಿಯಾಗಿ ಕೆಲ ವರ್ಷಗಳ ಸೇವೆ ಸಲ್ಲಿಸುತ್ತಿದ್ದ ವೇಳೆ ಇಲ್ಲಿನ ಜನರು ತೋರುತ್ತಿದ್ದ ಪ್ರೀತಿ, ಅಭಿಮಾನ ಒಂಚೂರು ಕಡಿಮೆಯಾಗಿಲ್ಲ. ಇಂದಿಗೂ ಆ ಪ್ರೀತಿಯ ಸಂಬಂಧ ಹಾಗೇ ಗಟ್ಟಿಯಾಗಿ ಉಳಿದಿದೆʼ ಎಂದರು.

ʼನಾನು ರಾಯಚೂರು ಜಿಲ್ಲಾಧಿಕಾರಿ ಹುದ್ದೆಯಿಂದ ಬೇರೆಡೆಗೆ ವರ್ಗಾವಣೆಗೊಂಡಾಗ ಬಹಳ ಜನ ನನ್ನ ಮೇಲೆ ಸಿಟ್ಟಾಗಿದ್ದರು. ನೀವು ಏಕಾಏಕಿ ಯಾಕೆ ವರ್ಗಾವಣೆಯಾಗಿದ್ದೀರಾ ಎಂದು ಮುನಿಸಿಕೊಂಡಿದ್ದರು. ಅದೇ ರೀತಿ ನಾನು ಡಿಸಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಕೆಲವರು ʼನೀವು ರಾಜಿನಾಮೆ ಕೊಟ್ಟು ತಪ್ಪು ಮಾಡಿದ್ದೀರಿʼ ಎಂದು ನನ್ನ ಜೊತೆ ಮಾತಾಡುವುದೇ ಬಿಟ್ಟಿದ್ದರು. ಅದಾದ ಐದು ವರ್ಷಗಳ ಬಳಿಕ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದ ಬಳಿಕ ಅವರೇ ʼನೀವು ರಾಜಕೀಯಕ್ಕೆ ಹೋಗಿರುವುದು ಸೂಕ್ತ, ಇಂದಿನ ರಾಜಕಾರಣಕ್ಕೆ ನಿಮ್ಮ ಅವಶ್ಯಕತೆ ಇತ್ತುʼ ಎಂದು ಖುಷಿಯಿಂದ ಒಪ್ಪಿಕೊಂಡಿದ್ದಾರೆʼ ಎಂದು ಹೇಳಿದರು.
ʼಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಚರ್ಚಿಸಲು, ಜನರ ಸಮಸ್ಯೆ, ಪ್ರಶ್ನೆ ಹಾಗೂ ಜನರ ವಿಭಿನ್ನ ಆಲೋಚನೆಗಳನ್ನು ಅರ್ಥೈಸಿಕೊಳ್ಳಲು ಸಂವಾದ ತುಂಬಾ ಉಪಯುಕ್ತವಾಗಿದೆ. ಜನರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂವಾದ ಉತ್ತಮ ವೇದಿಕೆಯಾಗಿದೆ. ಸಂವಾದ ನಮ್ಮ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ಇತ್ತು. ಅದನ್ನು ನಾವು ಮತ್ತೆ ಮುನ್ನೆಲೆಗೆ ತರಬೇಕಿದೆ. ಇಂತಹ ವಿಶೇಷ ಸಂವಾದ ಕಾರ್ಯಕ್ರಮ ಆಯೋಜಿಸಿರುವ ʼಈದಿನ.ಕಾಮ್ʼ ಮಾಧ್ಯಮ ಸಂಸ್ಥೆಗೆ ಧನ್ಯವಾದʼ ಎಂದು ಹೇಳಿದರು.
ʼನನ್ನ ಪೂರ್ವಜರಿಗೆ ಸಮಾಜದಲ್ಲಿ ಮರ್ಯಾದೆ ಇರಲಿಲ್ಲ. ದಲಿತ ಕುಟುಂಬದಲ್ಲಿ ಜನಿಸಿದ ಕಾರಣಕ್ಕೆ ಅವರು ಅಸ್ಪೃಶ್ಯತೆ ಬಹಳ ಅನುಭವಿಸಿದರು. ಆದರೆ, ನನ್ನ ತಂದೆ ಹುಟ್ಟಿದ ವೇಳೆಗೆ ಡಾ.ಬಿ.ಆರ್. ಅಂಬೇಡ್ಕರ್ ಅವರು ʼಸಂವಿಧಾನʼ ಬಂದಿತ್ತು. ಹೀಗಾಗಿ ನನ್ನ ತಂದೆ ಅಸ್ಪೃಶ್ಯತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಮುಂದೆ ನಾನು ಅದರಿಂದ ತಪ್ಪಿಸಿಕೊಳ್ಳುವಂತೆ ಮಾಡಿದರುʼ ಎಂದರು.
ʼಒಂದು ಪಕ್ಷದಲ್ಲಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ರಾಜಕೀಯದ ಒಂದು ವಿಧಾನ ಅಷ್ಟೇ. ಆದರೆ, ಜನರ ಸಮಸ್ಯೆಗಳೊಂದಿಗೆ ನಿಲ್ಲುವುದು ರಾಜಕೀಯ ಎಂಬುದು ನನ್ನ ಅಭಿಪ್ರಾಯ. ನಾವು ಆಡಳಿತ ಸರ್ಕಾರದ ವಿರುದ್ಧ ಪ್ರಶ್ನಿಸಲು ಶುರು ಮಾಡಿದ್ದೇವೆ ಎಂದರೆ ನಾವೆಲ್ಲರೂ ರಾಜಕೀಯ ವ್ಯಕ್ತಿಗಳೇ ಆಗಿದ್ದೇವೆʼ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪಕ್ಷಗಳಿಂದಲೂ ಕುಟುಂಬ ಅಭ್ಯರ್ಥಿಗಳ ದುರಂತ ರಾಜಕಾರಣ
ʼನಮನ್ನು ಯಾವ ರಾಜಕೀಯ ಸೃಷ್ಟಿ ಮಾಡಿದೆ, ಆ ರಾಜಕೀಯಕ್ಕೆ ಅಪಾಯ ಬಂದಾಗ ನಾವು ಅದರೊಂದಿಗೆ ಹೋಗಲೇಬೇಕು. ಅಪಾಯ ಸ್ಥಿತಿಯಲ್ಲಿರುವ ರಾಜಕೀಯ ವ್ಯವಸ್ಥೆಯನ್ನು ಉಳಿಸಿ ಬೆಳೆಸಲು ನಾವು ಅದರಲ್ಲಿ ಹೋಗಲೇಬೇಕಾಗಿದೆʼ ಎಂದು ತಿಳಿಸಿದರು.