ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆ, ಯಾವುದೇ ಆದರೂ ಸದಾ ಸಮಾಜದ ಒಳಿತನ್ನೇ ಬಯಸುತ್ತದೆ. ಈ ತಳಹದಿಯಿಂದಲೇ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪುಗೊಳಿಸುತ್ತವೆ ಎಂದು ಕೊಡಗು ಜಿಲ್ಲೆಯ ವಿರಾಜಪೇಟೆ ಅರಮೇರಿಯ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕಲ್ಲುಬಾಣೆಯ ಬದ್ರಿಯಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
“ವಿದ್ಯಾರ್ಥಿಗಳ ಬದುಕಿನ ಮಹತ್ತರವಾದ ಘಟ್ಟದಲ್ಲಿ ಆಂತರಿಕ, ಬಾಹ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಆಕಾರ ನೀಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹುಮುಖ್ಯವಾದದ್ದು. ಆದ್ದರಿಂದ ಯಾವುದೇ ಸವಾಲುಗಳಿದ್ದರೂ ವಿದ್ಯಾರ್ಥಿಗಳಲ್ಲಿನ ಆಂತರಿಕ ಅಂಧತ್ವ ತೊಡೆದುಹಾಕಿ ಅಕ್ಷರ ಶ್ರೀಮಂತಿಕೆಯ ಮೂಲಕ ಬದುಕಿನ ಮೌಲ್ಯ ಹೆಚ್ಚಿಸುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವಲ್ಲಿ ಕಿಂಚಿತ್ತೂ ವಂಚನೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಎಲ್ಲ ಶಿಕ್ಷಣ ಸಂಸ್ಥೆಗಳ ಮೇಲಿದೆ” ಎಂದು ಎಚ್ಚರಿಸಿದರು.
“ಪ್ರಸ್ತುತ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಅತಿ ಸುಲಭದಲ್ಲಿ ದೊರೆಯುತ್ತಿದೆ. ಬಡತನದ ಮಧ್ಯೆ ಶಿಕ್ಷಣ ಪಡೆಯುತ್ತಿದ್ದ ಹಿಂದಿನ ಕಾಲದಲ್ಲಿ ನಮ್ಮ ಕಲಿಕಾ ಸಾಮರ್ಥ್ಯವನ್ನು ನಾವೇ ನಿರ್ಧರಿಸಬೇಕಿತ್ತು. ಪ್ರತಿಯೊಂದು ಮಾಹಿತಿಯೂ ಅಂಗೈಯಲ್ಲಿ ದೊರೆಯುವಂತಹ ಯಾಂತ್ರಿಕ ಯುಗದಲ್ಲಿ ಇಂದಿನ ವಿದ್ಯಾರ್ಥಿಗಳಿದ್ದರೂ, ಶಿಕ್ಷಣ ಪಡೆಯುವಲ್ಲಿನ ಸವಾಲುಗಳು ಕಡಿಮೆಯಾಗಲಿಲ್ಲ ಎಂಬುದನ್ನು ಮರೆಯಬಾರದು. ದಿನದ 24 ತಾಸುಗಳ ಪೈಕಿ ವಿದ್ಯಾರ್ಥಿಗಳು ಕೇವಲ 7ರಿಂದ 8ಗಂಟೆಗಳಷ್ಟೇ ಶಾಲೆಯಲ್ಲಿ ಇರುತ್ತಾರೆ. ಉಳಿದ 16 ಗಂಟೆಗಳನ್ನು ಮನೆಯಲ್ಲಿ ಕಳೆಯುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಬದುಕಿನ ಮೌಲ್ಯಗಳ ಶಿಕ್ಷಣ ಕೇವಲ ಶಾಲೆಗಳಿಗೆ ಮಾತ್ರ ಸೀಮಿತಪಡಿಸಬಾರದು” ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಕೊಡವ ಮುಸ್ಲಿಂ ಅಸೋಸಿಯೇಷನ್(ಕೆಎಂಎ) ಅಧ್ಯಕ್ಷ ದುದ್ದಿಯಂಡ ಹೆಚ್ ಸೂಫಿ ಹಾಜಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, “ಜೀವನಪರ್ಯಂತ ಯಾರಿಂದಲೂ ಕಸಿದುಕೊಳ್ಳಲಾಗದ ಸಂಪತ್ತಾಗಿರುವ ಶಿಕ್ಷಣ ಇಂದು ಪ್ರತಿಯೊಬ್ಬ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಮಾಹಿತಿ ತಂತ್ರಜ್ಞಾನ ಆವಿಷ್ಕಾರಗೊಂಡ ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಪಡೆಯಲು ಯಾವುದೇ ರೀತಿಯ ಅಡೆತಡೆಗಳಿಲ್ಲ. ಇಂದು ಎಷ್ಟೇ ಆರ್ಥಿಕ ಬಡತನವಿದ್ದರೂ ಶಿಕ್ಷಣದಿಂದ ವಂಚಿತರಾಗುವ ಸನ್ನಿವೇಶಗಳಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ವಿದ್ಯಾಭ್ಯಾಸದ ಗುರಿ ಹೊಂದಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ಕೊಡಗು | ತಾಲೂಕು ಆಡಳಿತದ ನಿರ್ಲಕ್ಷ್ಯ; ಪೊನ್ನಂಪೇಟೆ ಬಡವರಿಗಿಲ್ಲ ಸೂರು; ದಸಂಸ ಪ್ರತಿಭಟನೆ
ಅಂಗವೈಕಲ್ಯತೆಯ ನಡುವೆಯೂ ಎಂಎಸ್‌ಸಿ ಸ್ನಾತಕೋತ್ತರ ಪದವಿಗಳಿಸಿ ಕೆಎಸ್‌ಇಟಿಯಲ್ಲಿ ತೇರ್ಗಡೆ ಹೊಂದಿ ಶಿಕ್ಷಕಿಯಾಗಿರುವ ಶಾಲೆಯ ಹಳೆಯ ವಿದ್ಯಾರ್ಥಿನಿ ಎಂ ಆರ್ ರಿಹಾ ಮುಸ್ಕಾನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ವಾರ್ಷಿಕೋತ್ಸವ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಬದ್ರಿಯಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಪಿ ಕೆ ಅಫ್ಸಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆರ್ಜಿ ಗ್ರಾ.ಪಂ ಅಧ್ಯಕ್ಷ ಫಾತಿಮಾ ಸುಲೇಮಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ ಎ ಶಫೀಕ್, ವಿರಾಜಪೇಟೆ ಕ್ಷೇತ್ರ ಸಂಪನ್ಮೂಲ ಸಂಯೋಜಕಿ ಬಿಂದು, ಬದ್ರಿಯಾ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಪಿ ಕೆ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಶಹದೀರ್ ಅಲಿ ಮೊದಲಾದವರು ಇದ್ದರು.
