ಅಂಗನವಾಡಿಯಲ್ಲಿ ಕೆಟ್ಟಿರುವ ಮೊಟ್ಟೆಗಳು, ಹಾಳಾಗಿರುವ ಚಿಕ್ಕಿ ಹಾಗೂ ಕಳಪೆ ತರಕಾರಿಗಳಲ್ಲಿ ಆಹಾರ ತಯಾರಿಸಿ ಕೊಡುತ್ತಿದ್ದಾರೆ ಎಂಬ ಆರೋಪ ಗದಗ ನಗರದ ಗಂಗಾಪೂರ ಪೇಟೆಯಲ್ಲಿ ಕೇಳಿಬಂದಿದೆ
ಗಂಗಾಪೂರ ಪೇಟೆಯ ಅಂಗನವಾಡಿ 178ರ ಕಾರ್ಯಕರ್ತೆ ಮಕ್ಕಳಿಗೆ ಕಳಪೆ ಆಹಾರ ನೀಡುತ್ತಿದ್ದಾರೆ. ಇಲಿ ಕಚ್ಚಿದ ತರಕಾರಿ, ನುಸಿ ಹುಳುಗಳಿರುವ ಆಹಾರ ಧಾನ್ಯಗಳಲ್ಲೇ ಅಡುಗೆ ಮಾಡುತ್ತಿದ್ದಾರೆ. ಅದನ್ನೇ ಮಕ್ಕಳಿಗೆ ತಿನ್ನಿಸುತ್ತಿದ್ದಾರೆ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ. ಅಂಗನವಾಡಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿಗೆ ಉಪನಿರ್ದೇಶಕ ಶೆಟ್ಟೆಪ್ಪ ಭೇಟಿ ನೀಡಿದ್ದು, ಅವರನ್ನು ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಳಾಗಿದ್ದ ಆಹಾರ ಧಾನ್ಯಗಳನ್ನು ನೆಲಕ್ಕೆ ಸುರಿದಿದ್ದಾರೆ.
ಕಳಪೆ ಆಹಾರದಿಂದಾಗಿ ಮಕ್ಕಳು ಆಸ್ಪತ್ರೆ ಸೇರುತ್ತಿದ್ದಾರೆ. ಕಳಪೆ ಆಹಾರವನ್ನೇ ಗರ್ಭಿಣಿ ಮಹಿಳೆಯರಿಗೂ ನೀಡಿದರೆ, ಅವರ ಪರಿಸ್ಥಿತಿ ಏನಾಗಬೇಕು ಎಂದು ಕಿಡಿಕಾರಿದ್ದಾರೆ.
“ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯ ನಿರ್ಲಕ್ಷ್ಯದಿಂದ ಆಹಾರ ಪದಾರ್ಥಗಳ ನಿರ್ವಹಣೆ ಸರಿಯಾಗಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.