ಅತ್ಯಾಧುನಿಕತೆಯ ಕಾಲದಲ್ಲೂ ಜೀತದಾಳುಗಳಾಗಿ ದುಡಿಯುತ್ತಿದ್ದ ಕುಟುಂಬವನ್ನು ಜೀತಮುಕ್ತಿಗೊಳಿಸಿರುವ ಜಿಲ್ಲಾಡಳಿತ ಯತ್ತಗದಹಳ್ಳಿ ಜ್ಞಾನಸಿಂಧು ವೃದ್ಧಾಶ್ರಮದಲ್ಲಿ ಪುನರ್ವಸತಿ ಕಲ್ಪಿಸಿದೆ.
ಮದ್ದೂರು ತಾಲೂಕಿನ ಕೋಣಸಾಲೆ ಗ್ರಾಮದ ವೆಂಕಟೇಶ್ ಮತ್ತು ಗೀತಾ ದಂಪತಿಗಳು ಕಳೆದ 7 ವರ್ಷಗಳಿಂದ ಮುರುಳಿ ಎಂಬುವರ ಹಂದಿ ಸಾಕಣಿಕೆ ಕೇಂದ್ರದಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದು, ಮಾಲೀಕನ ಹಿಂಸೆ ತಾಳಲಾರದೆ ದೂರವಾಣಿ ಕರೆ ಮೂಲಕ ತಹಶೀಲ್ದಾರ್‌ಗೆ ದೂರು ನೀಡಿದ್ದರು. ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಕುಟುಂಬವನ್ನು ಜೀತಮುಕ್ತಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಂದಿ ಸಾಕಾಣಿಕೆ ಕೇಂದ್ರದ ಮಾಲೀಕ ಮುರುಳಿ ಸಾಲದ ನೆಪವೊಡ್ಡಿ ಕಳೆದ 7 ವರ್ಷಗಳಿಂದ ದಂಪತಿಗಳನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದ. ದಿನಕ್ಕೆ ತಲಾ 250 ರೂಪಾಯಿ ಕೂಲಿ ನಿಗದಿ ಮಾಡಿದ್ದ ಮಾಲೀಕ, ಕೇವಲ 5 ಸಾವಿರ ಮಾತ್ರ ಕೊಡುತ್ತಿದ್ದ. ದಂಪತಿಗಳಿಬ್ಬರನ್ನೂ ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳುತ್ತಿದ್ದು, ದೈಹಿಕ ಕಿರುಕುಳ ನೀಡುತ್ತಿದ್ದ. ಇದೆಲ್ಲವನ್ನು ಪರಿಶೀಲನೆ ನಡೆಸಿರುವ ತಹಶೀಲ್ದಾರ್ ಸೋಮಶೇಖರ್ ಮಾಲೀಕ ಮುರಳಿ ಎಂಬಾತನ ವಿರುದ್ಧ ಬೆಸಗರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿರುವ ಸಂತ್ರಸ್ತರು, “ಏಳು ವರ್ಷಗಳ ಹಿಂದೆ ಸ್ನೇಹಿತರ ಸಂಪರ್ಕದ ಮೂಲಕ ಮುಂಗಡ ಹಣ ಪಡೆದು ಪ್ರತೀ ದಿನಕ್ಕೆ ತಲಾ 250 ರೂಗಳ ಕೂಲಿಯಂತೆ ಅಲ್ಲಿ ಕೆಲಸಕ್ಕೆ ಸೇರಿದ್ದೆವು. ಅಂದರೆ ಪ್ರತೀ ತಿಂಗಳಿಗೆ ಇಬ್ಬರಿಗೂ ಸೇರಿ 15 ಸಾವಿರ ಸಂಬಳವನ್ನು ಕೊಡುವುದಾಗಿ ಹೇಳಿದ್ದರು. ಆದರೆ, ನಾಲ್ಕೈದು ಸಾವಿರದ ಮೇಲೆ ಸಂಬಳ ಕೊಟ್ಟೇ ಇಲ್ಲ. ಬೆಳಗ್ಗೆಯಿಂದ ಸಂಜೆವರೆಗೆ ಕೆಲಸ ಮಾಡಬೇಕಿತ್ತು. ಕೆಲಸದಲ್ಲಿ ತಡವಾದರೆ ಹೊಡೆಯುವುದು ಮತ್ತು ಬೈಯ್ಯುವುದು ಮಾಡುತ್ತಿದ್ದರು” ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇದನ್ನು ಓದಿದ್ದೀರಾ? ಬೆಳಗಾವಿ | ಅಗ್ನಿ ಅವಘಡದಿಂದ ಯುವಕ ಸಾವು; ಪರಿಹಾರಕ್ಕೆ ಆಗ್ರಹ
ಜೀತ ಪ್ರಕರಣದ ಕುರಿತು ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ ಮಂಡ್ಯ ಎಸಿ ಶಿವಮೂರ್ತಿ, “ಜೀತ ಸಂತ್ರಸ್ತರನ್ನು ರಕ್ಷಿಸಿ, ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ. ಮಾಲೀಕನ ಮೇಲೆ ಬೆಸಗರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅಟ್ರಾಸಿಟಿ ದೂರು ಕೂಡ ದಾಖಲಾಗಿದೆ. ಜಿಲ್ಲಾಡಳಿತ ವತಿಯಿಂದ ಸಂತ್ರಸ್ತ ದಂಪತಿಗೆ ತಲಾ 25 ಸಾವಿರ ಪರಿಹಾರ ನೀಡುತ್ತಿದ್ದು, ಜೀತ ವಿಮುಕ್ತಿ ಪ್ರಮಾಣಪತ್ರವನ್ನು ಕೊಡಲಾಗಿದೆ” ಎಂದು ತಿಳಿಸಿದ್ದಾರೆ.