ಮಂಗಳೂರಿಗೆ ಮುಕುಟಪ್ರಾಯವಾದ ‘ಪ್ರಜಾಸೌಧ’; ಅಭಿವೃದ್ಧಿ ಕಾರ್ಯ ನಿಂತಿದೆ ಎಂದವರಿಗೆ ಉತ್ತರ

Date:

Advertisements

2018ರಿಂದ 2023ರವರೆಗೆ ಹಲವು ಅಡೆ, ತಡೆ, ವಿರೋಧ, ಸವಾಲುಗಳನ್ನು ಎದುರಿಸುತ್ತಿದ್ದ ಕಟ್ಟಡ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗುತ್ತಿತ್ತು. ಆದರೆ, ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುತುವರ್ಜಿಯಿಂದ ‘ಪ್ರಜಾಸೌಧ’ ಮೇ 16ರಂದು ಲೋಕಾರ್ಪಣೆಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕನಸಿನ ಯೋಜನೆಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ ಸಾರ್ವಜನಿಕರ ಬಳಕೆಗೆ ತೆರೆದುಕೊಂಡಿದೆ. ಮಂಗಳೂರು ನಗರದ ಹೆಬ್ಬಾಗಿಲು ಪಡೀಲ್‌ನಲ್ಲಿ ನಿರ್ಮಾಣವಾದ ಈ ಭವ್ಯ ಸೌಧ, ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಹೆಗ್ಗುರುತಾಗಿ ಪ್ರಸಿದ್ಧಿ ಪಡೆಯಲಿದೆ. ಇದು ಮಾಜಿ ಸಚಿವ ಬೆಳ್ಳಿಪಾಡಿಗುತ್ತು ರಮಾನಾಥ ರೈ ಅವರ ಕನಸಿನ ಸೌಧ ಎಂದರೆ ತಪ್ಪಾಗದು. ಈ ಸೌಧ ಕಟ್ಟಲು 2015ರಲ್ಲಿ ಮಂಗಳೂರು ಉಸ್ತುವಾರಿ ಸಚಿವರಾಗಿದ್ದ ಬಿ ರಮಾನಾಥ ರೈ ಬಹಳಷ್ಟು ಪ್ರಯತ್ನಪಟ್ಟಿದ್ದರು. ಪೂರ್ಣಗೊಳ್ಳುವ ಮುನ್ನವೇ ಸರ್ಕಾರ ಬದಲಾಗಿತ್ತು. ರೈಗಳು ಸೋತಿದ್ದರು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಸಂಪೂರ್ಣವಾಗಿ ನಿಂತು ಹೋಗಿತ್ತು. ಪೂರ್ಣಗೊಳಿಸಲು ಮತ್ತೆ ಕಾಂಗ್ರೆಸ್‌ ಸರ್ಕಾರ ಬರಬೇಕಾಯ್ತು.

siddu 13

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಮಿನಿ ವಿಧಾನ ಸೌಧ, ಬಸ್ಸು ನಿಲ್ದಾಣ, ಪಾರ್ಕ್, ಪ್ರಮುಖ ರಸ್ತೆಗಳು, ಕುಡಿಯುವ ನೀರು, ಸೇತುವೆ, ಅಣೆಕಟ್ಟು, ಆಸ್ಪತ್ರೆಗಳು ಸಹಿತ ಜಿಲ್ಲೆಗೆ ಹಲವಾರು ಶಾಶ್ವತ ಅಭಿವೃದ್ಧಿ ಯೋಜನೆಗಳನ್ನು ತಂದಿರುವ ಮಾಜಿ ಸಚಿವ ರಮಾನಾಥ ರೈ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಆರಂಭದಿಂದಲೂ ಹತ್ತು ಹಲವು ಅಡೆ-ತಡೆ, ವಿರೋಧಗಳು ಎದುರಾದರೂ ಅವುಗಳನ್ನು ಹಿಮ್ಮೆಟ್ಟಿಸಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ನಿನ್ನೆ ಉದ್ಘಾಟನಾ ವೇದಿಕೆಯಲ್ಲಿಯೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಮಾನಾಥ ರೈ ಪಟ್ಟು ಹಿಡಿದು ಈ ಯೋಜನೆ ಆರಂಭಕ್ಕೆ ಕಾರಣರಾಗಿದ್ದರು ಎಂಬುದನ್ನು ನೆನಪು ಮಾಡಿಕೊಂಡಿದ್ದಾರೆ.

Advertisements

2014ರಲ್ಲಿ ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ರಮಾನಾಥ ರೈ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ, ಪಡೀಲ್‌ನ 5.8 ಎಕರೆ ಜಾಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಮಂಜೂರಾತಿ ನೀಡಿತ್ತು. 2014ರಲ್ಲಿ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದ್ದರೂ, ಅರಣ್ಯ ಇಲಾಖೆಯಿಂದ ಜಾಗದ ಹಸ್ತಾಂತರ ಸವಾಲಾಗಿತ್ತು. ಅಲ್ಲಿದ್ದ ಮರಗಳನ್ನು ಕಡಿಯುವುದರ ವಿರುದ್ಧ ಪರಿಸರವಾದಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಸ್ವತಃ ಅರಣ್ಯ ಸಚಿವರಾಗಿದ್ದ ರಮಾನಾಥ ರೈ, ಜಾಗ ಹಸ್ತಾಂತರ ಮಾಡಿಸಿ, ನ್ಯಾಯಾಲಯದ ವ್ಯಾಜ್ಯ ಮುಗಿಸಿ, 2018ರಲ್ಲಿ ಗೃಹ ನಿರ್ಮಾಣ ಮಂಡಳಿಗೆ ಕಟ್ಟಡ ನಿರ್ಮಾಣದ ಹೊಣೆ ನೀಡುವಲ್ಲಿ ಪಾತ್ರ ವಹಿಸಿದ್ದರು.

2018ರಿಂದ 2023ರವರೆಗೆ ಹಲವು ಅಡೆ, ತಡೆ, ವಿರೋಧ, ಸವಾಲುಗಳನ್ನು ಎದುರಿಸುತ್ತಿದ್ದ ಕಟ್ಟಡ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗುತ್ತಿತ್ತು. ಆದರೆ, ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುತುವರ್ಜಿಯಿಂದ ಪ್ರಜಾಸೌಧ ಲೋಕಾರ್ಪಣೆಗೊಂಡಿದೆ.

ಆರಂಭದಲ್ಲಿ ಕರ್ನಾಟಕ ಗೃಹ ಮಂಡಳಿಯು (ಕೆಎಚ್‌ಬಿ) ಈ ಕಟ್ಟಡ ಸಂಕೀರ್ಣಕ್ಕೆ 2015ರಲ್ಲಿ ₹65 ಕೋಟಿ ಪ್ರಸ್ತಾವ ಸಿದ್ಧಪಡಿಸಿತ್ತು. ಬಳಿಕ ಯೋಜನಾ ವೆಚ್ಚವನ್ನು ₹41 ಕೋಟಿಗೆ ಪರಿಷ್ಕರಿಸಿ ಸರ್ಕಾರ ಈ ಕಾಮಗಾರಿಗೆ 2017ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇದರಲ್ಲಿ ₹30 ಕೋಟಿಯನ್ನು ಕಂದಾಯ ಇಲಾಖೆ, ₹7 ಕೋಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ₹3 ಕೋಟಿಯನ್ನು ಕಾರ್ಮಿಕ ಇಲಾಖೆ ಹಾಗೂ ₹1 ಕೋಟಿಯನ್ನು ಸಣ್ಣ ನೀರಾವರಿ ಇಲಾಖೆ ಭರಿಸಿದ್ದವು. ಬಳಿಕ ಯೋಜನಾ ವೆಚ್ಚವನ್ನು ₹56 ಕೋಟಿಗೆ ಪರಿಷ್ಕರಿಸಲಾಗಿತ್ತು. ಇದು ಮತ್ತೆ ಪರಿಷ್ಕರಣೆಯಾದದ್ದರಿಂದ ₹75 ಕೋಟಿಗೆ ಏರಿಕೆಯಾಗಿತ್ತು. ಕಟ್ಟಡ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸ್ಮಾರ್ಟ್ ಸಿಟಿ ಯೋಜನೆಯ ₹20 ಕೋಟಿಯನ್ನು ಬಳಸಲಾಗಿದೆ. ಉಳಿದ ಮೊತ್ತ 5 ಕೋಟಿ ರೂ.ಯನ್ನು ಕಂದಾಯ ಇಲಾಖೆ ನೀಡಿದೆ.

ಅರ್ಬನ್‌ ಜಂಗಲ್‌ ಆಗಿತ್ತು: ಕಂದಾಯ ಸಚಿವ ಕೃಷ್ಣಬೈರೇಗೌಡ
ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಯೋಜನೆಯ ಆರಂಭದಿಂದ ಕೊನೆಯವರೆಗೆ ಏನೇನಾಯ್ತು ಎಂದು ವಿವರಿಸಿದ್ದಾರೆ. “2015ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 42 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಅನುಮೋದನೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾ ಸೌಧ’ದ ಕಾಮಗಾರಿ 2018ರಲ್ಲಿ ಆರಂಭಗೊಂಡಿತ್ತು. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ 2019ರಿಂದ 2023ರ ವರೆಗೆ ಯಾವ ಕಾಮಗಾರಿಯೂ ನಡೆಯದೆ ಸಂಪೂರ್ಣವಾಗಿ ನಿಂತಿತ್ತು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಮನವಿಯ ಮೇರೆಗೆ ನಾನು 2023ರಲ್ಲಿ ಇಲ್ಲಿಗೆ ಭೇಟಿ ನೀಡಿ ಈ ಕಟ್ಟಡದ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದೆ. ಆಗ ಈ ಜಾಗ ಗಿಡ ಗಂಟೆಗಳು ಬೆಳೆದು ಅರ್ಬನ್ ಜಂಗಲ್ ಆಗಿ ಮಾರ್ಪಟ್ಟಿತ್ತು. ಈ ಕಟ್ಟಡವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ನಾನು ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿ ಜೊತೆ, ಮುಂದಿನ ಕಾಮಗಾರಿ ನಡೆಸಲು ಅನುದಾನ ನೀಡುವಂತೆ ಕೇಳಿಕೊಂಡೆವು. ಅವರ ಸೂಚನೆಯ ಮೇರೆಗೆ ನಗರಾಭಿವೃದ್ಧಿ ಸಚಿವರು ತಮ್ಮ ಅನುದಾನದಲ್ಲಿ 20 ಕೋಟಿ ರೂ., ಕಂದಾಯ ಇಲಾಖೆಯಿಂದ ನಾನು ನೀಡಿದ 5 ಕೋಟಿ ರೂ. ಸೇರಿ ಒಟ್ಟು 75 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡವನ್ನು ಪೂರ್ಣಗೊಳಿಸಿ ನಾವು ಇಂದು ನಿಮಗೆ ಸಮರ್ಪಿಸುತ್ತಿದ್ದೇವೆ. ಪ್ರಜೆಗಳಿಗೆ ಸೇವೆ ಮಾಡಲು ಈ ಸೌಧ ನಿರ್ಮಿಸಲಾಗಿದೆ. ನಮ್ಮ ಸರಕಾರಕ್ಕೆ ಎರಡು ವರ್ಷ ಪೂರೈಸುವ ಈ ಸುಸಂದರ್ಭದಲ್ಲಿ ದ.ಕ. ಜಿಲ್ಲೆಯ ಜನರಿಗೆ ಈ ಕಟ್ಟಡವನ್ನು ಸಮರ್ಪಣೆ ಮಾಡುತ್ತಿದ್ದೇವೆ. ಪಾಳು ಬಿದ್ದಿದ್ದ, ಕಾಡು ಬೆಳೆದಿದ್ದ ಈ ಜಾಗವನ್ನು ಎಲ್ಲರು ಕಣ್ಣು ಹಾಯಿಸಿ ನೋಡುವಂತೆ ಸುಂದರವಾಗಿ ಕಟ್ಟಡ ನಿರ್ಮಿಸಿ ಪೂರ್ಣಗೊಳಿಸಿದ್ದೇವೆ. ಇದು ಇಡೀ ಮಂಗಳೂರು ನಗರಕ್ಕೆ ಮೆರುಗು ನೀಡುತ್ತಿರುವ ಪ್ರಜಾಸೌಧ ದಕ್ಷಿಣ ಕನ್ನಡ ಜಿಲ್ಲೆಯ ಮುಕುಟವಾಗಿದೆ. ತುಳುನಾಡಿನ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಇದು ನಮ್ಮ ಸರಕಾರದ ಎರಡು ವರ್ಷದ ಸೇವೆಯ ಸಮರ್ಪಣೆಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ತನು, ಮನ, ಧನದ ಮೂಲಕ ಹಗಲು ರಾತ್ರಿ ಎನ್ನದೆ ದುಡಿದು ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಜನಗಳಿಗೆ ನಮ್ಮ ಸೇವೆ ಸಮರ್ಪಿಸಲು ನಾವು ಸಂಕಲ್ಪ ಮಾಡಿದ್ದೇವೆ” ಎಂದು ಹೇಳಿದ್ದಾರೆ.

WhatsApp Image 2025 05 17 at 4.32.14 PM

ಈ ಪ್ರಜಾಸೌಧ ನಿರ್ಮಾಣದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌, ಬೈರತಿ ಸುರೇಶ್‌ ಇವರೆಲ್ಲರ ಸಂಘಟಿತ ಪ್ರಯತ್ನ ಎದ್ದು ಕಾಣುತ್ತಿದೆ.

ಮೂರು ಮಹಡಿಗಳ 2.53 ಲಕ್ಷ ಚದರ ಅಡಿ ವಿಸ್ತೀರ್ಣದ ಈ ಕಟ್ಟಡದಲ್ಲಿ 22 ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸಲಿದೆ. ತಳ ಅಂತಸ್ತಿನಲ್ಲಿ ಮಂಗಳೂರು ಒನ್, ಆರ್ಥಿಕ ಸಂಖ್ಯಾಶಾಸ್ತ್ರ ಇಲಾಖೆ, ಅಂಚೆ ಕಚೇರಿ, ಪೊಲೀಸ್ ಚೌಕಿ, ಕ್ಯಾಂಟೀನ್ ಸಹಿತ 17 ವಿಭಾಗ ಇರಲಿವೆ. ನೆಲ ಮಹಡಿಯಲ್ಲಿ ಮಾಹಿತಿ ಕೇಂದ್ರ, ಅರಣ್ಯ ಕೈಗಾರಿಕಾ ನಿಗಮ, ಉಸ್ತುವಾರಿ ಸಚಿವರ ಕ್ಯಾಬಿನ್, ನೋಂದಣಾಧಿಕಾರಿ, ಆಹಾರ, ಗಣಿ ಸಹಿತ 19 ಕೊಠಡಿ ಹಂಚಿಕೆ ಮಾಡಲಾಗಿದೆ. ಪ್ರಥಮ ಮಹಡಿಯಲ್ಲಿ ಹಳೆ ಡಿಸಿ ಕಚೇರಿಯಲ್ಲಿದ್ದ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ, ಸಭಾಂಗಣ, ಭೂ ದಾಖಲೆ ಕಚೇರಿ, ಕಂದಾಯ ಶಾಖೆ ಸಹಿತ 24 ಕೊಠಡಿ ನೀಡಲಾಗಿದೆ.

ಎರಡನೇ ಮಹಡಿಯಲ್ಲಿ ಸರಕಾರಿ ವಿಮಾ ಇಲಾಖೆ, ದೇವರಾಜ್ ಅರಸು ನಿಗಮ, ಖಾದಿ ಮಂಡಳಿ, ಅಭಿಲೇಖಾಲಯ, ಪ್ರವಾಸೋದ್ಯಮ ಇಲಾಖೆ, ನಿರ್ಮಿತಿ ಕೇಂದ್ರ ಸಹಿತ 42 ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ಮೂರನೇ ಮಹಡಿ ಟೆರೇಸ್‌ನಲ್ಲಿ ಬಹಳಷ್ಟು ಜಾಗವಿದ್ದು, ಇಲ್ಲೂ ಪಾರ್ಟಿಶನ್ ಮಾಡಬಹುದು. ಕೆಳಗೆ 50 ಕಾರು, 100ಕ್ಕೂ ಅಧಿಕ ದ್ವಿಚಕ್ರ ವಾಹನ ಪಾರ್ಕಿಂಗ್, ಕಟ್ಟಡದ ಸುತ್ತಲೂ 70 ಕಾರು ಪಾರ್ಕಿಂಗ್ ವ್ಯವಸ್ಥೆ ಇದೆ. ಕಟ್ಟಡಕ್ಕೆ ನಾಲ್ಕು ಲಿಫ್ಟ್ ಮತ್ತು ಹತ್ತಲು ಮೆಟ್ಟಿಲು ವ್ಯವಸ್ಥೆ ಮಾಡಲಾಗಿದೆ.

rai bantwal

ರಮಾನಾಥ ರೈ ಜಿಲ್ಲೆಗೆ ನೀಡಿದ ಬಹುದೊಡ್ಡ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಮಾಜಿ ಸಚಿವ ರಮಾನಾಥ ರೈ ಅವರ ಕೊಡುಗೆ ಅಪಾರವಾದದ್ದು. ಇದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇರುವ ಆಸ್ಪತ್ರೆಗಳು, ಬಸ್ಸು ನಿಲ್ದಾಣಗಳು, ಕುಡಿಯುವ ನೀರಿನ ಘಟಕಗಳು, ರಸ್ತೆ ಮೊದಲಾದ ಅಭಿವೃದ್ಧಿ ಕಾರ್ಯಗಳು ರಾಮಾನಾಥ ರೈ ಅವರ ಪರಿಶ್ರಮದ ಫಲಗಳು‌. ನಿನ್ನೆ ಮಂಗಳೂರಿನಲ್ಲಿ ಉದ್ಘಾಟನೆಗೊಂಡ ಜಿಲ್ಲಾಧಿಕಾರಿ ಕಚೇರಿ ರಮಾನಾಥ ರೈ ಜಿಲ್ಲೆಗೆ ತಂದ ಬಹು ದೊಡ್ಡ ಕೊಡುಗೆಯಾಗಿದೆ. ಅವರ ಕನಸು ನನಸಾಗಿದೆ.
ಬೇಬಿ ಕುಂದರ್, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ

ವೈಯಕ್ತಿಕವಾಗಿ ನನಗೆ ಖುಷಿ ತಂದಿದೆ

ಪಶ್ಚಿಮ ವಾಹಿನಿ ಯೋಜನೆ, ಪಶು ವೈದ್ಯಕೀಯ ಕಾಲೇಜು, ಅಂಬೇಡ್ಕರ್ ಭವನ, ಮಿನಿ ವಿಧಾನ ಸೌಧಗಳು ಸೇರಿದಂತೆ ಹಲವು ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಗೆ ನೀಡುವ ಮೂಲಕ ನನ್ನ ಬೇಡಿಕೆಯ ಬಹುಭಾಗವನ್ನು ಅವರು ಈಡೇರಿಸಿದ್ದಾರೆ. ದ.ಕ. ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಮಾಡಬೇಕು ಎಂಬುದು ನನ್ನ ಬಹುದೊಡ್ಡ ಕನಸಾಗಿತ್ತು. ಈ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂದು ಕೆಲವರು ನ್ಯಾಯಾಲಯಕ್ಕೆ ಹೋದ ಕಾರಣ ಕಟ್ಟಡ ನಿರ್ಮಾಣ ಕಾರ್ಯ ಎರಡು ವರ್ಷ ತಡವಾಗಿದೆ. ಆದರೆ ಅವೆಲ್ಲವನ್ನು ಮೀರಿ ಅಂದು ಈ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಿದ ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಈ ಕಟ್ಟಡ ಉದ್ಘಾಟನೆ ಮಾಡಿರುವುದು ವೈಯಕ್ತಿಕವಾಗಿ ನನಗೆ ಹಾಗೂ ನಮ್ಮ ಜಿಲ್ಲೆಯ ಜನರಿಗೆ ಸಂತೋಷ ಇದೆ. ಈ ದಿನ ನಮ್ಮೆಲ್ಲರ ಖುಷಿಯ ದಿನವಾಗಿದೆ.
ರಮಾನಾಥ ರೈ, ಮಾಜಿ ಸಚಿವರು

WhatsApp Image 2025 05 08 at 16.45.05 70e5a46e
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ತುರುಕರಿಗೆ ಮತ್ತು ಗುಲಾಮರಿಗೆ ಮಾತ್ರ ಪ್ರಜಾಸೌಧ ಅಭಿವೃಧಿ ಕಾರ್ಯ ವಾಗಿ ಕಾಣಬೇಕು ಇದು ಅವರ ಜ್ಞಾನದ ಕೊರತೆ ಎದ್ದು ಕಾಣುತ್ತದೆ, ಕಟ್ಟಡದಲ್ಲಿ ಅಭಿವೃಧಿ ಸುಸಜ್ಜಿತ ಜಿಲ್ಲಾಧಿಕಾರಿ ಕಛೇರಿ ಕೊಪ್ಪಳ, ಗದಗ ಬೆಳಗಾಂ ಎಷ್ಟೋ ವರುಷದ ಹಿಂದೆಯೇ ಬಂದಿದೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

Download Eedina App Android / iOS

X