ಲೈಂಗಿಕ ದೌರ್ಜನ್ಯ ಹಗರಣದ ಆರೋಪಿ, ತಲೆಮರೆಸಿಕೊಂಡಿರುವ ಹಾಸನ ಸಂಸದ, ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಶನಿವಾರ ಮೊದಲ ಬಂಧನ ವಾರಂಟ್ ಜಾರಿಯಾಗಿದೆ.
ಪ್ರಜ್ವಲ್ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧನ ವಾರಂಟ್ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಅನುಮೋದಿಸಿರುವ ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.
ಅತ್ಯಾಚಾರ ಸೇರಿದಂತೆ ಮೂರು ಪ್ರಕರಣಗಳನ್ನು ಎದುರಿಸುತ್ತಿರುವ ಪ್ರಜ್ವಲ್ ವಿರುದ್ಧದ ವಾರಂಟ್, ಅವರ ಪಾಸ್‌ಪೋರ್ಟ್ ರದ್ದುಪಡಿಸುವ ಮೊದಲ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಈ ವಾರೆಂಟ್ ಪ್ರಜ್ವಲ್ ಭಾರತಕ್ಕೆ ಮರಳಬೇಕೆಂದು ಸೂಚಿಸುತ್ತದೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದ ಏಪ್ರಿಲ್ 26ಕ್ಕೂ ಎರಡು ದಿನಗಳ ಮುನ್ನ ಕೆಲವು ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದವು. ಅವುಗಳು ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿತ್ತು. ಪ್ರಜ್ವಲ್ ನೂರಾರು ಮಹಿಳೆಯರನ್ನು ಹೆದರಿಸಿ, ಬೆದರಿಸಿ, ಪುಸಲಾಯಿಸಿ ತನ್ನ ಲೈಂಗಿಕ ವಾಂಚೆ ತೀರಿಸಿಕೊಂಡಿದ್ದ ಎಂದು ಸುದ್ದಿಯಾಗಿತ್ತು.
ಏಪ್ರಿಲ್ 26ರಂದು ಮತದಾನ ಮುಗಿಯುತ್ತಿದ್ದಂತೆಯೇ ಆತ ದೇಶಬಿಟ್ಟು ಪರಾರಿಯಾಗಿದ್ದಾರೆ. ಆತನ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ನೀಡಿದೆ. ಆದರೆ, ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇತ್ತೀಚೆಗೆ ಆತ ಲಂಡನ್‌ಗೆ ಹೋಗಿರುವುದಾಗಿ ವರದಿಯಾಗಿದೆ. ಇನ್ನು, ಪ್ರಜ್ವಲ್‌ನ ಬ್ಯಾಂಕ್ ಖಾತೆ ವಿವರಗಳನ್ನು ಕಲೆಹಾಕಿರುವ ಎಸ್‌ಐಟಿ ಅಧಿಕಾರಿಗಳು ಆತನ ಏಳು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಖಾತೆಗಳಿಗೆ ಹಣ ಹಾಕಿರುವವರ ಬಗ್ಗೆಯೂ ತಂಡ ಮಾಹಿತಿ ಕಲೆಹಾಕುತ್ತಿದೆ.