ಔರಾದ್ ತಾಲ್ಲೂಕಿನ ಜಕನಾಳ ಎಂಬ ಗಡಿ ಗ್ರಾಮದ 16 ವರ್ಷದ ಕೋಗಿಲೆ ಕಂಠದ ಪ್ರಕೃತಿಯ ಗಾಯನಕ್ಕೆ ತಲೆತೂಗದ ಸಂಗೀತ ಪ್ರೇಮಿಗಳಿಲ್ಲ ಎನ್ನಬಹುದು.
ಕಾಶಿನಾಥ್ ಹಾಗೂ ಶ್ರೀದೇವಿ ಮೇತ್ರೆ ಅವರ ಪುತ್ರಿ ಪ್ರಕೃತಿ ಸದ್ಯ ಔರಾದ್ ತಾಲ್ಲೂಕಿನ ವನಮಾರಪಳ್ಳಿ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ವಿದ್ಯಾರ್ಥಿನಿ ಪ್ರಕೃತಿ ಕನ್ನಡ, ಹಿಂದಿ ಭಕ್ತಿಗೀತೆ, ಭಾವಗೀತೆ ಹಾಗೂ ಚಿತ್ರಗೀತೆಗಳನ್ನು ಸುಮಧುರವಾಗಿ ಹಾಡುತ್ತಾಳೆ. ಅವಳ ಪ್ರತಿಭೆ ಗುರುತಿಸಿದ ಶಾಲೆಯ ಶಿಕ್ಷಕರು ಉತ್ಸಾಹ ತುಂಬುತ್ತಿದ್ದಾರೆ.
ʼಸೂಜಿಗಾದ ಸೂಜು ಮಲ್ಲಿಗೆ…ಮಾದೇವಾ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆʼ, ನೀನೇ ಮೊದಲು ನೀನೆ ಕೊನೆ ಬೇರೆ ಯಾರು ಬೇಡ ನನಗೆ ಎಂಬ ಜಾನಪದ, ಚಿತ್ರಗೀತೆ ಹಾಡು ಪ್ರಕೃತಿ ಮಧುರ ಕಂಠದಿಂದ ಹೊರಡುತ್ತಿದ್ದಂತೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
‘ಜಬ್ ಮೈ ಬಾದಲ್ ಬನ್ ಜಾನಾ ತುಮ್ ಭೀ ಬಾರಿಶ್ ಬನ್ ಜಾನಾ, ಜೊ ಕಮ್ ಪಡ್ ಜಾಯೇ ಸಾಂಸೇ ತು ಮೇರಾ ದಿಲ್ ಬನ್ ಜಾನಾ’ ಎಂಬ ʼಬಾರಿಸ್ʼ ಹಿಂದಿ ಚಲನಚಿತ್ರ ಗೀತೆಗಳು ಸಂಗೀತ ಪ್ರಿಯರ ಮನಸ್ಸು ಗೆದ್ದಿದೆ.
ಬಡ ಕುಟುಂಬದ ಹಿನ್ನಲೆಯ ಪೃಕೃತಿ ಎಲ್ಲಿಯೂ ಸಂಗೀತ ಕಲಿತವರಲ್ಲ. ಮನೆಯಲ್ಲಿ ಅಕ್ಕಂದಿಯರು ಹಾಡುವ ಹಾಡು ಕೇಳಿ, ಅದು ನೆನಪಿನಲ್ಲಿ ಇಟ್ಟುಕೊಂಡು ಸಂಗೀತದ ಮೇಲೆ ಒಲವು ಬೆಳೆಸಿಕೊಂಡಿದ್ದಳು. ಪ್ರಾಥಮಿಕ ತರಗತಿಯಿಂದಲೇ ಸಂಗೀತವನ್ನು ಹವ್ಯಾಸವಾಗಿಸಿಕೊಂಡು ಆಸಕ್ತಿಯಿಂದ ಹಾಡುಗಾರಿಕೆ ಮಾಡುವ ಕಲೆ ಕರಗತ ಮಾಡಿಕೊಂಡಳು.
ʼಪ್ರತಿಭಾ ಕಾರಂಜಿ ಸೇರಿದಂತೆ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಗಾಯನದ ಮೂಲಕ ಸೈ ಎನಿಸಿಕೊಂಡಿದ್ದಾಳೆ. ʼಜೀ ಕನ್ನಡʼ ವಾಹಿನಿ ನಡೆಸುವ ʼಸರಿಗಮಪʼ ಶೋಗಾಗಿ ಇತ್ತೀಚೆಗೆ ನಡೆದ ಆಡಿಷನ್‌ನ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಹಂತದಲ್ಲಿ ಆಯ್ಕೆಯಾಗಿ, ಬಳಿಕ ನಡೆದ ಎರಡನೇ ಆಯ್ಕೆ ಪಟ್ಟಿ ಆಯೋಜಕರು ತಿಳಿಸಲಿಲ್ಲʼ ಎಂದು ಶಿಕ್ಷಕರು ಹೇಳುತ್ತಾರೆ.
ʼನನ್ನ ಪೋಷಕರು ಕೂಲಿ ಕೆಲಸ ಮಾಡುತ್ತಾರೆ. ಆರು ಜನ ಅಕ್ಕಂದಿಯರಲ್ಲಿ ಅನನ್ಯ ಎಂಬ ಅಕ್ಕನ ಸಹಕಾರದಿಂದ ಮನೆಯಲ್ಲಿ ಸಂಗೀತ ಕಲಿಯುವ ವಾತಾವರಣ ನಿರ್ಮಿಸಿತು. ಬಳಿಕ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹಾಡು ಹೇಳುತ್ತಿದ್ದೆ. 6ನೇ ತರಗತಿಯಿಂದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಓದುತ್ತಿರುವೆ. ಇಲ್ಲಿಯೂ ಶಿಕ್ಷಕರು ನನ್ನ ಆಸಕ್ತಿಗೆ ಪ್ರೋತ್ಸಾಹ ನೀಡುತ್ತಿದ್ದಾರೆʼ ಎಂದು ವಿದ್ಯಾರ್ಥಿನಿ ಪ್ರಕೃತಿ ಹೇಳುತ್ತಾಳೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಸ್‌ಸಿಎಸ್‌ಪಿ / ಟಿಎಸ್‌ಪಿ ಅನುದಾನ ಬಳಕೆಯಾಗುತ್ತಿಲ್ಲವೇಕೆ?
ʼನಮ್ಮ ಶಾಲೆಯ ವಿದ್ಯಾರ್ಥಿನಿ ಪ್ರಕೃತಿ ಅತ್ಯುತ್ತಮ ಗಾಯನ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಇದು ನಮಗೆ ಹೆಮ್ಮೆ ತಂದಿದೆ. ಶಾಲೆಯಲ್ಲಿ ಸಂಗೀತ ಶಿಕ್ಷಕರ ಕೊರತೆಯಿರುವ ಕಾರಣ ಸದ್ಯ ಶಾಲೆಯ ವಿಷಯವಾರು ಶಿಕ್ಷಕರೇ ಪ್ರೋತ್ಸಾಹಿಸುತ್ತಿದ್ದಾರೆ. ವಿದ್ಯಾರ್ಥಿನಿ ಪ್ರಕೃತಿಗೆ ಸೂಕ್ತ ತರಬೇತಿ ಹಾಗೂ ನೆರವು ಸಿಕ್ಕರೆ ಅವಳು ಸಂಗೀತ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯುತ್ತಾಳೆʼ ಎಂದು ಮುಖ್ಯಗುರು ಶಿವಾಜಿ ಪವಾರ್ ಹೇಳುತ್ತಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.