ಚಾಮರಾಜನಗರದ ವಿವಿದೆಡೆ ಮೈಸೂರಿನ ರಾಜ ಮನೆತನಕ್ಕೆ ಸೇರಿದ 5,119 ಎಕರೆ ಖಾಸಗಿ ಸ್ವತ್ತನ್ನು ಖಾತೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಯವರಿಗೆ ರಾಜ ವಂಶಸ್ಥೆ ಪ್ರಮೋದದೇವಿ ಒಡೆಯರ್ ಪತ್ರ ಬರೆದಿದ್ದಾರೆ.
ನಗರ ಸುತ್ತಮುತ್ತಲಿನ ” ಅಟ್ಟಗೂಳಿಪುರದಲ್ಲಿ 4,445 ಎಕರೆ 33 ಗುಂಟೆ, ಹರದನಹಳ್ಳಿ ಸರ್ವೇ ನಂಬರ್ 124,125, 133, 134, 135,169,184,463 ರಲ್ಲಿ 130 ಎಕರೆ 3 ಗುಂಟೆ, ಬೂದಿತಿಟ್ಲು ಗ್ರಾಮದ ಸರ್ವೇ ನಂಬರ್ 117 ರಲ್ಲಿ 63 ಎಕರೆ 39 ಗುಂಟೆ, ಕರಡಿಹಳ್ಳ ಗ್ರಾಮ ಸರ್ವೇ ನಂಬರ್ 1, 2, 3 ರಲ್ಲಿ 76 ಎಕರೆ 23 ಗುಂಟೆ, ಕನ್ನಿಕೆರೆ ಗ್ರಾಮ ಸರ್ವೇ ನಂಬರ್ 1, 2, 3 ರಲ್ಲಿ 190 ಎಕರೆ 4 ಗುಂಟೆ, ಉಮ್ಮತ್ತೂರು ಗ್ರಾಮದ ಸರ್ವೇ ನಂಬರ್ 563 ರಲ್ಲಿ 199 ಎಕರೆ 27 ಗುಂಟೆ, ಬಸವಪುರ ಗ್ರಾಮದ ಸರ್ವೇ ನಂಬರ್ 143 ರಲ್ಲಿ 13 ಎಕರೆ ಸೇರಿದಂತೆ ಮಹಾರಾಜರ ಜನನ ಮಂಟಪ, ಉದ್ಯಾನವನ ಸೇರಿದಂತೆ ಒಟ್ಟು 5,119 ಎಕರೆ ಸ್ವತ್ತನ್ನು ಜನವರಿ 23, 1950 ರ ಮೈಸೂರು ಮಹಾರಾಜರು ಹಾಗೂ ಕೇಂದ್ರ ಸರ್ಕಾರ ಒಪ್ಪಂದದ ಪ್ರಕಾರ ಖಾತೆ ಮಾಡಿಕೊಡುವಂತೆ, ಬೇರೆ ಯಾರಿಗೂ ಖಾತೆ ಮಾಡದಂತೆ, ಕಂದಾಯ ಗ್ರಾಮವಾಗಿ ಘೋಷಣೆ ಮಾಡದೆ, ವಹಿವಾಟಿಗೆ ಅವಕಾಶ ಕಲ್ಪಿಸದ ಹಾಗೆ ತಕರಾರು ಅರ್ಜಿ ” ಸಮೇತ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಅವರು ಅರ್ಜಿಯನ್ನು ನೋಂದಾಯಿತಾ ಅಂಚೆ ಮೂಲಕ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಭೂ ದಾಖಲೆಗಳ ನಿರ್ದೇಶಕರು ಹಾಗೂ ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಪತ್ರಿಕೆ ಸಮಾಜದ ಪ್ರತಿಬಿಂಬ : ಡಾ. ಕೂಡ್ಲಿ ಗುರುರಾಜ
ಮೈಸೂರು ರಾಜಮನೆತನಕ್ಕೆ, ಮಹಾರಾಜರಿಗೆ ಸೇರಿದ ಖಾಸಗಿ ಸ್ವತ್ತು ಎನ್ನಲಾದ ಆಸ್ತಿಗಳಿಗೆ ಸಂಬಂಧಪಟ್ಟ ಯಾವುದೇ ಮೂಲ ದಾಖಲೆ ಒದಗಿಸಿಲ್ಲ.ಹಾಗಾಗಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಚಾಮರಾಜನಗರ ತಹಶೀಲ್ದಾರ್ ಅವರಿಗೆ ಅರ್ಜಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ.