ಜೂನ್ 4 ರಂದು ನಡೆಯಲಿರುವ ಬೀದರ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಿಗೆ 10 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,”ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್‌ಗಳನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಮತ ಏಣಿಕೆ ಕೇಂದ್ರದ ಒಳಗಡೆ ಮೊಬೈಲ್‌ಗಳನ್ನು ತರದಂತೆ ಸೂಚಿಸಲಾಗಿದೆ” ಎಂದರು.
“ಪ್ರತಿ ಮತ ಎಣಿಕಾ ಕೇಂದ್ರಗಳಲ್ಲಿ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಅಭ್ಯರ್ಥಿಗಳು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಎಜೆಂಟರುಗಳನ್ನು 14 ಟೇಬಲ್‌ಗಳಿಗೆ ಹಾಗೂ 1 ಕಾಯ್ದಿರಿಸಿದ ಎಜೆಂಟರುಗಳನ್ನು ನೇಮಕ ಮಾಡುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. 3,628 ಅಂಚೆ ಮತಪತ್ರಗಳು ಇಲ್ಲಿಯವರೆಗೆ
ಸ್ವೀಕೃತವಾಗಿರುತ್ತವೆ. ಅಂಚೆ ಮತಪತ್ರಗಳ ಎಣಿಕೆಗೆ 7 ಟೇಬಲ್‌ಗಳ ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದರು.
“ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಮತ ಎಣಿಕಾ ಕೇಂದ್ರದಲ್ಲಿ ಹಾನಿಕಾರಕ ಸೇವನೆಗಳಾದ ವಿವಿಧ ರೀತಿಯ ತಂಬಾಕು, ಗುಟಕಾ, ಬೀಡಿ, ಸಿಗರೇಟ್, ಬೆಂಕಿ ಪೊಟ್ಟಣ, ಲೈಟರ್, ಮದ್ಯಪಾನ ಹಾಗೂ ವಿದ್ಯುನ್ಮಾನ ಯಂತ್ರಗಳಾದ ಸ್ಮಾರ್ಟ್‌ವಾಚ್, ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಮಾರಕಾಸ್ತ್ರಗಳಾದ ಗನ್, ಖಡ್ಗ, ಚಾಕು, ಚೂರಿ ಇತರೆ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಜೂನ್ 4 ರಂದು ಮತಗಟ್ಟೆಗಳ ಭದ್ರತಾ ಕೋಣೆಯು ಬೆಳಿಗ್ಗೆ 7.20ಕ್ಕೆ ತೆರೆಯಲಾಗುವುದು. ಬೆಳಿಗ್ಗೆ 8 ಗಂಟೆಗೆ ಪೋಸ್ಟಲ್ ಬ್ಯಾಲೆಟ್ ಮತ ಎಣಿಕೆ ಕಾರ್ಯ ಪ್ರಾರಂಭವಾಗುತ್ತದೆ. ಹಾಗೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ ಬೆಳಿಗ್ಗೆ 8.05ಕ್ಕೆ ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆ ಕಾರ್ಯ ಪ್ರಾರಂಭವಾಗುವುದು. ಮಾಧ್ಯಮ ಕೇಂದ್ರಗಳಲ್ಲಿ ಮಾತ್ರ ಪತ್ರಕರ್ತರಿಗೆ ಮೊಬೈಲ್ ಫೋನ್ ಬಳಸಲು ಅವಕಾಶವಿದ್ದು, ಮಾಧ್ಯಮ ಕೇಂದ್ರದಲ್ಲಿ ಅಳವಡಿಸಲಾದ ಸ್ಕ್ರೀನ್ ಮೇಲೆ 8 ವಿಧಾನಸಭಾ ಕ್ಷೇತ್ರಗಳ ಮತ ಏಣಿಕೆ ಫಲಿತಾಂಶವು ಪ್ರತಿ ಸುತ್ತಿನ ನಂತರ ಪ್ರಕಟಿಸಲಾಗುವುದು ಎಂದು ವಿವರಿಸಿದರು.
“ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನಲೆ ಜೂ.3ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ ಜೂ 5ರ ಬೆಳಿಗ್ಗೆ 6 ಗಂಟೆಯ ವರೆಗೆ ಬೀದರ ಜಿಲ್ಲಾದ್ಯಂತ ಶುಷ್ಕ ದಿನ ಘೋಷಿಸಿ ಮದ್ಯ ಮಾರಾಟ ನೀಷೇಧಿಸಲಾಗಿದೆ” ಎಂದರು.
“ನಗರದ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಜೂ.4 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಇರುವುದರಿಂದ ಕಾಲೇಜಿನ ಮುಖ್ಯದ್ವಾರದ ಎದುರುಗಡೆ ರಸ್ತೆ ಸಂಚಾರ ಬದಲಾವಣೆ ಮಾಡಲಾಗಿದ್ದು, ಮೈಲೂರ ಕ್ರಾಸ್‌ದಿಂದ ಗುಂಪಾ ಕಡೆ ಹೋಗುವ ವಾಹನಗಳು-ಮೈಲೂರ ಗ್ರಾಮ ಹಾಗೂ ಮೈಲೂರ್ ರಿಂಗ್ ರೋಡ್ ಮೂಲಕವಾಗಿ ತೆರಳುವುದು ಹಾಗೂ ಗುಂಪಾ ಕಡೆಯಿಂದ ಬೊಮ್ಮಗೊಂಡೇಶ್ವರ ವೃತ್ತದ ಕಡೆಗೆ ತೆರಳುವ ವಾಹನಗಳು-ಯೂನೈಟೆಡ್ ಆಸ್ಪತ್ರೆಯಿಂದ ಗುರುನಾನಕ ಶಾಲೆ ಕಡೆ ಹಾಗೂ ಮೈಲೂರ ಗ್ರಾಮದ ಮೂಲಕವಾಗಿ ರಸ್ತೆ ಮಾರ್ಗಗಳನ್ನು ಬದಲಾಯಿಸಲಾಗಿದೆ” ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, “ನಗರದ ಬಿ.ವ್ಹಿ.ಭೂಮರೆಡ್ಡಿ ಕಾಲೇಜಿನಲ್ಲಿ ನಡೆಯುವ ಲೋಕಸಭಾ ಚುನಾವಣೆ ಮತ ಎಣಿಕೆಗೆ ಅಗತ್ಯ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಕಾಲೇಜಿನ ಮೊದಲ ಗೇಟ್‌ನಿಂದ ಅಭ್ಯರ್ಥಿಗಳು ಹಾಗೂ ಎಜೆಂಟರಿಗೆ ಹೋಗಲು ಅವಕಾಶ ಮಾಡಲಾಗಿದೆ. ಎರಡನೇ ಗೇಟ್‌ನಿಂದ ಮತ ಎಣಿಕೆಗೆ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಪತ್ರಕರ್ತರಿಗೆ ಹೋಗಲು ಅವಕಾಶ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
ನಿಷೇಧಿತ ವಸ್ತುಗಳನ್ನು ಮತ ಎಣಿಕೆ ನಡೆಯುವ ಕೇಂದ್ರದ ಒಳಗಡೆ ತರದಂತೆ ಕಾಲೇಜಿನ ಎದುರುಗಡೆ ಬೋರ್ಡ್ ಹಾಕಲಾಗಿದೆ. ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿಗಳು ಐ.ಡಿ. ಕಾರ್ಡ್‌ಗಳನ್ನು ಧರಿಸಿ ಒಳಗಡೆ ಬರಬೇಕು ಎಂದು ಹೇಳಿದರು.
ಜೂ.3ರಂದು ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ :
ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ ಜೂ.3 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4ಗಂಟೆವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 26,786 ಮತದಾರರು ಇದ್ದು, ಇದರಲ್ಲಿ 16,622 ಪುರುಷ ಮತ್ತು 10,164 ಮಹಿಳಾ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
“ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಬೀದರ ಜಿಲ್ಲೆಯ ಒಟ್ಟು 8 ತಾಲೂಕುಗಳಲ್ಲಿ 33 ಮತಗಟ್ಟೆಗಳು ಸ್ಥಾಪಿಸಲಾಗಿದೆ. ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದು, ಮತ ಪತ್ರಗಳಲ್ಲಿ ಪ್ರಾಶಸ್ತ್ಯ ಮತದಾನದ ಮೂಲಕ ಮತ ಚಲಾಯಿಸಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಸಂವಿಧಾನದ 371(ಜೆ) ಕಲಂಗೆ ವಿರೋಧ; ಕಲಬುರಗಿಯಲ್ಲಿ ಸಿಡಿದ ಆಕ್ರೋಶ
ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಸುರೇಶ, ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು
ಉಪಸ್ಥಿತರಿದ್ದರು.