ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಔಷಧಿ ಚೀಟಿಯ ಹಾವಳಿ; ಚಿಕಿತ್ಸೆಗೆ ಹೊರಗಿನಿಂದ ಔಷಧಿ ತರಿಸಿದ ಆರೋಪ

Date:

Advertisements

ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಔಷಧಿ ಚೀಟಿಯ ಹಾವಳಿ ಹೆಚ್ಚಾಗಿದ್ದು, ರೋಗಿಗಳ ಚಿಕಿತ್ಸೆಗೆ ಹೊರಗಿನಿಂದ ಔಷಧಿ ತರಿಸಿದ ಆರೋಪ ಕೇಳಿಬಂದಿದೆ. ಬಡಜನರ ಆರೋಗ್ಯ ಸೇವೆ ಮತ್ತು ಅನುಕೂಲಕ್ಕಾಗಿ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿಗೆ ಬರುವ ಬಡ ಜನರನ್ನು ಔಷಧಿಗಳ ರೂಪದಲ್ಲಿ ಸುಲಿಗೆ ಮಾಡುತ್ತಿವೆಯೇ? ಎಂಬ ಆತಂಕ, ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.‌

ಸರ್ಕಾರಿ ಆಸ್ಪತ್ರೆಗಳಲ್ಲೂ ಔಷಧಿಗಳಿಗೆ ಹಣ ಕೊಡಬೇಕೆಂದರೆ ವ್ಯವಸ್ಥೆ ಮೇಲೆ ಸಾರ್ವಜನಿಕರು ನಂಬಿಕೆ ಇಡುವುದಾದರೂ ಹೇಗೆ.‌ ಎಲ್ಲದಕ್ಕೂ ತೆರಿಗೆ ಕಟ್ಟುವ ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೇರಿದಂತೆ ಔಷಧಗಳು ಉಚಿತವಾಗಿ ದೊರೆಯದಿದ್ದರೆ ಸರ್ಕಾರಿ ಆಸ್ಪತ್ರೆಗಳು ಇರುವ ಔಚಿತ್ಯವಾದರೂ ಏನು ಎನ್ನುವ ಪ್ರಶ್ನೆ ಸಾಮಾನ್ಯರಲ್ಲಿ ಕಾಡತೊಡಗಿದೆ.

ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಹೊರಗಿನಿಂದ ಔಷಧಿಗಳನ್ನು ತರಿಸಿದ ಆರೋಪ ಕೇಳಿಬಂದಿದ್ದು, ರೋಗಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕರು ಈ ಬಗ್ಗೆ ಕಿಡಿಕಾರಿದ್ದಾರೆ. ಮೂರು ದಿನಗಳಿಂದ ಚಿಗಟೇರಿ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನ ಪೋಷಕರನ್ನು ಭೇಟಿ ಮಾಡಿದ ವೇಳೆ ಈ ಮಾಹಿತಿ ಹೊರಬಿದ್ದಿದೆ. ಮೂರು ದಿನಗಳಿಂದ ಸರಿಸುಮಾರು ₹2000ದ ಔಷಧಗಳನ್ನು ಹೊರಗಿನಿಂದ ತರಿಸಲಾಗಿದೆ ಎನ್ನುವ ಆತಂಕದ ಮಾಹಿತಿ ಹೊರಬಿದ್ದಿದೆ.

Advertisements

“ಒಳರೋಗಿಯೊಬ್ಬರಿಗೆ ಚೀಟಿ ಕೊಟ್ಟು ಹೊರಗಿನಿಂದ ಆಂಟಿಬಯೋಟಿಕ್ ಔಷಧಿ ತರಿಸಿದ್ದಾರೆ. ಜಿಲ್ಲಾಸ್ಪತ್ರೆಯ ಫಾರ್ಮಸಿಯ ಔಷಧಿ ವಿತರಣೆ ಕೇಂದ್ರದಲ್ಲಿ ವಿಚಾರಿಸಿದಾಗ ಅವರು ‘ಈ ಔಷಧ ಲಭ್ಯವಿದೆ’ಯೆಂದು ಮಾಹಿತಿ ನೀಡಿದರು. ಹಾಗಾದರೆ ವಿತರಣಾ ಕೇಂದ್ರದಲ್ಲಿ ಲಭ್ಯವಿದ್ದ ಔಷಧಿಯನ್ನು ಚೀಟಿಕೊಟ್ಟು ಹೊರಗಿನಿಂದ ತನ್ನಿ ಎನ್ನುವ ಅಗತ್ಯವೇನಿದೆ. ಹೀಗಾದರೆ ಬಡವರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಾದರೂ, ಬದುಕುವುದಾದರೂ ಹೇಗೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಚಿಕಿತ್ಸೆ ಸಿಗುತ್ತದೆಂದು ಬಡವರು ಆಸ್ಪತ್ರೆಗೆ ದಾಖಲಾದರೆ, ದಾಖಲಾದ ನಂತರ ಹೊರಗೆ ಔಷಧಿ ತರಲು ಚೀಟಿ ಕೊಟ್ಟರೆ, ಹಣವಿಲ್ಲದ ಬಡಜನತೆ ಎಲ್ಲಿಗೆ ಹೋಗಬೇಕು. ಇದು ಬಡಜನತೆಯನ್ನು ವಂಚಿಸುವ, ಸುಲಿಗೆ ಮಾಡುವ ದಂಧೆಯಾಗಿದೆ” ಎಂದು ಸಾಮಾಜಿಕ ಕಾರ್ಯಕರ್ತ ಸುಹೇಲ್ ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಯ ವಾರ್ಡ್‌ನಲ್ಲಿದ್ದ ಇತರ ರೋಗಿಗಳನ್ನು ಈ ದಿನ.ಕಾಮ್‌ ಭೇಟಿ ಮಾಡಿದಾಗ ಬಹುತೇಕ ರೋಗಿಗಳಿಗೆ ಹೊರಗಿನಿಂದ ಔಷಧಿ ತರುವಂತೆ ಚೀಟಿ ಬರೆದು, ಆಸ್ಪತ್ರೆಯ ಹೊರಗಿನ ಔಷಧಿಗಳನ್ನು ತರಿಸಿ ಚಿಕಿತ್ಸೆ ನೀಡಿರುವ ಮಾಹಿತಿಯನ್ನು ರೋಗಿಗಳು ಮತ್ತು ಅವರ ಸಂಬಂಧಿಕರು ತಿಳಿಸಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ₹900, ₹1500, ₹4000ದಿಂದ ₹8,000ದವರೆಗೂ ಹೊರಗಿನಿಂದ ಔಷಧಿ ತಂದಿದ್ದೇವೆ” ಎಂದು ಹಲವರು ತಿಳಿಸಿದರು.

ಚಿಟಗೇರಿ ಜಿಲ್ಲಾಸ್ಪತ್ರೆ 1 1

ಎಎಪಿ ಕಾರ್ಯಕರ್ತ ಸಾಜಿದ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾಯಿ ಕಡಿತ ಹಾಗೂ ಸಾಮಾನ್ಯ ರೋಗಿಗಳಿಗೆ ಇಲ್ಲಿನ ಸಿಬ್ಬಂದಿ ಹೊರಗಡೆಯಿಂದ ಔಷಧಿ ತರಿಸುತ್ತಾರೆ ಎಂಬುದನ್ನು ಸ್ವತಃ ರೋಗಿಗಳು ಮತ್ತು ಸಂಬಂಧಿಕರೇ ಹೇಳಿದ್ದಾರೆ. ನಾನು ಕೊರೊನಾ ಕಾಲದಿಂದಲೂ ಇಂತಹ ಆರೋಪಗಳನ್ನು ಕೇಳುತ್ತಿದ್ದು, ಇದು ಹೀಗೇ ಮುಂದುವರೆದರೆ ಬಡಜನರಿಗೆ ಸೇವೆ ನೀಡಬೇಕಾದ ಸರ್ಕಾರಿ ಆಸ್ಪತ್ರೆಗಳ ಜವಾಬ್ದಾರಿ ಏನು? ಸರ್ಕಾರಿ ಆಸ್ಪತ್ರೆಗಳು ಏಕೆ ಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಇನ್ನು ಮುಂದಾದರು ಬಡಜನರಿಗೆ ಉತ್ತಮ, ಉಚಿತ ಸೇವೆ ಕಲ್ಪಿಸಲಿ” ಎಂದು ಒತ್ತಾಯಿಸಿದರು.

ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಸುರೇಶ್, “ಅಪಘಾತವಾಗಿದ್ದ ನಮ್ಮ ಸಹೋದರರನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ನಾಲ್ಕು ದಿನವಾಗಿದೆ. ನಾಲ್ಕು ದಿನದಲ್ಲಿ ₹8,000 ಕೊಟ್ಟು ಹೊರಗಿನಿಂದ ಔಷಧಿ ತಂದಿದ್ದೇನೆ. ಬೇರೆ ಬೇರೆ ಪರೀಕ್ಷೆಗಳಿಗೆ ಹೊರಗೆ ಕಳುಹಿಸಲಾಗುತ್ತಿದೆ. ಅದಕ್ಕೂ ₹4,000ದಿಂದ ₹5,000ದಷ್ಟು ವೆಚ್ಚ ಮಾಡಿದ್ದೇವೆ. ಸ್ಥಿತಿವಂತರಾಗಿದ್ದು, ಹೆಚ್ಚು ಹಣ ಇಟ್ಟಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆವು, ಬಡವರಾದ ಕಾರಣಕ್ಕೆ ಇಲ್ಲಿಗೆ ಬಂದಿದ್ದೇವೆ. ಇವರೂ ಕೂಡ ಹೊರಗಿನಿಂದ ಔಷಧಿ ತರಲು ಚೀಟಿ ಕೊಡುತ್ತಿದ್ದಾರೆ. ಔಷಧಿಗೆ ಹಣ ಬೇಕಲ್ಲವೇ? ಹಣಕ್ಕಾಗಿ ಅಲ್ಪಸ್ವಲ್ಪ ಮನೆಯಲ್ಲಿದ್ದ ಬಂಗಾರವನ್ನೂ ಅಡಮಾನವಿಟ್ಟು ಸಾಲ ತಂದಿದ್ದೇವೆ” ಎಂದು ಸಾಲದ ಚೀಟಿಗಳನ್ನು ತೋರಿಸಿದ್ದು ಬಡತನದ ಅಸಹಾಯಕತೆಗೆ ಸಾಕ್ಷಿಯಾಗಿತ್ತು.‌

ಒಳರೋಗಿಯ ಸಂಬಂಧಿ ಅಣ್ಣಪ್ಪ ಮಾತನಾಡಿ, “ನಾವು ನಾಲ್ಕು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ₹6,000ದಿಂದ ₹7,000ದಷ್ಟು ಔಷಧಿಗಳು ಸೇರಿದಂತೆ ರಕ್ತ ಪರೀಕ್ಷೆಗೆ ಸೇರಿದಂತೆ ಸುಮಾರು ₹9,000ದಷ್ಟು ಖರ್ಚು ಮಾಡಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಚಿಕಿತ್ಸೆ ಉಚಿತ ಎನ್ನುತ್ತಾರೆ.‌ ಆದರೆ ಇಲ್ಲಿ ಆಸ್ಪತ್ರೆಗೆ ಖರ್ಚಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ” ಎಂದು ಅವಲತ್ತುಕೊಂಡರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕನ್ನಡದ ಉಳಿವಿಗಾಗಿ ಕರ್ನಾಟಕದ ಸೇವೆ ಮಾಡಲು ಸದಾ ಸಿದ್ಧ: ಮಧು ಬಂಗಾರಪ್ಪ

ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗೇಂದ್ರಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾಯಿ ಕಡಿತ ಸೇರಿದಂತೆ ಬೇರೆ ರೋಗಗಳಿಗೆ ಬೇಕಾದ ಎಲ್ಲ ಔಷಧಿಗಳು ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿದೆ. ಹೊರಗಡೆಯಿಂದ ಚೀಟಿ ಕೊಟ್ಟು ಔಷಧಿ ತರಿಸುವ ಅಗತ್ಯವಿಲ್ಲ. ಕೆಲಸದ ಕಾರಣದಿಂದ ಹೊರಗಿದ್ದು, ಈ ರೀತಿ ಚೀಟಿ ಯಾರು ಕೊಟ್ಟಿದ್ದಾರೆ, ಹೊರಗೆ ಔಷಧಿ ತರಲು ಯಾರು ಹೇಳಿದ್ದಾರೆಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ” ಎಂದು ಪ್ರತಿಕ್ರಿಯಿಸಿದರು.

“ಮೇಲಧಿಕಾರಿಗಳು, ಫಾರ್ಮಸಿಯಲ್ಲಿ ಲಭ್ಯವಿದೆ ಎನ್ನುವ ಔಷಧಿಗಳು ರೋಗಿಗಳಿಗೆ ಮಾತ್ರ ಲಭ್ಯವಿಲ್ಲ ಎನ್ನುವುದರ ಗೂಡಾರ್ಥವೇನು? ಮಧ್ಯೆ ಏನು ನಡೆಯುತ್ತಿದೆ ಎಂಬುದು ಸಾರ್ವಜನಿಕರಿಗೆ ತಿಳಿಯಬೇಕಿದೆ. ಇದಕ್ಕೆ ಅಧಿಕಾರಿಗಳೇ ಉತ್ತರಿಸಬೇಕು. ಇದು ಹೀಗೇ ಮುಂದುವರೆದರೆ ಬಡಜನರ ಪಾಡೇನು? ಎಂದು ಯೋಚಿಸಿ ಉತ್ತಮ, ಉಚಿತ ಚಿಕಿತ್ಸೆ ಸೇರಿದಂತೆ ಔಷಧಿಗಳು ಎಲ್ಲರಿಗೂ ದೊರೆಯುವಂತೆ ಕ್ರಮ ತೆಗೆದುಕೊಳ್ಳುವ ಹೊಣೆ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರ ಮೇಲಿದೆ. ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X