ನಮ್ಮಲ್ಲಿ ಸೂಕ್ಷ್ಮ ಓದು ಇದೆಯೇ ಹೊರತು ಸಭ್ಯ ಅಸಭ್ಯ ಓದು ಎಂಬುದು ಇರಲು ಸಾಧ್ಯವೇ ಇಲ್ಲ. ನಮ್ಮ ಸಾಹಿತಿಗಳನ್ನು ಅರ್ಥ ಮಾಡಿಕೊಳ್ಳಲು ಈ ಸೂಕ್ಷ್ಮ ಓದಿನ ಗುಣ ಅತೀ ಅಗತ್ಯವಾಗಿದೆ. ಅಂತಹ ಸೂಕ್ಷ್ಮತೆಯನ್ನು ಸಾಹಿತಿ ನಿರಂಜನರಲ್ಲಿ ಗಮನಿಸಬಹುದು. ಅದೇ ಕಾರಣಕ್ಕೆ ಇಂದಿಗೂ ಪ್ರಗತಿ ಶೀಲರೊಳಗೆ ನಿರಂಜನರು ಬಹಳ ಮುಖ್ಯವಾಗುತ್ತಾರೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ರಥಬೀದಿ ಗೆಳೆಯರು ಉಡುಪಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಪ್ರಗತಿಶೀಲ ಸಾಹಿತ್ಯದ ಕ್ಷೇತ್ರದಲ್ಲಿ ಕೆಲಸ ಮಾಡಿದ ನಿರಂಜನರ ನೂರರ ನೆನಪು ಅಂಗವಾಗಿ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕನ್ನಡ ಸಾಹಿತ್ಯ ಚರಿತ್ರೆಯನ್ನು ಚಾತುರ್ವರ್ಣ ಹಿನ್ನೆಲೆಯಲ್ಲಿ ಹಾಗೂ ಪ್ರತಿಭಟನೆ, ಬಂಡಾಯದ ಧ್ವನಿ ಯಾಗಿ ಗ್ರಹಿಸಬೇಕಾದ ಎಲ್ಲ ಸಾಧ್ಯತೆ ಇದೆ. ಚಾತುರ್ವರ್ಣ ವ್ಯವಸ್ಥೆಯಲಲಿ ಸಿಲುಕಿರುವವರ ನೋವು ಗಳನ್ನು ಅರ್ಥ ಮಾಡಿ ಕೊಳ್ಳಲು ಸಾಧ್ಯವಿಲ್ಲದವರು ಏನನನ್ನು ಅರಿಯಲು ಸಾಧ್ಯವಿಲ್ಲ. ಸೋತವರನ್ನು ಮೇಲೇತ್ತುವ ಸಹೃದಯಿ ದೃಷ್ಠಿಕೋನ ಹಾಗೂ ಸಂವೇದನಾಶೀಲ ಇರುವವರೇ ನಿಜವಾದ ಸಾಹಿತಿ ಆಗಲು ಸಾಧ್ಯ. ಪಂಪನ ಒಳಗೆ ಆ ಗುಣ ಇದೆ ಎಂದು ಅವರು ಹೇಳಿದರು.
ಪಂಪನಂತೆ ಪರಂಪರೆಯನ್ನು ಮುರಿದು ಕಟ್ಟುವ ಹೊಸ ಭಾರತೀಯ ನೆಲೆಯನ್ನು ಕಾಣಿಸುವ ಗುಣ ಕುವೆಂಪು ಅವರಿಗೆ ಇತ್ತು. ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿತವಾದ ವ್ಯವಸ್ಥೆಯನ್ನು ಒಡೆದು ಹೊಸ ಸಮ ಸಮಾಜ ಕಟ್ಟಿದರು. ಕರ್ಮ ಸಿದ್ಧಾಂತಕ್ಕೆ ವಿರುದ್ಧವಾಗಿ ಕಾಯಕ, ದಾನ ಸಿದ್ಧಾಂತಕ್ಕೆ ಧಾಸೋಹ ಸಿದ್ಧಾಂತ ತಂದರು ಎಂದು ಅವರು ತಿಳಿಸಿದರು.
ನಾವು ಬಸವಣ್ಣ ಅವರ ಚಳವಳಿಯ ಸಾಮಾಜಿಕ ಸಂರಚನೆಯನ್ನು ಅರ್ಥ ಮಾಡಿಕೊಳ್ಳದೆ ಹೊರಗಿನ ತಾತ್ವಿಕ ಚಿಂತನೆಗಳನ್ನು, ನಮ್ಮ ನೆಲದ ಸಂವೇದನೆ ಗಳನ್ನು ವಿಶ್ಲೇಷಿಸಲು ತೋಡಗಿದ್ದೇವೆ. ಆ ಮೂಲಕ ನಮ್ಮ ಓದು ಭ್ರಷ್ಟಗೊಂಡಿದೆ ಮತ್ತು ದಾರಿ ತಪ್ಪಿದೆ. ನಾವು ಸರಿದಾರಿಯನ್ನು ಕಂಡುಕೊಳ್ಳದಿದ್ದರೆ ನಮ್ಮ ಓದು ಹಾಗೂ ವಿಮರ್ಶೆ ಪೂರ್ಣ ಆಗಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ, ನಮ್ಮ ಪ್ರಾಚೀನ ಕವಿಗಳು ಅಂದು ಪ್ರತಿಪಾದಿಸಿದ ವಿಚಾರಗಳು ಇಂದಿಗೂ ಪ್ರಸ್ತುತವಾ ಗಿದೆ. ಆದುದರಿಂದ ಅವರನ್ನು ಯುವಜನತೆಗೆ ಪರಿಚಯಿಸುವುದು ಅತೀ ಅಗತ್ಯವಾಗಿದೆ. ಪ್ರಗತಿ ಶೀಲ ಚಳವಳಿಯನ್ನು ಸ್ಪಷ್ಟವಾದ ನೆಲೆಯಲ್ಲಿ ಕೊಂಡೊಯ್ದವರು ನಿರಂಜನ್. ಚಳವಳಿಗಾರರು, ಸಾಹಿತ್ಯಗಳು, ಲೇಖಕರ ಜೊತೆಗಿನ ಸಂಬಂಧವನ್ನು ಕಡಿದು ಕೊಂಡರೇ ನಾವು ಧ್ವೀಪವಾಗಿ ಹೋಗುತ್ತೇವೆ. ನಮಗೆ ಯೋಚನೆ ಮಾಡುವ ಶಕ್ತಿಯೇ ಇಲ್ಲದಂತಾಗುತ್ತದೆ. ಆದುದರಿಂದ ನಾವು ಪ್ರಾಚೀನ ಕವಿಗಳು ಹಾಗೂ ಇಂದಿನ ಯುವಜನತೆಯ ಮಧ್ಯೆ ವಾಹಕ ಆಗಬೇಕು. ಇದರಿಂದ ಯುವಜನತೆ ಒಂದು ಹೆಜ್ಜೆ ಕೂಡ ಹಾದಿ ತಪ್ಪುವುದಿಲ್ಲ ಎಂದರು.
ಆಶಯ ಭಾಷಣ ಮಾಡಿದ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ನಿರಂಜನ್ ತಾನು ನಂಬಿರುವ ತತ್ವವನ್ನು ಕಲೆಯ ಮೂಲಕ ಪ್ರತಿಪಾದನೆ ಮಾಡಿದರು. ಅದು ಅವರ ನಿರಂತರ ಪ್ರಯತ್ನವಾಗಿತ್ತು. ಅವರ ಬಹುಮುಖ ವ್ಯಕ್ತಿತ್ವ ಇಂದಿಗೂ ಆದರ್ಶವಾಗಿದೆ. ಇವರ ವಿರುದ್ಧ ಎರಡು ಆರೋಪಗಳು ಇವರಿಗೆ ಭಾರತ ಸಂಸ್ಕೃತಿ ಬಗ್ಗೆ ಗೌರವ ಇಲ್ಲ ಮತ್ತು ಇವರ ಕಮ್ಯನಿಸ್ಟ್ ಸಿದ್ಧಾಂತದ ಪ್ರತಿಪಾದಕರು ಎಂಬುದಾಗಿ. ಈ ಬಗ್ಗೆ ಅವರು ನಿರಂತರ ಸ್ಪಷ್ಟನೆ ನೀಡಲು ಪ್ರಯತ್ನಿಸಿದರು ಎಂದು ಅವರು ತಿಳಿಸಿದರು.
ಜನಪರವಾದ ಸಾಹಿತಿ ಕೇವಲ ಸುಂದರವಾದ ಶ್ರೇಷ್ಠವಾದುದರ ಜೊತೆ ನಿಲ್ಲದೇ, ಅನಿಷ್ಠವಾದುದನ್ನು ಖಂಡಿಸುವುದು ಮತ್ತು ಅದನ್ನು ಬದಲಾಯಿಸಲು ಹೋರಾಡುವ ಕೆಲಸ ಮಾಡುತ್ತಾರೆ. ಅದನ್ನು ನಿರಂಜನ್ ತಮ್ಮ ಬದುಕಿನಲ್ಲಿ ಮಾಡಿಕೊಂಡು ಬಂದರು. ಅವರು ಬರೆದು ಬದುಕಿದ ಲೇಖಕ. ಇಡೀ ಜಗತ್ತಿನ ಸಂಸ್ಕೃ ತಿಯನ್ನು ಕನ್ನಡದ ಓದುಗರಿಗೆ ತಲುಪಿಸಿದ ಬಹಳ ದೊಡ್ಡ ಕೆಲಸವನ್ನು ಮಾಡಿದರು. ತತ್ವ ಮತ್ತು ಕಲೆಯ ಬಗ್ಗೆ ಅಸೀಮಾ ನಂಬಿಕೆ ಅವರಲ್ಲಿ ಇತ್ತು ಎಂದು ಅವರು ಹೇಳಿದರು.
ರಥಬೀದಿ ಗೆಳೆಯರು ಉಡುಪಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ, ಕಾರ್ಯಕ್ರಮದ ಸಂಚಾಲಕ ಡಾ.ಜಯ ಪ್ರಕಾಶ್ ಶೆಟ್ಟಿ ಎಚ್. ವಂದಿಸಿದರು. ರಥಬೀದಿ ಗೆಳೆಯರು ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು. ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿದರು.
