ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವಭಾವಿ ಸಭೆಯನ್ನು ರಾಮನಗರ ಜಿಲ್ಲಾಧಿಕಾರಿಗಳು ಕರೆದಿದ್ದು, ಪ್ರಗತಿಪರ ಸಂಘಟನೆಗಳು ಆ ಸಭೆಯನ್ನು ಬಹಿಷ್ಕರಿಸಿವೆ.
ಜಿಲ್ಲಾಧಿಕಾರಿ ಕಚೇರಿಯ ಸುತ್ತಮುತ್ತಲಿನಲ್ಲಿ ಪ್ರತಿಭಟನೆ ನಡೆಸದಂತೆ ಹೊರಡಿಸಿರುವ 144 ಸೆಕ್ಷನ್ ಆದೇಶವನ್ನು ಹಿಂಪಡೆಯುವವರೆಗೂ ಜಿಲ್ಲಾಧಿಕಾರಿ ಕರೆಯುವ ಯಾವುದೇ ಸಭೆಯಲ್ಲಿ ಭಾಗವಹಿಸುವುದಿಲ್ಲವೆಂದು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ತಿಳಿಸಿದರು.
ಕನಕಪುರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾಡಳಿತ ಮತ್ತು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸದಂತೆ ಜಿಲ್ಲಾಧಿಕಾರಿಗಳು 144 ಸೆಕ್ಷನ್ ಆದೇಶವನ್ನು ಹೊರಡಿಸಿದ್ದು, ಅದು ಪ್ರಜೆಗಳ ಸಾಂವಿಧಾನಿಕ ಹಕ್ಕನ್ನು ದಮನಗೊಳಿಸುವಂತೆ ಮಾಡಿದೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದ ಬಗ್ಗೆ ಎಲ್ಲ ಸಂಘಟನೆಗಳಿಗೆ ಅಪಾರ ಗೌರವವಿದೆ. ಆದರೆ ಪ್ರಜೆಗಳ ಹಕ್ಕುಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳು ಅದನ್ನು ಆಚರಿಸಲು ಯೋಗ್ಯರಲ್ಲ. ಪ್ರತಿಭಟನೆಯ ವೇಳೆ ಅಧಿಕಾರಿಗಳು ಸಂಘಟನೆಗಳ ನಾಯಕರ ಬಗ್ಗೆ ತಿರಸ್ಕಾರ ತೋರಿರುವುದರಿಂದ, ಈಗ ಸಂಘಟನೆಗಳ ನಾಯಕರನ್ನು ಸಭೆಗೆ ಆಹ್ವಾನಿಸುವುದು ವ್ಯರ್ಥ ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಸರ್ವಾಧಿಕಾರಿ ನಡೆಯ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ವಿಷಯದ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಈ ಸಭೆಯನ್ನು ಬಹಿಷ್ಕಾರ ಮಾಡಿದ ಸಂಘಟನೆಗಳಲ್ಲಿ ಕರ್ನಾಟಕ ರಾಜ್ಯ ರೈತ ವಿಭಾಗೀಯ ಉಪಾಧ್ಯಕ್ಷರಾದ ಮಲ್ಲಯ್ಯ, ಸಂಚಾಲಕರಾದ ಚೀಲೂರು ಮುನಿರಾಜು, ಜಿಲ್ಲಧ್ಯಕ್ಷರಾದ ತಿಮ್ಮೇಗೌಡ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ನೀಲೇಶ್‌ಗೌಡ, ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಕರುನಾಡ ಸೇನೆಯ ರಾಜ್ಯ ಉಪಾಧ್ಯಕ್ಷ ಎಂ. ಜಗದೀಶ್, ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ರಾಜು, ಕರವೇ ಸ್ವಾಭಿಮಾನಿ ಬಣದ ರಾಜ್ಯ ಉಸ್ತುವಾರಿ ಶಿವುಗೌಡ, ಕೆಆರ್‌ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಭಾಸ್ಕರ್, ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಕಿರಣ್ ಸಾಗರ್ , ಮೂಲನಿವಾಸಿ ಕಾವಲು ಪಡೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ ಮೌರ್ಯ, ಹಲವಾರು ಸಂಘಟನೆಗಳ ನಾಯಕರು ಸಭೆಯಿಂದ ದೂರ ಉಳಿಯುವ ಸಮಾನ ಮನಸ್ಕ ನಿಲುವು ತಳೆದಿದ್ದೇವೆಯೆಂದು ಬೆಂಬಲ ಸೂಚಿಸಿದರು.
