- ನೂತನ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳ್ಳಲು ಉಳಿದ ಅನುದಾನ ಬಿಡುಗಡೆಗೆ ಮನವಿ
- ಸಿಪೇಟ್ ಕೇಂದ್ರ, ಬೀದರ್ – ನಾಂದೇಡ್ ರೈಲ್ವೆ ಲೈನ್ ಕಾಮಗಾರಿಗೆ ರಾಜ್ಯ ಸರ್ಕಾರ ಸಹಕಾರ ನೀಡುವಂತೆ ಕೋರಿಕೆ
ಹಿಂದಿನ ಬಿಜೆಪಿ ಸರ್ಕಾರ ಬಸವಕಲ್ಯಾಣದ ನೂತನ ಅನುಭವ ಮಂಟಪಕ್ಕೆ 600 ಕೋಟಿ ರೂ. ಅನುದಾನ ನೀಡಿ, ರೂ. 200 ಕೋಟಿ ಬಿಡಗುಡೆಗೊಳಿಸಲಾಗಿತ್ತು, ಆದರೆ ಈ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲು ಉಳಿದ ಅನುದಾನ ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ನೂತನ ಹಾಗೂ ನವಿಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ, ರಸಗೊಬ್ಬರ ಖಾತೆ ಸಹ ಸಚಿವ ಭಗವಂತ ಖೂಬಾ ಸಿಎಂ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ, ಬೀದರ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಿಸಿದಂತೆ ಮನವಿ ಪತ್ರಗಳು ಸಲ್ಲಿಸಿದ ಅವರು, ” ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿರುವ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಬೀದರ ಜಿಲ್ಲೆಗೆ ಸಿಪೇಟ್ ಕೇಂದ್ರ ಮಂಜೂರಾತಿ ನೀಡಿದೆ. ಸದರಿ ಕೇಂದ್ರದ ಕಟ್ಟಡ ಕಾಮಗಾರಿಗಾಗಿ ಔರಾದ (ಬಿ) ತಾಲೂಕಿನ ಬಲ್ಲೂರ (ಜೆ) ಗ್ರಾಮದ ಹತ್ತಿರ 10 ಎಕ್ಕರೆ ಜಮೀನು ಜಿಲ್ಲಾಡಳಿತದಿಂದ ಮಂಜೂರಾಗಿ ಕಳೆದ ವರ್ಷ ಭೂಮಿ ಪೂಜೆ ನಡೆದಿದೆ. ಇದಕ್ಕೆ ರಾಜ್ಯ ಸರ್ಕಾರದಿಂದ ನೀಡಬೇಕಾಗಿರುವ 50% ಅನುದಾನ ನೀಡಿ, ಕಾಮಗಾರಿ ಪ್ರಾರಂಭಿಸಲು ಸಹಕರಿಸಬೇಕೆಂದು” ಕೋರಿದ್ದಾರೆ.
“ಕೇಂದ್ರದಿಂದ 2019 ಫೆಬ್ರುವರಿ ತಿಂಗಳ ಕೇಂದ್ರ ಬಜೇಟ್ ನಲ್ಲಿ 2152 ಕೋಟಿ ರೂ. ವೆಚ್ಚದಲ್ಲಿ 155 ಕಿ.ಮೀ. ಅಂತರದ ಬೀದರ ನಾಂದೇಡ ವಾಯಾ ಔರಾದ, ದೇಗಲೂರ ಹೊಸ ರೈಲ್ವೆ ಲೈನ್ ಮಂಜೂರಾತಿಯಾಗಿದೆ. ಈ ರೈಲ್ವೆ ಲೈನ್ ಬೀದರ ಮತ್ತು ಮಹಾರಾಷ್ಟ್ರಕ್ಕೆ ಎಲ್ಲಾ ರೀತಿಯ ಸಂಬಂಧವೃದ್ದಿಗೆ ಸಹಕಾರಿಯಾಗಲಿದೆ. ಹಾಗೂ ಬೀದರನಲ್ಲಿ ಮತ್ತು ನಾಂದೇಡನಲ್ಲಿ ಸಿಖ್ ಸಮುದಾಯದ ಗುರುಗಳಾದ ಗುರುನಾನಕ್ ಅವೆ ಪವಿತ್ರ ಗುರುದ್ವಾರಗಳಿರುವ ಕಾರಣ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಈ ಎಲ್ಲಾ ದೃಷ್ಟಿಕೊನದಿಂದ ರೈಲ್ವೆ ಸಚಿವಾಲಯವು ಬೀದರ-ನಾಂದೇಡ ರೈಲ್ವೆ ಲೈನ್ ಕಾಮಗಾರಿಯನ್ನು ಅದೇ ವರ್ಷದ ಬಜೇಟನಲ್ಲಿ ಪಿಂಕ್ ಪುಸ್ತಕದಲ್ಲಿ ಸೇರಿಸಲಾಗಿದೆ” ಎಂದರು.
“2023-24ನೇ ಸಾಲಿನ ಬಜೇಟನಲ್ಲಿ ಸದರಿ ಯೋಜನೆಗೆ ಕೇಂದ್ರದಿಂದ 100 ಕೋಟಿ ಅನುದಾನ ಮಿಸಲಿಡಲಾಗಿದೆ ಹಾಗೆ ಮಹಾರಾಷ್ಟ್ರ ಸರ್ಕಾರದಿಂದ ಸಹ ಅವರ ಪಾಲಿನ ಭೂಮಿ ಹಾಗೂ ನಿರ್ಮಾಣ ವೆಚ್ಚದ 50% ಅನುದಾನ ನೀಡುವುದಾಗಿ ಬಜೇಟನಲ್ಲಿ ಘೋಷಿಸಿದ್ದಾರೆ ಮತ್ತು ರಾಜ್ಯದಲ್ಲಿದ್ದ ಹಿಂದಿನ ಸರ್ಕಾರದಲ್ಲಿಯೂ ಬೀದರ-ಔರಾದ (ಕರ್ನಾಟಕ ಬಾರ್ಡರವರೆಗೆ) ಅವಶ್ಯಕವಿರುವ ಭೂಮಿ ಹಾಗೂ ಅನುದಾನ ನೀಡುವುದಾಗಿ ಬಜೇಟನಲ್ಲಿ ಘೋಷಣೆ ಮಾಡಲಾಗಿದೆ. ಹೀಗಾಗಿ ಬೀದರ ಲೋಕಸಭಾ ಕ್ಷೇತ್ರದ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು, ಬೀದರ- ಔರಾದ (ಕರ್ನಾಟಕ ಬಾರ್ಡರವರೆಗೆ) ಅವಶ್ಯಕವಿರುವ ಭೂಮಿಯನ್ನು ಉಚಿತವಾಗಿ ರೈಲ್ವೆ ಇಲಾಖೆಗೆ ಒದಗಿಸುವುದು ಹಾಗೂ 50% ನಿರ್ಮಾಣ ವೆಚ್ಚವನ್ನು ಭರಿಸಲು, ಅವಶ್ಯಕವಾಗಿರುವ ಅನುದಾನವನ್ನು ನೀಡಬೇಕೆಂದು” ಮುಖ್ಯಮಂತ್ರಿಗಳಿಗೆ ನೀಡಿರುವ ಪತ್ರದಲ್ಲಿ ಸಚಿವರು ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಹಣ-ಹೆಸರು ಗಳಿಕೆಗೆ ಧರ್ಮವೇ ಸುಲಭದ ಸಾಧನ
ಮುಖ್ಯಮಂತ್ರಿಗಳು ಸಹ ಕೇಂದ್ರ ಸಚಿವರ ಎಲ್ಲಾ ಪ್ರಸ್ತಾವನೆಗಳನ್ನು ಪರಿಗಣಿಸಿ, ಅಗತ್ಯ ಸಹಕಾರ ನೀಡುವುದಾಗಿ ಕೇಂದ್ರ ಅಭಯ ನೀಡಿದ್ದಾರೆ ಎಂದು ಸಚಿವ ಖೂಬಾ ಮಾಹಿತಿಯನ್ನು ನೀಡಿದ್ದಾರೆ.