ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿದ ಪ್ರಾಸಿಕ್ಯೂಷನ್ ಅನುಮತಿ ಹಿಂಪಡೆಯಬೇಕು, ಪ್ರಜಾಪ್ರಭುತ್ವ ಒಕ್ಕೂಟದ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರದ ಸಾರ್ವಭೌಮತೆಯನ್ನು ಸಂರಕ್ಷಿಸಬೇಕು, ಕನ್ನಡ ನಾಡಿನ ಘನತೆ ಕಾಪಾಡಬೇಕೆಂದು ಆಗ್ರಹಿಸಿ ಆ.27 ರಂದು ʼರಾಜಭವನ ಚಲೋʼ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.
ಸಂವಿಧಾನ ಮತ್ತು ಒಕ್ಕೂಟ ತತ್ವದ ವಿರೋಧಿಯಾದ ರಾಜ್ಯಪಾಲರನ್ನು ಮೋದಿ ಸರ್ಕಾರ ಕೂಡಲೆ ವಾಪಸ್ಸು ಕರೆಸಿಕೊಳ್ಳಬೇಕು. ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಈ ತಕ್ಷಣವೇ ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಅನಂತ ನಾಯಕ್ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಮಹಾಂತೇಶ ಕೌಲಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ʼರಾಜ್ಯಪಾಲ ಥಾವತ್ ಚಂದ್ ಗೆಹಲೋತ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವಾಗ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಬಿಜೆಪಿ-ಜೆಡಿಎಸ್ ಪಕ್ಷಗಳ ತಾಳಕ್ಕೆ ಕುಣಿಯುತ್ತಿರುವುದಷ್ಟೆ ಅಲ್ಲ, ಪಕ್ಷಪಾತಿ ಧೋರಣೆಯನ್ನು ತಾಳಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರದ ಮುಖ್ಯಸ್ಥರಾದ ಸಿಎಂ ವಿರುದ್ಧ ನಡೆಯುತ್ತಿರುವ ಪಿತೂರಿಯ ಭಾಗವಾಗಿದ್ದಾರೆʼ ಎಂದು ಆರೋಪಿಸಿದರು.
ʼಕರ್ನಾಟಕ ಲೋಕಾಯುಕ್ತ, ಎಸ್‍ಐಟಿ ಮುಂತಾದ ತನಿಖಾ ಸಂಸ್ಥೆಗಳು ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಗಣಿ ಹಗರಣ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣ, ಜನಾರ್ಧನ ರೆಡ್ಡಿಯವರ ಆಸ್ತಿ ಗಳಿಕೆ, ನಿರಾಣಿಯವರ ಭ್ರಷ್ಟಾಚಾರಗಳ ಕುರಿತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜಭವನಕ್ಕೆ ಕೋರಿಕೆ ಸಲ್ಲಿಸಿ ವರ್ಷಗಳಾದರೂ ಇದೇ ರಾಜ್ಯಪಾಲರು ಮನವಿಗಳನ್ನು ಕಸದ ಬುಟ್ಟಿಗೆ ಎಸೆದು ಪಕ್ಷಪಾತ ಮಾಡಿದ್ದಾರೆ. ಇದುವರೆಗೂ ಒಬ್ಬರ ಮೇಲೂ ವಿಚಾರಣೆಗೆ ಅನುಮತಿ ನೀಡಿಲ್ಲʼ ಎಂದು ದೂರಿದರು.
ರಾಜಭವನ ಚಲೋ ಪ್ರತಿಭಟನೆಯಲ್ಲಿ ನಾಡಿನ ಪ್ರಜ್ಞಾವಂತರು, ಪ್ರಗತಿಪರರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ಸರ್ಕಾರದ ಆತ್ಮಾವಲೋಕನಕ್ಕಿದು ಸಕಾಲ
ಪತ್ರಿಕಾಗೋಷ್ಠಿಯಲ್ಲಿ ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಸುನೀಲ ಮಾರುತಿ ಮಾನಪಡೆ, ಜಿಲ್ಲಾ ಅಧ್ಯಕ್ಷ ನಾಗೇಂದ್ರ ಜವಳಿ, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಮುಖಂಡ ಆದರ್ಶ ಯಲ್ಲಪ್ಪ, ಜಿಲ್ಲಾ ಸಂಚಾಲಕ ಅರ್ಜುನ ಗೊಬ್ಬರ, ಅಲೆಮಾರಿ ಸಂಘಟನೆಗಳ ಒಕ್ಕೂಟದ ಬಿ.ಹೆಚ್.ಮಂಜುನಾಥ, ವಿದ್ಯಾರ್ಥಿ ಬಂಧುತ್ವ ವೇದಿಕೆಯ ದಿನೇಶ ದೊಡ್ಡಮನಿ, ಪರಿಶಿಷ್ಟ ಪಂಗಡ ಮುಖಂಡ ಶಿವರಾಜ ಸುಬೇದಾರ, ಅಲ್ಪಸಂಖ್ಯಾತ ಮುಖಂಡ ಮಹಿಬೂಬ್ ಶಾಹ್ ದರವೇಶಿ ಇದ್ದರು.