ʼಬೀದರ್ ಜಿಲ್ಲೆಯಲ್ಲಿ ಮೇಲಿಂದ ಮೇಲೆ ದರೋಡೆಗಳು ನಡೆಯುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರೇ ಜಿಲ್ಲೆಯ ಜನರನ್ನು ದರೋಡೆಕೋರರು, ಕಳ್ಳರು, ಭ್ರಷ್ಟಾಚಾರಿಗಳಿಂದ ರಕ್ಷಿಸಿʼ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮನವಿ ಮಾಡಿದರು.
ʼಉಸ್ತುವಾರಿ ಸಚಿವರು ಈ ಹಿಂದೆ ಶಾಸಕರಿದ್ದಾಗ ದರೋಡೆ, ಸುಲಿಗೆ ಪ್ರಕರಣಗಳು ಭಾಲ್ಕಿಗೆ ಸೀಮಿತವಾಗಿದ್ದವು. ಅವರು ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಇದು ಸಾಮಾನ್ಯವಾಗಿದೆ. ಎಸ್ಪಿಯವರು ಸಕ್ರಿಯರಾಗಿಲ್ಲ. ಅವರನ್ನು ವರ್ಗಾವಣೆಗೊಳಿಸಬೇಕುʼ ಎಂದು ಭಗವಂತ ಖೂಬಾ ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ʼಈ ಬಗ್ಗೆ ಹಿಂದೆಯೂ ಅನೇಕ ಸಲ ಹೇಳಿದ್ದೇವೆ. ಆದರೆ, ವಿರೋಧ ಪಕ್ಷದ ಮುಖಂಡರ ಭಾವನೆಗಳನ್ನು ಸಚಿವರು ಅರಿತಿಲ್ಲ. ಮೇಲಿಂದ ಮೇಲೆ ದರೋಡೆಗಳು ನಡೆಯುತ್ತಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆಯೇ ಅನುಮಾನ ಬರುತ್ತದೆʼ ಎಂದು ಆರೋಪಿಸಿದರು.
ʼಬೀದರ್ ಜಿಲ್ಲೆಯಲ್ಲಿ ಪೊಲೀಸರು ಇದ್ದಾರೋ ಅಥವಾ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಾಲು ಸಾಲು ಅಪರಾಧ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಇದು ಸರ್ಕಾರಿ ಪ್ರಾಯೋಜಿತ ದರೋಡೆ ಅನಿಸುತ್ತದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದ ಕಾರಣಕ್ಕೆ ಕಳೆದ ಒಂದು ವರ್ಷದಿಂದ ತಿಂಗಳಿಗೆ ಸರಾಸರಿ ಜಿಲ್ಲೆಯಲ್ಲಿ ಎರಡು ಕೊಲೆಗಳಾಗುತ್ತಿವೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಬದಲಿಸಬೇಕುʼ ಎಂದು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಹೇಳಿದರು.
ʼಎಸ್‌ಬಿಐ ಎಟಿಎಂ ದರೋಡೆ ಪ್ರಕರಣವಾಗಿ ನೂರು ಕಳೆದರೂ ಆರೋಪಿಗಳು ಇಂದಿಗೂ ಪತ್ತೆ ಮಾಡಿಲ್ಲ. ನ್ಯಾಯಾಧೀಶರ ಮನೆ ಕಳ್ಳತನ, ಮಾಜಿ ಯೋಧರ ಮನೆ ಕಳ್ಳತನ ಸೇರಿದಂತೆ ಅನೇಕ ದರೋಡೆ ಪ್ರಕರಣಗಳು ನಡೆಯುತ್ತಿವೆ. ದರೋಡೆ ಕಡಿವಾಣಕ್ಕೆ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸರು ದೊಡ್ಡದಾಗಿ ಹೇಳಿದ್ದರು. ಇನ್ನು ಮುಂದಾದರೂ ಪರಿಸ್ಥಿತಿ ಸರಿಹೋಗಬಹುದು ಎಂದು ಜನ ಅಂದುಕೊಂಡಿದ್ದರು. ಆದರೆ, ಏನೂ ಬದಲಾಗಿಲ್ಲʼ ಎಂದು ಟೀಕಿಸಿದರು.
ʼಮಾಜಿ ಯೋಧನ ಮನೆಯಲ್ಲಿ 25 ತೊಲೆ ಬಂಗಾರ ಕಳ್ಳತನವಾಗಿದ್ದರೆ 15 ತೊಲೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಹುಮನಾಬಾದ್‌ನಲ್ಲಿ ಡೈಜೋಡೆ ಎಂಬುವರ ಮನೆಯಿಂದ 24 ತೊಲೆ ಬಂಗಾರ ಕಳುವಾಗಿತ್ತು. ಆದರೆ, 17 ತೊಲೆ ಮರಳಿಸಿದ್ದಾರೆ. ಬೀದರ್‌ನ ಓಲ್ಡ್ ಆದರ್ಶ ಕಾಲೊನಿಯಲ್ಲಿ ನಡೆದ ಡಕಾಯಿತಿಯಲ್ಲಿ 50 ತೊಲೆ ಚಿನ್ನಾಭರಣ ಒಯ್ದಿದ್ದಾರೆ. ಆದರೆ, ಎಫ್‌ಐಆರ್‌ನಲ್ಲಿ ಕಡಿಮೆ ದಾಖಲಿಸಿದ್ದಾರೆ. ಹುಮನಾಬಾದ್‌ನಲ್ಲಿ ಎಸ್‌ಬಿಐ ನೌಕರನ ಮನೆಯಲ್ಲಿ ಕಳ್ಳತನವಾಗಿದೆ. ಸ್ವತ್ತು ಕಳೆದುಕೊಂಡ ಮಾಲೀಕರು ಕೊಟ್ಟ ದೂರಿಗೂ ಎಫ್‌ಐಆರ್‌ನಲ್ಲಿ ದಾಖಲಿಸುತ್ತಿರುವುದರಲ್ಲಿ ವ್ಯತ್ಯಾಸ ಆಗುತ್ತಿದೆ. ಯಾವುದಾದರೂ ಅಪರಾಧ ಪ್ರಕರಣ ನಡೆದರೆ ಅದು ಹೊರಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದಾರೆʼ ಎಂದು ಆರೋಪಿಸಿದರು.
ʼಸರ್ಕಾರದ ಬಳಿ ಹಣವಿಲ್ಲ. ಗ್ಯಾರಂಟಿ ಹೆಸರಿನಲ್ಲಿ ದಿವಾಳಿಯಾಗಿದೆ. ಸಚಿವರು ಏನು ಮಾಡುತ್ತಿದ್ದಾರೆ? ಎಸ್ಪಿಯವರನ್ನು ಬದಲಿಸಬೇಕಿತ್ತು. ಸಚಿವರ ಕುಮ್ಮಕ್ಕು ಇದೆಯಾ ಎಂಬ ಅನುಮಾನ ಬರುತ್ತಿದೆ. ಕೂಡಲೇ ಎಸ್ಪಿಯವರನ್ನು ಬದಲಿಸಿ, ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕದಿದ್ದಲ್ಲಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಿಸಿಲಿನ ತಾಪ : ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆ
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ರೆಡ್ಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ, ಕಿರಣ ಪಾಟೀಲ, ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಪ್ರಶಿಕ್ಷಣ ಪ್ರಕೋಷ್ಠದ ರಾಜ್ಯ ಸಂಚಾಲಕ ರಾಜಶೇಖರ ನಾಗಮೂರ್ತಿ, ಬಸವರಾಜ ಪವಾರ, ವೀರು ದಿಗ್ವಾಲ್ ಹಾಜರಿದ್ದರು.