ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದ್ದು, ಬಡವರ ಅಭಿವೃದ್ಧಿಗಾಗಿ ರಚನೆಯಾದ ಸಂವಿಧಾನಕ್ಕೂ ಕೂಡ ಕುತ್ತು ಬಂದಿದೆ. ಅದನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾಲೂರು ಶಾಸಕ ಕೆ.ವೈ ನಂಜೇಗೌಡ ಹೇಳಿದರು.
ಕೋಲಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ, ವಿವಿಧ ಸಂಘ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ವಿಧ್ಯಾರ್ಥಿಗಳ ಸಹಯೋಗದಲ್ಲಿ ಭಾನುವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ರಸ್ತೆಯ ಚೊಕ್ಕಂಡಹಳ್ಳಿಯಿಂದ ಕೋಲಾರ ನಗರ ಮಾರ್ಗವಾಗಿ ರಾಮಸಂದ್ರ ಗಡಿಯವರಗೆ ನಿರ್ಮಿಸಿದ್ದ 55 ಕಿ.ಮೀ ಉದ್ದದ ಮಾನವ ಸರಪಳಿಯಲ್ಲಿ ಭಾಗವಹಿಸಿ, ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲಾ ಜಾತಿ, ಧರ್ಮ, ಪಕ್ಷ ಬಿಟ್ಟು ಸಂವಿಧಾನದ ಆಶಯದ ಒಳಗಡೆ ನಾವಿದ್ದೇವೆ. ಸಂವಿಧಾನ ಇದ್ದರೆ ಅಷ್ಟೇ ನಮ್ಮ ಉಳಿಗಾಲ. ಕಾಂಗ್ರೆಸ್ ಸರಕಾರದ ಸದಾಶಯದಂತೆ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಜಿಲ್ಲೆಯ ಸಾವಿರಾರು ಜನರು ಭಾಗಿಯಾಗುವ ಮೂಲಕ ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಮತ್ತು ಶ್ರೇಷ್ಠ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆದ ನಂತರ ಎಲ್ಲರೂ ಸಮಾನರು ಎಂಬ ಸಂದೇಶಕ್ಕೆ ಅಂಬೇಡ್ಕರ್ ಕೊಟ್ಟ ಸಂವಿಧಾನವೇ ಸಾಕ್ಷಿಯಾಗಿದೆ. ಸಂವಿಧಾನದ ಅಡಿಯಲ್ಲಿಯೇ ಅವಕಾಶಗಳನ್ನು ಪಡೆಯಬೇಕು. ಅವರ ದಾರಿಯಲ್ಲಿ ನಾವು ಎಲ್ಲರೂ ನಡೆಯಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಪ್ರಜಾಪ್ರಭುತ್ವದಿಂದ ಸ್ವಾತಂತ್ರ್ಯ, ಸಮಾನತೆ, ನ್ಯಾಯಪರತೆ ಮತ್ತು ಎಲ್ಲಾ ಮಾನವನ ಘನತೆಯನ್ನು ಕಾಪಾಡುವುದಾಗಿದೆ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲ, ಧ್ವನಿ ಇಲ್ಲದವರಿಗೆ ಧ್ವನಿಯಾಗುವ, ಸಾಮಾಜಿಕ ನ್ಯಾಯವನ್ನು ಕಾಪಾಡುವ ಬಲಿಷ್ಠ ವ್ಯವಸ್ಥೆ. ಇದರ ರಕ್ಷಣೆ ನಮ್ಮ ಹೊಣೆಯಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಆಶಯವೋ, ಅಣಕವೋ?
ಈ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಎಸ್ಪಿ ಬಿ.ನಿಖಿಲ್, ಕೆಜಿಎಫ್ ಎಸ್ಪಿ ಶಾಂತಕುಮಾರ್, ಡಿಎಫ್ಓ ಏಡುಕೊಂಡಲು, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಕುಡಾ ಅಧ್ಯಕ್ಷ ಮಹಮದ್ ಹನೀಫ್, ಕೋಚಿಮುಲ್ ನಿರ್ದೇಶಕ ಷಂಷೀರ್, ನರಸಾಪುರ ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಅಪರ ಜಿಲ್ಲಾಧಿಕಾರಿ ಮಂಗಳಾ, ತಹಶಿಲ್ದಾರ್ ನಯನಾ, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಚಂಜಿಮಲೆ ರಮೇಶ್, ಮೈಲಾಂಡಹಳ್ಳಿ ಮುರಳಿ,ಮುಂತಾದವರು ಇದ್ದರು.