ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಹದಗೆಟ್ಟ ರಸ್ತೆ ದುರಸ್ತಿಗೊಳಿಸದ ಅಧಿಕಾರಿಗಳ ಕ್ರಮ ಖಂಡಿಸಿ ಗ್ರಾಮಸ್ಥರು ರಸ್ತೆ ಮಧ್ಯದಲ್ಲಿ ನಿಂತಿದ್ದ ಕೊಳಚೆ ನೀರಿನಲ್ಲಿ ಸಿಸಿ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಸಂಘಟನೆ ಎಐಡಿಎಸ್‌ಒ ಹಾಗೂ ರೈತ ಸಂಘಟನೆ ಎಐಕೆಕೆಎಂಎಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ರಸ್ತೆಯ ಎಲ್ಲಾ ತಗ್ಗುಗಳಲ್ಲಿ ಭತ್ತದ ಸಸಿ ನಾಟಿ ಮಾಡಿದರು.
ಬಸ್ ನಿಲ್ದಾಣದಿಂದ ಗ್ರಾಮ ಪಂಚಾಯಿತಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟಕರು ಜನಪ್ರತಿನಿಧಿಗಳ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಮೂರು ವರ್ಷಗಳಿಂದ ರಸ್ತೆ ಹಾಳಾಗಿದ್ದು ಕೊಳಚೆ ನೀರಲ್ಲಿಯೇ ಅಡ್ಡಾಡುತ್ತಿದ್ದೇವೆ. ಕೂಡಲೇ ದೊಡ್ಡ ಡಿವೈಡರ್ ಸಿಸಿ ರಸ್ತೆ ಹಾಗೂ ಎರಡು ಬದಿ ಚರಂಡಿ ನಿರ್ಮಿಸಬೇಕು ಪ್ರತಿಭಟನಾಕಾರರು ಆಗ್ರಹಿಸಿದರು.
ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ. ಮಾತನಾಡಿ, ʼಕಳೆದ ಮೂರು ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದರಿಂದ ಗ್ರಾಮಸ್ಥರು ಓಡಾಡಲು ಪರದಾಡುತ್ತಿದ್ದಾರೆ. ಸುಮಾರು 1 ಕಿ.ಮೀ ರಸ್ತೆ ತುಂಬಾ ಗುಂಡಿಗಳೇ ತುಂಬಿಕೊಂಡಿವೆ. ರಸ್ತೆ ಮಧ್ಯದ ತಗ್ಗುಗಳಲ್ಲಿ ನೀರು ಸಂಗ್ರಹವಾದ ಕಾರಣ ರೋಗ ಹರಡುವ ಭೀತಿ ಕಾಡುತ್ತಿದೆ. ಆದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲʼ ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಪಿಡಬ್ಲ್ಯೂಡಿ ಎಇಇ ಮಹಮದ್ ಸಲಿಂ ಮಾತನಾಡಿ, ʼತಕ್ಷಣ ರಸ್ತೆ ದುರಸ್ತಿ ನಡೆಸಲಾಗುವುದು ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದುʼ ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿಜಕ್ಕೂ ಮೋದಿಯವರು ಕುರ್ಚಿ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದು
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ವಾಡಿ ಸಮಿತಿಯ ಅಧ್ಯಕ್ಷ ವೆಂಕಟೇಶ್ ದೇವದುರ್ಗ, ಎಐಕೆಕೆಎಂಎಸ್ ರೈತ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ತಾಲೂಕು ಅಧ್ಯಕ್ಷ ಮಲ್ಲಣ್ಣ ದಂಡವ, ಮುಖಂಡರಾದ ಶಾಂತಕುಮಾರ್ ಎಣ್ಣಿ ಗ್ರಾ,ಪಂ. ಮಾಜಿ ಅಧ್ಯಕ್ಷ ಸಾಬಣ್ಣ ಆನೆಮಿ, ಶರಣು ಹೇರೂರು, ಗೌತಮ್ ಪರ್ತುರಕರ್ ಚಿನ್ ಸಾವಣ್ಣ, ಮೌನಪ್ಪ ಕುಂಬಾರ್ ಸಾಬಣ್ಣ, ಅಂಬರೀಷ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.