ಪ್ರಸ್ತುತ ಕೇಂದ್ರ ಸರ್ಕಾರ ಮಂಡಿಸುವ ಕೇಂದ್ರ ಬಜೆಟ್‌ನಲ್ಲೇ ಸೇರಿರುವ ರೈಲ್ವೆ ಬಜೆಟ್ ಕೆಲವು ವರ್ಷಗಳ ಹಿಂದೆ ಪ್ರತ್ಯೇಕ ಬಜೆಟ್ ಆಗಿತ್ತು. ಹೌದು, 1924ರಿಂದ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿಯೇ ಮಂಡಿಸಲಾಗುತ್ತಿತ್ತು. ಆದರೆ ಈ ಪದ್ಧತಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2017ರಲ್ಲಿ ಬ್ರೇಕ್ ಹಾಕಿದೆ. ಅಂದಿನಿಂದ ರೈಲ್ವೆ ಬಜೆಟ್ ಮತ್ತು ಕೇಂದ್ರ ಬಜೆಟ್ ಸೇರಿ ಒಂದೇ ಬಜೆಟ್ ಮಂಡಿಸಲಾಗುತ್ತದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು ಏಳನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮೂಲಕ ಕೇಂದ್ರದ ಒಕ್ಕೂಟ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಬಹುತೇಕ ಯೋಜನೆಗಳನ್ನು ಮಿತ್ರ ಪಕ್ಷಗಳ ಆಡಳಿತವಿರುವ ರಾಜ್ಯವಾದ ಬಿಹಾರ, ಆಂಧ್ರಪ್ರದೇಶಕ್ಕೆ ಘೋಷಿಸಲಾಗಿದೆ.
ಕರ್ನಾಟಕ, ಪಂಜಾಬ್ ಸೇರಿದಂತೆ ವಿಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ಕಡೆಗಣಿಸಿರುವಂತೆಯೇ, ಬಜೆಟ್‌ನಲ್ಲಿ ಭಾರತೀಯ ರೈಲ್ವೆಯನ್ನು ಕೇಂದ್ರ ಸರ್ಕಾರ ಕಡೆಗಣಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ಬಹುತೇಕ ಎಲ್ಲ ಕ್ಷೇತ್ರಗಳ ಖಾಸಗೀಕರಣ ಮಾಡಿರುವ ಮೋದಿ ಸರ್ಕಾರವು ರೈಲ್ವೆಯನ್ನು ಹಂತ ಹಂತವಾಗಿ ಖಾಸಗೀಕರಣ ಮಾಡಲು ಈ ಮೂಲಕವೇ ಸಕಲ ಸಿದ್ಧತೆ ನಡೆಸುತ್ತಿರುವಂತಿದೆ.
23 ಮಿಲಿಯನ್ ಪ್ರಯಾಣಿಕರ ಪ್ರಯಾಣ
ಯುಎಸ್, ರಷ್ಯಾ, ಚೀನಾದ ಬಳಿಕ ಭಾರತೀಯ ರೈಲ್ವೇ ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವನ್ನು ಹೊಂದಿರುವ ದೇಶವಾಗಿದೆ. ಸುಮಾರು 68,000 ಕಿ.ಮೀ. ರೈಲ್ವೆ ಮಾರ್ಗದುದ್ದಕ್ಕೂ ಪ್ರತಿದಿನ 13,000ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳು ದಿನಕ್ಕೆ ಸುಮಾರು 23 ಮಿಲಿಯನ್ ಪ್ರಯಾಣಿಕರು ಹೊತ್ತು ಸಾಗುತ್ತವೆ. ಸುಮಾರು 1.2 ಮಿಲಿಯನ್ ಉದ್ಯೋಗಿಗಳು ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಾರೆ.
ಈ ಕಾರಣದಿಂದಾಗಿ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ಆದರೆ 2017ರಲ್ಲಿ ಮೋದಿ ಸರ್ಕಾರ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಕೇಂದ್ರ ಬಜೆಟ್‌ನೊಂದಿಗೆ ವಿಲೀನಗೊಳಿಸಿ ರೈಲ್ವೆ ಬಜೆಟ್‌ಗೆ ಅಂತ್ಯ ಹಾಡಿದೆ. ಇದಾದ ಬಳಿಕ ಹಂತ ಹಂತವಾಗಿ ಭಾರತೀಯ ರೈಲ್ವೆಯನ್ನು ಬದಿಗೊತ್ತುತ್ತಾ ಬಂದಿದೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ಬಿಜೆಪಿ ಮಿತ್ರರಾದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ತಮ್ಮ ರಾಜ್ಯಕ್ಕೆ ಗಳಿಸಿದ್ದೇನು?
ಐತಿಹಾಸಿಕವಾಗಿ ಭಾರತೀಯ ಬಜೆಟ್‌ನ ಭಾಗವಾಗಿರುವ ಭಾರತೀಯ ರೈಲ್ವೆಯನ್ನು ಬದಿಗೊತ್ತುವ ಕೇಂದ್ರ ಸರ್ಕಾರದ ಕಾರ್ಯವು 2024-25ನೇ ಸಾಲಿನ ಬಜೆಟ್‌ನಲ್ಲಿ ಪೂರ್ಣಗೊಂಡಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸುದೀರ್ಘ ಬಜೆಟ್ ಭಾಷಣದಲ್ಲಿ ‘ರೈಲ್ವೇಸ್’ ಎಂಬ ಪದವನ್ನು ಬರೀ ಒಂದು ಬಾರಿ ಬಳಸಿರುವುದು ಕುತೂಹಲಕರ ವಿಷಯವಾಗಿದೆ. ಅದು ಕೂಡಾ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಾ ಈ ‘ರೈಲ್ವೇಸ್’ ಪದ ಬಳಸಲಾಗಿದೆ ಅಷ್ಟೆ.
ರೈಲು ಮತ್ತು ಸಾಮಾನ್ಯ ಬಜೆಟ್ ವಿಲೀನವನ್ನು ಪ್ರತಿಪಕ್ಷಗಳು ಆರಂಭದಲ್ಲಿಯೇ ವಿರೋಧಿಸುತ್ತಾ ಬಂದಿವೆ. ಕೇಂದ್ರ ಸರ್ಕಾರದ ಈ ಕ್ರಮವು ಸಾರಿಗೆ ವಲಯದ ಪ್ರಾಮುಖ್ಯತೆಯನ್ನು ದುರ್ಬಲಗೊಳಿಸುತ್ತದೆ, ರೈಲ್ವೆ ಅಭಿವೃದ್ಧಿಯನ್ನು ಕಡೆಗಣಿಸಿದಂತಾಗುತ್ತದೆ ಎಂದು ಹೇಳಿದೆ. ಪ್ರತಿಪಕ್ಷಗಳ ಈ ವಾದವನ್ನು ಇತ್ತೀಚೆಗೆ ನಡೆದ ಒಡಿಶಾ, ಕಾಂಚನಜುಂಗಾ ಮೊದಲಾದ ರೈಲು ಅಪಘಾತಗಳು ಸಾಬೀತುಪಡಿಸಿದಂತಿದೆ. ಒಡಿಶಾ ರೈಲು ಅಪಘಾತದಲ್ಲಿ (ಬಾಲಸೋರ್ ರೈಲು ಅಪಘಾತ) ಸುಮಾರು 300 ಜನರು ಸಾವನ್ನಪ್ಪಿದ್ದಾರೆ.
ರೈಲ್ವೆ ಬಜೆಟ್ ಏರಿಕೆ
2019-20ರಲ್ಲಿ ರೈಲ್ವೆ ಸಚಿವಾಲಯಕ್ಕೆ 68,018 ಕೋಟಿ ರೂಪಾಯಿ ಬಜೆಟ್ ಅನ್ನು ಹಂಚಿಕೆ ಮಾಡಲಾಗಿದೆ. ಅದಾದ ನಂತರದ ವರ್ಷಗಳಲ್ಲಿ ರೈಲ್ವೆಗೆ ಬಜೆಟ್ ಹಂಚಿಕೆ ಗಣನೀಯವಾಗಿ ಮತ್ತು ಸ್ಥಿರವಾಗಿ ಹೆಚ್ಚಳವಾಗಿದೆ. 2020-21, 2021-22ರಲ್ಲಿ ಕ್ರಮವಾಗಿ 72,215 ಕೋಟಿ ರೂಪಾಯಿ ಮತ್ತು 1,10,054 ಕೋಟಿ ರೂಪಾಯಿ ಬಜೆಟ್ ಹಂಚಲಾಗಿದೆ.
2022-23ರಲ್ಲಿ ರೈಲ್ವೆ ಬಜೆಟ್ ಹಂಚಿಕೆ 1,40,367 ಕೋಟಿ ರೂಪಾಯಿಗೆ ಏರಿದ್ದರೆ, 2023-24ರಲ್ಲಿ 2,41,267 ಕೋಟಿ ರೂಪಾಯಿಗೆ ತಲುಪಿದೆ. ಈ ವರ್ಷ (2024-25) ಸರ್ಕಾರವು ರೈಲ್ವೆ ಸಚಿವಾಲಯಕ್ಕೆ 2,55,393 ಕೋಟಿ ರೂಪಾಯಿ ಬಜೆಟ್ ಹಂಚಿಕೆ ಮಾಡಿದೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ 2024 | ಎನ್‌ಡಿಎ ಸರ್ಕಾರ ಉಳಿಸಿಕೊಳ್ಳುವ ಬಜೆಟ್: ಡಿಸಿಎಂ ಡಿ ಕೆ ಶಿವಕುಮಾರ್ ಟೀಕೆ
ಆದರೆ 2023-24ರಲ್ಲಿ ರೈಲ್ವೆಯ ಬಜೆಟ್ ಹಂಚಿಕೆ ವೆಚ್ಚವು ಹಿಂದಿನ ವರ್ಷಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಹಿಂದಿನ ವರ್ಷದ ಬಜೆಟ್ ಹಂಚಿಕೆಗಿಂತ ಸುಮಾರು ಶೇಕಡ 51ರಷ್ಟು ಹೆಚ್ಚಾಗಿದೆ. ಭಾರತೀಯ ರೈಲ್ವೆಗೆ ಹಂಚಿಕೆ ಮಾಡುವ ಬಜೆಟ್‌ಗಿಂತ ವೆಚ್ಚ ಅಧಿಕವಾಗಿರುವ ಕಾರಣ ಈ ಬಾರಿಯ ಬಜೆಟ್‌ನಲ್ಲಿ ಹಂಚಿಕೆ ಅಧಿಕವಾಗಿಯೇ ಮಾಡುವ ನಿರೀಕ್ಷೆಯಿತ್ತು. ಆದರೆ ಈ ಬಜೆಟ್‌ನಲ್ಲಿ ಬರೀ ಶೇಕಡ 5ರಷ್ಟು ಬಜೆಟ್ ಹಂಚಿಕೆ ಹೆಚ್ಚಿಸಲಾಗಿದೆ. ಹಣಕಾಸು ವರ್ಷದಲ್ಲಿ, 2024-25ರಲ್ಲಿ ಹಣದುಬ್ಬರವನ್ನು ಸರಿದೂಗಿಸಲು 2.51 ಲಕ್ಷ ಕೋಟಿ ರೂಪಾಯಿ ಬಜೆಟ್ ಹಂಚಿಕೆ ಹೆಚ್ಚಿಸಲಾಗಿದೆ.
ರೈಲ್ವೆ ಖಾಸಗೀಕರಣಕ್ಕೆ ಬುನಾದಿ?
ಭಾರತೀಯ ರೈಲ್ವೆಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವುದಿಲ್ಲ ಎಂದು ರೈಲ್ವೆ ಸಚಿವರಾಗಿದ್ದ ಪಿಯೂಷ್ ಗೋಯಲ್ ಈ ಹಿಂದೆ ಸ್ಪಷ್ಟಪಡಿಸಿದ್ದಾರೆ. ಆದರೆ ದಕ್ಷತೆಯನ್ನು ಸುಧಾರಿಸಲು ಖಾಸಗಿ ಹೂಡಿಕೆಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಕೂಡಾ ಇದೇ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ.
2020ರ ಜುಲೈ 1ರಂದು ರೈಲ್ವೆ ಸಚಿವಾಲಯವು ಖಾಸಗಿ ವಲಯಗಳ 109 ಜೋಡಿ ಮಾರ್ಗಗಳಲ್ಲಿ 151 ರೈಲುಗಳ ಕಾರ್ಯಾಚರಣೆಯನ್ನು ಘೋಷಿಸಿದೆ. ಇದು ಭಾರತೀಯ ರೈಲ್ವೆಯಿಂದ ನಿರ್ವಹಿಸಲ್ಪಡುವ 2,800 ಎಕ್ಸ್‌ಪ್ರೆಸ್ ಮತ್ತು ಮೇಲ್ ಸೇವೆಗಳಲ್ಲಿ ಶೇಕಡ 5ರಷ್ಟಾಗಿದೆ.
ಈ ಖಾಸಗೀಕರಣಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ರೈಲ್ವೇ ಖಾಸಗೀಕರಣದಿಂದ ಟಿಕೆಟ್ ದರ ಏರಿಕೆಯಾಗಲಿದೆ, ಸಾರಿಗೆ ಮಾರ್ಗವಾಗಿ ರೈಲ್ವೇಯನ್ನು ಅವಲಂಬಿಸಿರುವ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕವನ್ನು ವಿಪಕ್ಷಗಳು ವ್ಯಕ್ತಪಡಿಸಿದ್ದವು. ಆದರೆ ಇದೀಗ ಸರ್ಕಾರವೇ ವಂದೇ ಭಾರತ್ ಮೊದಲಾದ ರೈಲು ಸೇವೆಗಳ ಮೂಲಕ ದರೋಡೆ ಮಾಡುತ್ತಿರುವುದನ್ನು ನಾವು ನೆನಪಿಸಿಕೊಳ್ಳಲೇಬೇಕು.
ಬಡ ಭಾರತೀಯರಿಗಿಲ್ಲ ಸಾರಿಗೆ ವ್ಯವಸ್ಥೆ
ರೈಲು ಬಡವರ ಸಾರಿಗೆ ಎಂಬ ಮಾತು ಈ ಹಿಂದೆ ಇತ್ತು. ಆದರೆ ಅದೀಗ ಬದಲಾಗಿದೆ. ಬಡ ಭಾರತೀಯರಿಗೆ ಸಾರಿಗೆ ವ್ಯವಸ್ಥೆಯೇ ಇಲ್ಲದಂತಾಗಿದೆ. ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಈ ಬದಲಾವಣೆ ಆಗಿದೆ. 68,426 ಕಿ.ಮೀ. ರೈಲ್ವೆ ಮಾರ್ಗದಲ್ಲಿ ಸುಮಾರು 63,456 ರೈಲ್ವೆ ಮಾರ್ಗವನ್ನು ವಿದ್ಯುತ್ತೀಕರಣಗೊಳಿಸಲಾಗಿದೆ.
ರೈಲ್ವೆ ಮಾರ್ಗ ವಿದ್ಯುತ್ತೀಕರಣಗೊಳಿಸಿರುವುದು ಉತ್ತಮ ಬೆಳವಣಿಗೆ. ಆದರೆ ಅದರಿಂದ ಬಡವರಿಗೆ ಲಾಭವಾಗುತ್ತಿದೆಯೇ? ಖಂಡಿತವಾಗಿಯೂ ಇಲ್ಲ. ರೈಲ್ವೆ ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸಲಾಗಿರುವುದು ಮಾತ್ರವಲ್ಲದೆ ಸಾಮಾನ್ಯ ರೈಲುಗಳ ಸಂಖ್ಯೆಯನ್ನು ಕೂಡಾ ಮೋದಿ ಸರ್ಕಾರ ಇಳಿಸುತ್ತಿದೆ.
ಬಡ ಜನರ ಸಾರಿಗೆ ವ್ಯವಸ್ಥೆಗೆ ಅಧಿಕ ಒತ್ತು ನೀಡಬೇಕಾದ ಕೇಂದ್ರ ಸರ್ಕಾರವು ವಂದೇ ಭಾರತ್‌ನಂತಹ ದುಬಾರಿ, ಹೈಸ್ಪೀಡ್ ರೈಲುಗಳ ಮೂಲಕ ಬಡ ವರ್ಗಕ್ಕೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದಂತೆ ಮಾಡುತ್ತಿದೆ.
ಸಾಮಾನ್ಯ ಬಜೆಟ್ ಜೊತೆ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಿ ಹಂತ ಹಂತವಾಗಿ ಕೇಂದ್ರ ಸರ್ಕಾರ ರೈಲ್ವೆ ಬಜೆಟ್ ಮೊತ್ತವನ್ನು ಏರಿಸುತ್ತಿದೆಯಾದರೂ ಭಾರತೀಯ ರೈಲ್ವೆಗೆ ಈ ಹಿಂದೆ ನೀಡಿದ್ದ ಪ್ರಾಮುಖ್ಯತೆಯನ್ನು ಈ ಬಜೆಟ್‌ನಲ್ಲಿ ನೀಡಿಲ್ಲ. ಜೊತೆಗೆ ಖಾಸಗಿ ಹೂಡಿಕೆಗೂ ಉತ್ತೇಜನ ನೀಡುತ್ತಿದೆ. ಈ ಮೂಲಕ ಭಾರತೀಯ ರೈಲ್ವೆಯನ್ನು ಖಾಸಗೀಕರಣದತ್ತ ದೂಡುತ್ತಿದೆ!

ಪತ್ರಕರ್ತೆ, ನಾಲ್ಕು ವರ್ಷಗಳ ಅನುಭವ. ರಾಜಕೀಯ, ಬ್ಯುಜಿನೆಸ್ ಸುದ್ದಿಯಲ್ಲಿ ಆಸಕ್ತಿ.