ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಿರೇಹಳ್ಳಿ ‘ ಬಿ ‘ ಗ್ರಾಮದ ಚರಂಡಿ ಸ್ವಚ್ಛತೆಗೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರಾದ ರಾಜೇಗೌಡ ಮಾತನಾಡಿ ” ಪ್ರತಿ ಬಾರಿಯೂ ಮಳೆ ಬಂದಾಗ ಚರಂಡಿಯ ನೀರು ಮನೆಯ ಒಳಗಡೆ ನುಗ್ಗುವುದರಿಂದ ವಾಸ ಮಾಡುವುದೇ ಬಹಳ ಕಷ್ಟವಾಗಿದೆ. ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರು ಸಹ ಯಾವುದೇ ಸಮಸ್ಯೆ ಬಗೆಹರಿದಿಲ್ಲ, ಚರಂಡಿಯೂ ಸಂಪೂರ್ಣವಾಗಿ ಮುಚ್ಚಿ ಹೋಗಿರುವುದರಿಂದ ಮಳೆ ನೀರು ಹರಿದು ಹೋಗಲು ಜಾಗವೇ ಇಲ್ಲದಾಗಿದೆ. ಈ ಕೂಡಲೇ ಸಮಸ್ಯೆಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಗಮನಹರಿಸಬೇಕು, ಸರಿಪಡಿಸಬೇಕು. ಸರಾಗವಾಗಿ ಚರಂಡಿಯಲ್ಲಿ ನೀರು ಹರಿಯುವಂತೆ ವ್ಯವಸ್ಥೆ ಕಲ್ಪಿಸಬೇಕು ” ಎಂದು ಮನವಿ ಮಾಡಿದರು.
ಸಿದ್ದೇಗೌಡ ಮಾತನಾಡಿ ” ಗ್ರಾಮ ಪಂಚಾಯಿತಿ ಗ್ರಾಮದ ಸ್ವಚ್ಛತೆ ಕಡೆಗೆ ಗಮನ ಹರಿಸದೆ ಸಮಸ್ಯೆ ಹೀಗೆ ಮುಂದುವರೆದರೆ ಚರಂಡಿಯ ಕಸವನ್ನು ತೆಗೆದುಕೊಂಡು ಹೋಗಿ ಪಂಚಾಯತಿ ಮುಂದೆ ಸುರಿದು ಧರಣಿ ಮಾಡಬೇಕಾಗುತ್ತದೆ. ಇದಕ್ಕೂ ಭಾಗದಿದ್ದರೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯವರೆಗೂ ಹೋಗಿ ಧರಣಿ ಮಾಡಬೇಕಾಗುತ್ತದೆ ” ಎಂದು ಎಚ್ಚರಿಕೆ ನೀಡಿದರು.

ರಂಗರಾಜು ಮಾತನಾಡಿ ” ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಕೇವಲ ತೆರಿಗೆ ಸಂಗ್ರಹಿಸಲು ಜನಗಳ ಬಳಿ ಬರುತ್ತಾರೆ ಹೊರತು ಜನಗಳ ಕಷ್ಟವನ್ನು ಆಲಿಸಲು ಬರುತ್ತಿಲ್ಲ.’ ಸ್ವಚ್ಛ ಭಾರತ್ ‘ ಹೆಸರಿನಲ್ಲಿ ನೂರಾರು ಕೋಟಿ ಖರ್ಚು ಮಾಡುವ ಸರ್ಕಾರಗಳು ಕೇವಲ ಪ್ರಚಾರ, ಜಾಹೀರಾತುಗಳಿಗೆ ಮಾತ್ರ ಸೀಮಿತವಾಗಿವೆ. ಸ್ವಚ್ಛತೆ, ಗ್ರಾಮ ನೈರ್ಮಲ್ಯದ ಕುರಿತು ಯಾವುದೇ ಗಮನ ಹರಿಸುತ್ತಿಲ್ಲ. ಈ ಹಿಂದೆಯೂ ಸಹ ಹಲವು ಬಾರಿ ಗಮನಕ್ಕೆ ತಂದರು ಸಹ ನಿರ್ಲಕ್ಷ ವಹಿಸುತ್ತಿದ್ದಾರೆ. ಇದರಿಂದಾಗಿ ಪ್ರತಿನಿತ್ಯ ಚರಂಡಿಯ ಅನೈರ್ಮಲ್ಯದಿಂದಾಗಿ ಜ್ವರ ,ವಾಂತಿ, ಭೇದಿ ರೋಗರುಜಿನಗಳು ಹೆಚ್ಚುತ್ತಿದ್ದು. ಚರಂಡಿಯ ನಿಂತ ನೀರಲ್ಲಿ ಸೊಳ್ಳೆಗಳು ಸಹ ಹೆಚ್ಚಾಗಿದೆ ಇದರಿಂದಾಗಿ ಜನ ಜೀವನ ಬಹಳ ಸಂಕಷ್ಟಮಯವಾಗಿದೆ. ಹಾಗಾಗಿ, ಈ ಕೂಡಲೇ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕೆಂದು ಆಗ್ರಹಿಸಿದರು. “
ಈ ಸುದ್ದಿ ಓದಿದ್ದೀರಾ? ಮೈಸೂರು | ಭಯದ ಬದುಕಲ್ಲಿ ಕಾಡಂಚಿನ ವಾಸಿಗಳು

ಹಿರೇಹಳ್ಳಿ ‘ ಬಿ ‘ ಗ್ರಾಮದ ಗ್ರಾಮಸ್ಥರುಗಳಾದ ರಂಗರಾಜು, ಎಸ್.ಯು.ಸಿ.ಐ (ಸಿ) ಸಂಘಟನೆಯ ಸುನಿಲ್ ಟಿ. ಆರ್ , ರಾಜೇಗೌಡ, ಉಮೇಶ್, ಸಿದ್ದೇಗೌಡ, ಶಿವನಂಜು, ನಾಗೇಶ, ಎಂ. ಹೆಚ್. ಗೌಡ, ಮಲ್ಲಿಗಮ್ಮ, ರಾಜಮ್ಮ, ಶಿವಮ್ಮ, ಗೌರಮ್ಮ, ತಾಯಮ್ಮ, ಗೀತಾ, ಮಲ್ಲಿಗಮ್ಮ, ಚಲುವಮ್ಮ, ನಾಗರಾಜೇಗೌಡ, ಜಯರಾಮ್, ಮಾದೇವ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಇದ್ದರು.