ದೇಶದ ಮತದಾರರು ಎಚ್ವೆತ್ತುಕೊಳ್ಳದಿದ್ದರೆ, ಮತ್ತೆಮತ್ತೆ ದುಷ್ಟರೇ ಅಧಿಕಾರಕ್ಕೆ ಬರುತ್ತಾರೆ. ಇನ್ನಾದರೂ ಮತದಾರರು ಎಚ್ಚೆತ್ತುಕೊಳ್ಳಬೇಕು. ನೊಂದಿರುವ ಕುಸ್ತಿಪಟುಗಳು ಐದು ದಿನ ಗಡುವು ಕೊಟ್ಟು ಮೌನ ಕಾಯ್ದುಕೊಂಡಿದ್ದಾರೆ. ಆದರೆ, ಆ ಗಡುವು ಮೀರಿದ ನಂತರ ಸಂತ್ರಸ್ತ ಹೆಣ್ಣುಮಕ್ಕಳು ಅವರ ಸ್ವರವನ್ನು ಕಳೆದುಕೊಳ್ಳದ ರೀತಿಯಲ್ಲಿ ನಾವು ಬೆಂಬಲ ಕೊಡಬೇಕು. ಶಕ್ತಿತುಂಬಿ ಮಹಿಳಾ ಕುಸ್ತಿಪಟುಗಳ ಹೋರಾಟವನ್ನು ಯಶಸ್ವಿ ಮಾಡಬೇಕು ಎಂದು ಹಿರಿಯ ಲೇಖಕಿ ವಿಜಯಮ್ಮ ಹೇಳಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಮಹಿಳಾ ಕುಸ್ತಿಪಟುಗಳು ಕಳೆದ ಒಂದು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸಿ, ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ವಿಜಯಮ್ಮ ಮಾತನಾಡಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಮಹಂತೇಶ್, “ದೆಹಲಿಯಲ್ಲಿ ರೈತರು ನಡೆಸಿದ ಐತಿಹಾಸಿಕ ಹೋರಾಟದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ಮನ್ ಕಿ ಬಾತ್‌ನಲ್ಲಿ ಮಾತಾಡಿಲ್ಲ. ಇನ್ನು ಬೇಟಿ ಬಚಾವೋ ಬಗ್ಗೆ ಎಲ್ಲಿ ಮಾತಾಡುತ್ತಾರೆ. ಮಹಿಳಾ ಕುಸ್ತಿಪಟುಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬ್ರಿಬ್ ಭೂಷಣ್ ಸಿಂಗ್ ಎಂಬಾತನನ್ನ ಬಂಧಿಸಿ, ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ತಮ್ಮ ಸಂಸದನನ್ನು ಅಧಿಕಾರದಿಂದ ಕೆಳಗಿಳಿಸಲು, ತನಿಖೆಗೆ ಒಳಪಡಿಸಲು ಪ್ರಧಾನಿಗೆ ನೈತಿಕತೆಯಿಲ್ಲ” ಎಂದು ಕಿಡಿಕಾರಿದ್ದಾರೆ.
ಸಿಪಿಐಎಂ ಮುಖಂಡೆ ಕೆ.ಎಸ್ ವಿಮಲಾ ಮಾತನಾಡಿ, “ಕುಸ್ತಿಪಟುಗಳ ಬೀದಿ ಹೋರಾಟ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಬಿಜೆಪಿಯ ಸಂಸದೆ ಮೀನಾಕ್ಷಿ ಲೇಖರ ಓಡಿ ಹೋಗುತ್ತಾರೆ. ಅಂದರೆ, ಸತ್ಯವನ್ನು ಎದುರಿಸುವ ತಾಕತ್ತು ಬಿಜೆಪಿಯ ಯಾವ ಮುಖಂಡರಿಗೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ, ಪ್ರತಿಭಟನಾನಿರತ ಕುಸ್ತಿಪಟುಗಳ ಹೋರಾಟವನ್ನು ಹತ್ತಿಕ್ಕಲು ಬಿಜೆಪಿಯ ವಾಟ್ಸಪ್ ದುಷ್ಟಕೂಟ ಹಲವು ತಂತ್ರಗಳನ್ನ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
“ಹಿಂದೆ ದೆಹಲಿ ರೈತರ ಹೋರಾಟದ ಸಂದರ್ಭದಲ್ಲೂ ಇದೇ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ಬಿಜೆಪಿಯ ಸೋಸಿಯಲ್ ಮೀಡಿಯಾ ತಂಡ ಸಕ್ರಿಯವಾಗಿತ್ತು. ಹಾಗಾಗಿ, ಬಿಜೆಪಿ-ಆರ್‌ಎಸ್ಎಸ್‌ನಲ್ಲಿ ಕೆಲಸ ಮಾಡುವಂತಹ ಯಾವುದೇ ಕಾರ್ಯಕರ್ತರು ಸುಳ್ಳು ಬಿತ್ತುವ ಕೆಲಸ ಮಾಡಿದಾಗ ಆಶ್ಚರ್ಯ ಆಗಲ್ಲ, ಅದೆಲ್ಲ ನಿರೀಕ್ಷಿತ ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಬಿಜೆಪಿ ಸಂಸದೆ
ಸಿಪಿಐ ಮುಖಂಡೆ ಜ್ಯೋತಿ ಅನಂತ ಸುಬ್ಬರಾವ್ ಹಾಗೂ ಕರ್ನಾಟಕ ಜನಶಕ್ತಿ ಮುಖಂಡರಾದ ಗೌರಿ ಮಾತನಾಡಿ, “ಇಡೀ ದೇಶಾದ್ಯಂತ ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಸುತ್ತಿದೆ. ದೆಹಲಿ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿದಂತೆ ಉನ್ನಾವೋ, ಕತುವಾ, ಹತ್ರಾಸ್‌ನಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರ-ಕೊಲೆಯನ್ನು ಬಿಜೆಪಿಯ ಯಾವುದೇ ನಾಯಕರು ಖಂಡಿಸಿಲ್ಲ. ಅಲ್ಲದೆ, ಬಹುತೇಹ ಮಹಿಳಾ ಪೀಡಕರು, ಅತ್ಯಾಚಾರಿಗಳು ಬಿಜೆಪಿಯ ನಾಯಕರೇ… ಹಾಗಾಗಿ ಇವತ್ತು ದೇಶದಲ್ಲಿ ಬಿಜೆಪಿಯ ಶಾಸಕರು, ಸಂಸದರಿಂದ ಮಹಿಳೆಯರನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ. ಬಿಜೆಪಿ,ಮೋದಿ ಹಠಾವೋ ಆದಾಗ ದೇಶದಲ್ಲಿ ನಿಜವಾಗಿ ಬೇಟಿ ಬಚಾವೋ ಆಗತ್ತೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಶ್ರೀಕಂಠೇಗೌಡ, ಜನವಾದಿ ಮಹಿಳಾ ಸಂಘಟನೆಯ ದೇವಿ, ವಕೀಲೆ ಅಖಿಲಾ ವಿದ್ಯಾಸಂದ್ರ ಸೇರಿದಂತೆ ಹಲವರು ಇದ್ದರು.