ರಾಜ್ಯಾದ್ಯಂತ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಹಲವಾರು ವರ್ಷಗಳಿಂದ ಬಾರಿ ಇರುವ ದೀರ್ಘಕಾಲದ ಪ್ರಕರಣಗಳನ್ನು ತೆರವುಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಕಳೆದ ಆರು ತಿಂಗಳಲ್ಲಿ ದೀರ್ಘಕಾಲದ ಪ್ರಕರಣಗಳ ಸಂಬಂಧ ಸುಮಾರು 200 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವುಗಳಲ್ಲಿ ಬೆಂಗಳೂರು ನಗರದಲ್ಲಿಯೇ 52 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
1992ರ ಬಾಬರಿ ಮಸೀದಿ ಧ್ವಂಸ ಘಟನೆ ನಡೆದ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ಗಲಭೆ ನಡೆದಿತ್ತು. ಆ ಗಲಭೆಯಲ್ಲಿ ಭಾಗಿಯಾಗಿದ್ದ ಕರಸೇವಕ ಶ್ರೀಕಾಂತ್ ಪೂಜಾರಿ ಎಂಬಾತ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ 36 ಮಂದಿಯನ್ನು ಕಳೆದ ತಿಂಗಳು ಹುಬ್ಬಳ್ಳಿ-ಧಾರವಾಡ ಪೊಲೀಸರು ಬಂಧಿಸಿದ್ದರು. ಶ್ರೀಕಾಂತ್ ಪೂಜಾರಿ ಬಂಧನದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈಗ, ಆತನಿಗೆ ಜಾಮೀನು ನೀಡಲಾಗಿದೆ.
2005ರಲ್ಲಿ ತುಮಕೂರಿನಲ್ಲಿ ನಡೆದಿದ್ದ ಪೊಲೀಸ್ ಚೆಕ್ ಪೋಸ್ಟ್ ಮೇಲಿನ ದಾಳಿ ಪ್ರಕರಣದಲ್ಲಿ 5 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಬಂಧಿಸಿದ್ದಾರೆ. ಅದೇ ಪ್ರಕರಣದಲ್ಲಿ 29 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ರಾಜ್ಯದಲ್ಲಿ 10 ವರ್ಷಕ್ಕಿಂತ ಹೆಚ್ಚು ಹಳೆಯದಾದ ಬರೋಬ್ಬರಿ 10.14 ಲಕ್ಷ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂದು ತಿಳಿದುಬಂದಿದೆ.