ಬಸವಾದಿ ಶರಣರ ಕಾಯಕ ಭೂಮಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಇರುವ ಶರಣರ ಸ್ಮಾರಕಗಳು ಅನುದಾನ ಕೊರತೆಯಿಂದ ಕನಿಷ್ಠ ಮೂಲಸೌಕರ್ಯ ಇಲ್ಲದೆ ಅವ್ಯವಸ್ಥೆ ಎದ್ದುಕಾಣುತ್ತಿದ್ದು, ಶರಣರ ಸ್ಮಾರಕಗಳ ನಿರ್ವಹಣೆಗೆ ₹5 ಕೋಟಿ ಹೆಚ್ಚುವರಿಯಾಗಿ ಒದಗಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಮನವಿ ಮಾಡಿದರು.
ಮುಂಗಾರು ಅಧಿವೇಶನದಲ್ಲಿ ಸೋಮವಾರ ನಡೆದ ಮೊದಲ ದಿನದ ಸದನದಲ್ಲಿ ಮಾತನಾಡಿದ ಅವರು, ʼಬಸವಕಲ್ಯಾಣ ಅಂತರಾಷ್ಟ್ರೀಯ ಖ್ಯಾತಿ ಪಡೆದ ನೆಲ, ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟ ಹಲವು ಶರಣರ ಸ್ಮಾರಕಗಳು ಕಲ್ಯಾಣದಲ್ಲಿವೆ. ಆದರೆ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡುತ್ತಿರುವ ಅನುದಾನದಿಂದ ಸ್ಮಾರಕಗಳ ನಿರ್ವಹಣೆ ಮತ್ತು ಸಂರಕ್ಷಣೆ ಸಾಧ್ಯವಾಗುತ್ತಿಲ್ಲ. ಈ ಹಿಂದೆ 30 ಶರಣರ ಸ್ಮಾರಕಗಳಿದ್ದವು, ಈಗ 20 ಸ್ಮಾರಕಗಳಿವೆ. ಇನ್ನು ಬಸವ ವನ, ಚಾಲುಕ್ಯರ ಕಾಲದ ಐತಿಹಾಸಿಕ ಕೋಟೆಯಲ್ಲಿ ವಿದ್ಯುತ್, ನೀರು, ಶೌಚಾಲಯ ಸೇರಿದಂತೆ ಕನಿಷ್ಠ ಮೂಲ ಸೌಕರ್ಯ ಇಲ್ಲದೆ ದುಸ್ಥಿತಿಯಲ್ಲಿವೆʼ ಎಂದು ಗಮನ ಸೆಳೆದರು.
ʼವಿಶ್ವಗುರು ಬಸವಣ್ಣವರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ಬಸವಕಲ್ಯಾಣದಲ್ಲಿ ಸಾಂಸ್ಕೃತಿಕ ಭವನ ಇಲ್ಲ. ಬಸವಕಲ್ಯಾಣ ಸಮೀಪದ ನಾರಾಯಣಪುರದಲ್ಲಿರುವ ಐತಿಹಾಸಿಕ ಶಿವ ಮಂದಿರ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದೆ. ನೂತನ ಅನುಭವ ಮಂಟಪ ಹಾಗೂ ಪರುಷ ಕಟ್ಟೆ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಹೊರತುಪಡಿಸಿ ಉಳಿದ ಶರಣರ ಸ್ಮಾರಕಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ಪ್ರಾಧಿಕಾರಕ್ಕೆ ಬಂದ ₹50 ಲಕ್ಷ ಅನುದಾನ ಯಾವುದಕ್ಕೂ ಸಾಲುತ್ತಿಲ್ಲʼ ಎಂದರು.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅದಕ್ಕೆ ಉತ್ತರಿಸಿ, ʼಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಅನುದಾನದ ಕೊರತೆ ಇಲ್ಲ. ಬಸವಕಲ್ಯಾಣ ಹಾಗೂ ಸುತ್ತಲಿನ ಪ್ರದೇಶದಲ್ಲಿರುವ ಒಟ್ಟು 29 ಸ್ಮಾರಕಗಳ ಪೈಕಿ 17 ಸ್ಮಾರಕಗಳನ್ನು ಬಿಕೆಡಿಬಿ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಉಳಿದ ಸ್ಮಾರಕಗಳನ್ನು ಅನುದಾನ ಲಭ್ಯತೆಯಿಂದ ಹಂತ-ಹಂತವಾಗಿ ಅಭಿವೃದ್ಧಿ ಮಾಡುವ ಯೋಜನೆ ಇದೆ. ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪಕ್ಕೆ ಪರಿಷ್ಕೃತ ಅಂದಾಜು ₹742 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಇಲ್ಲಿಯವರೆಗೆ ₹325 ಕೋಟಿ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ವೇಗಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ 2026 ಜೂನ್ ತಿಂಗಳಲ್ಲಿ ಬಸವ ಜಯಂತಿ ಪೂರ್ವದಲ್ಲಿ ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆʼ ಎಂದು ಪ್ರತಿಕ್ರಿಯಿಸಿದರು.
ಶಾಸಕ ಎಂ.ಜಿ.ಮುಳೆ ಅವರು ಸಚಿವರಿಗೆ ಪ್ರತಿಕ್ರಿಯಿಸಿ, ʼನಾನು ಅನುಭವ ಮಂಟಪ ನಿರ್ಮಾಣ ಬಗ್ಗೆ ಕೇಳುತ್ತಿಲ್ಲ, ಬಸವಕಲ್ಯಾಣದ ಅರಿವಿನ ಮನೆ ಹಾಳಾಗುತ್ತಿದೆ, ತ್ರಿಪುರಾಂತ ಕೆರೆ ಬೋಟಿಂಗ್ ವ್ಯವಸ್ಥೆ ಹಾಗೂ ಕೆರೆಯಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಶರಣರ ಕರ್ಮಭೂಮಿ ನೋಡಲು ಬರುವ ಪ್ರವಾಸಿಗರಿಗೆ ಕನಿಷ್ಠ ಸೌಕರ್ಯ ಸಿಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು, ಪರುಷ ಕಟ್ಟೆ ಕಾಮಗಾರಿ ಅಪೂರ್ಣವಾಗಿದೆ. ಶಿವಸೃಷ್ಠಿ ನಿರ್ಮಾಣಕ್ಕೆ ಬಿಡುಗಡೆಯಾದ ಹಣ ವಾಪಸ್ ಪಡೆಯಲಾಗಿದ್ದು, ಪುನಃ ಬಿಡುಗಡೆ ಮಾಡಬೇಕುʼ ಎಂದು ಹೇಳಿದರು.
ʼಸಚಿವರು ಪ್ರತಿಕ್ರಿಯಿಸಿ, ʼಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಹಿಂದೆ ನಾನು 2017-18ರಲ್ಲಿ ಉಸ್ತುವಾರಿ ಸಚಿವನಾಗಿದ್ದ ವೇಳೆ ಉಳಿದ ಅನುದಾನ ₹15 ಕೋಟಿ ಹಣವನ್ನು ಬ್ಯಾಂಕ್‌ನಲ್ಲಿ ಇಡಲಾಗಿದೆ. ಈಗ ಅದರ ಬಡ್ಡಿ ಹಣದಲ್ಲಿ ಶರಣರ ಸ್ಮಾರಕಗಳ ನಿರ್ವಹಣೆ ಕಾರ್ಯ ನಡೆಯುತ್ತಿದೆ. ಪರುಷ ಕಟ್ಟೆ ಅಭಿವೃದ್ಧಿಗೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ₹20 ಕೋಟಿ ಮಂಜೂರಾಗಿದೆ, ವಿನ್ಯಾಸ ಕಾರ್ಯ ಪೂರ್ಣಗೊಂಡ ನಂತರ ಕಾಮಗಾರಿ ಶುರು ಆಗಲಿದೆ. ನೂತನ ಅನುಭವ ಮಂಟಪ ನಿರ್ಮಾಣಕ್ಕೆ ₹325 ಕೋಟಿ ಬಿಡುಗಡೆಯಾಗಿದೆ, ಇನ್ನೂ ₹75 ಕೋಟಿ ಬರಲಿದೆ. ₹400 ಕೋಟಿ ಅನುದಾನ ಯಾವ ತಾಲೂಕಿಗೂ ಬಂದಿಲ್ಲʼ ಎಂದರು.
ʼಪ್ರಜಾಪ್ರಭುತ್ವದ ಮೊದಲ ಸಂಸತ್ತು ಎನ್ನಲಾಗುವ ಅನುಭವ ಮಂಟಪ ಕಾಮಗಾರಿ ಹಿರಿಯ ಚಿಂತಕರ ದೂರದೃಷ್ಟಿ ಪರಿಕಲ್ಪನೆಯಿಂದ ಆರಂಭಿಸಲಾಗಿದೆ. ಅಲ್ಲಿ ವೈಜ್ಞಾನಿಕ ದೃಷ್ಟಿಯಿಂದ ಇಷ್ಟಲಿಂಗ ತರಬೇತಿ, ಕಾಯಕ ತತ್ವ, 770 ಶರಣರ ಜೀವನ ಸಂದೇಶ, ಶರಣ ಗ್ರಾಮ ಸೇರಿದಂತೆ ಅತ್ಯಂತ ವಿಶಿಷ್ಟ ರೀತಿಯಲ್ಲಿ ಕಾರ್ಯಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಅನುಭವ ಮಂಟಪ ಅಂತರಾಷ್ಟ್ರೀಯ ಧಾರ್ಮಿಕ ಕೇಂದ್ರವಾಗಿ ರೂಪುಗೊಳ್ಳಲಿದೆ. ಬಸವಕಲ್ಯಾಣ ಅಭಿವೃದ್ಧಿಗೆ ಎಲ್ಲರೂ ಕೂಡಿ ಚರ್ಚಿಸೋಣʼ ಎಂದು ಸಚಿವರು ಉತ್ತರಿಸಿದರು.
ಬಸವಕಲ್ಯಾಣದಲ್ಲಿ ಶಿವಸೃಷ್ಟಿ ಪರಿಕಲ್ಪನೆಗಾಗಿ ಶಿವಾಜಿ ಸ್ಮಾರಕ ನಿರ್ಮಾಣಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರ ₹10 ಕೋಟಿ ಅನುದಾನ ಮೀಸಲಿಟ್ಟಿತ್ತು. ಅದು ವಾಪಸ್ ಹೋಗಿದೆ, ಕಾಮಗಾರಿ ಪೂರ್ಣಗೊಳಿಸಲು ಪುನಃ ಅನುದಾನ ಬಿಡುಗಡೆಗೆ ಸಹಕಾರ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಸಚಿವ ಈಶ್ವರ ಖಂಡ್ರೆ ಅವರಿಗೆ ಸದನದಲ್ಲಿ ವಿನಂತಿಸಿದರು.
ಇದನ್ನೂ ಓದಿ : ಬೀದರ್ | ಸರ್ಕಾರಿ ಸೌಲಭ್ಯದಿಂದ ವಂಚಿತರಾದ ಅಂಗವಿಕಲ ಸಹೋದರಿಯರಿಗೆ ಬೇಕಿದೆ ಸಹಾಯಹಸ್ತ!
ಸಚಿವ ಈಶ್ವರ ಖಂಡ್ರೆ ಅವರು ಪ್ರಶ್ನೆಗೆ ಪ್ರತಿಕ್ರಿಯಿಸಿ, ʼಶಿವಸೃಷ್ಟಿ ನಿರ್ಮಾಣಕ್ಕೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ, ಅದು ನಿಮ್ಮ ತಪ್ಪು ಕಲ್ಪನೆ ಇದೆ. ಹೊಸ ಸರ್ಕಾರ ಬಂದ್ಮೇಲೆ ವಾಪಸ್ ಕೂಡ ಆಗಿಲ್ಲ. ಯಾವ ಅನುದಾನ ಬಿಡುಗಡೆಯೇ ಆಗಿಲ್ಲ, ಅಂದ್ರೆ ವಾಪಸ್ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲʼ ಎಂದು ಉತ್ತರಿಸಿದರು.