ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮೂಲಸೌಲಭ್ಯ ಹಾಗೂ ರಶೀದಿಗೆ ಮುನ್ನ ತುರ್ತು ಚಿಕಿತ್ಸೆಗೆ ಮೊದಲು ಆದ್ಯತೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಗುರುವಾರದಂದು ಜಿಲ್ಲಾ ಸರ್ಜನ್ ಸಿ ಮೋಹನ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
“ಜಿಲ್ಲಾ ಆಸ್ಪತ್ರೆಯ ಶೌಚಾಲಯ ಸೇರಿದಂತೆ ಹಲವು ಕಡೆ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿಲ್ಲ. ಇದರಿಂದ ರೋಗಿಗಳು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ನೀರು ಹಾಗೂ ಶೌಚಾಲಯದ ಸಮಸ್ಯೆ ಎದ್ದುಕಾಣುತ್ತಿದೆ. ಅಲ್ಲದೆ, ಹೊರಾಂಗಣದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಯಿಂದ ಇನ್ನಷ್ಟು ಸಮಸ್ಯೆಗಳು ಉದ್ಭವಿಸುತ್ತಿವೆ” ಎಂದು ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಇತ್ತೀಚಿನ ಆಹಾರ ಪದ್ಧತಿಯಿಂದ ಖಾಯಿಲೆಗಳು ಹೆಚ್ಚುತ್ತಿವೆ: ಡಾ ಸುಂದರ ಗೌಡ
“ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ ಬಡ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲವೆಂಬ ಆರೋಪಗಳು ಕೇಳಿಬರುತ್ತಿವೆ. ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವೇಳೆ ರೋಗಿಗಳ ಪರದಾಟ ಹೇಳತೀರದಾಗಿದೆ. ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಕೆಲವು ವೈದ್ಯರು ಖಾಸಗಿ ಕ್ಲಿನಿಕ್‌ಗಳನ್ನು ತೆರೆದಿದ್ದಾರೆ. ಕ್ಲಿನಿಕ್‌ನಲ್ಲಿ ರೋಗಿಗಳಿಗೆ ತೋರುವ ವಿಶೇಷ ಕಾಳಜಿಯನ್ನು, ಸರ್ಕಾರಿ ಆಸ್ಪತ್ರೆಯ ಕರ್ತವ್ಯದಲ್ಲಿ ತೋರದೆ ರೋಗಿಗಳಿಗೆ ತಾರತಮ್ಯ ಮಾಡುತ್ತಿದ್ದಾರೆ” ಎಂದು ಕರವೇ ಕಾರ್ಯಕರ್ತರು ಆರೋಪಿಸಿದರು.
