- ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಪರಿಶಿಷ್ಟರಿಗೂ ಮೀಸಲಾತಿ ನೀಡಿ
- ಕೇಂದ್ರ ಸರ್ಕಾರ ವ್ಯಾಪ್ತಿಯ 2 ಲಕ್ಷ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಿ
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮುಂದಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಪೂರಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರರ ಒಕ್ಕೂಟದ ಸದಸ್ಯರು ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಒಕ್ಕೂಟದ ಮುಖಂಡ ಶ್ರೀಧರ್ ಕಲಿವೀರ್ ಮಾತನಾಡಿ, ಜುಲೈ 7 ರಂದು ರಾಜ್ಯ ಬಜೆಟ್ ಮಂಡನೆ ಆಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಮಟ್ಟದ ಧರಣಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಬಜೆಟ್ ಮಂಡನೆ ವೇಳೆ ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ಅನುದಾನ ಹೆಚ್ಚಿಸಬೇಕು. ಅಂಬೇಡ್ಕರ್ ಬಂದು ಹೋಗಿರುವ ಹಾಸನ ನಗರದಲ್ಲಿ ಗುರುತಿಸಿರುವ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸಲು ₹20 ಕೋಟಿ ಅನುದಾನದೊಂದಿಗೆ 10 ಎಕರೆ ಭೂಮಿಯನ್ನು ಮೀಸಲಿರಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ಹಾಡುಪಾಡು’ ರಾಮು ಖ್ಯಾತಿಯ ಹಿರಿಯ ಪತ್ರಕರ್ತ ಟಿಎಸ್ ರಾಮಸ್ವಾಮಿ ನಿಧನ
ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ 2 ಲಕ್ಷ ಬ್ಯಾಕ್ ಲಾಗ್ ಹುದ್ದೆಗಳು ಖಾಲಿ ಇದ್ದು, ಕೂಡಲೇ ಹುದ್ದೆಗಳನ್ನು ಭರ್ತಿ ಮಾಡುವ ನೆಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೂ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಲಿಂಗರಾಜು, ಹರೀಶ್, ವಿಜಯಕುಮಾರ್ ಸೇರಿದಂತೆ ಇತರರು ಇದ್ದರು.