ಮೈಸೂರು ಜಿಲ್ಲೆ, ಹೆಗ್ಗಡದೇವನಕೊಟೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ವಿಶಿಷ್ಟ ಪಂಗಡ ಮತ್ತು ಬುಡಕಟ್ಟು ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ವಸತಿ ನಿಲಯ ಪಾಲಕರಿಗೆ ಮತ್ತು ಅಡುಗೆ ಸಿಬ್ಬಂದಿ ವರ್ಗದರಿಗೆ ‘ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆ ‘ ಬಗ್ಗೆ ತರಬೇತಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಶ್ರೀನಿವಾಸ್ ಅಡುಗೆಯವರು ಮತ್ತು ಅಡುಗೆ ಸಹಾಯಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ತಯಾರಿಸಿ ನೀಡಿದರೆ ಉತ್ತಮ ಸೇವೆ ನೀಡಿದಂತೆ ಎಂದರು.
ಕರ್ತವ್ಯಕ್ಕೆ ಹಾಜರಾಗುವ ಮುನ್ನ ಅಡುಗೆಯವರು ಮತ್ತು ಅಡುಗೆ ಸಹಾಯಕರು ಸ್ನಾನ ಮಾಡಿ, ಶುಚಿಭೂತರಾಗಿ ಪ್ರತಿದಿನ ಬೆಳಿಗ್ಗೆ 6 ಕ್ಕೆ ಕೆಲಸಕ್ಕೆ ಹಾಜರಾಗಬೇಕು. ಅಡುಗೆ ಮಾಡುವ ವೇಳೆಯಲ್ಲಿ ಸ್ವಚ್ಛವಾದ ಸಮವಸ್ತ್ರಗಳನ್ನು ಧರಿಸಿ ಕೆಲಸವನ್ನು ನಿರ್ವಹಿಸಬೇಕು ಮತ್ತು ಪ್ರತಿದಿನ ವಸತಿ ನಿಲಯ ಮತ್ತು ಆವರಣವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ವಿದ್ಯಾರ್ಥಿಗಳ ಟ್ರಂಕ್ ಗಳನ್ನು, ಹಾಸಿಗೆಗಳನ್ನು ಅಚ್ಚುಕಟ್ಟಾಗಿ ಜೋಡಿಸಬೇಕು ಮತ್ತು ವಸತಿ ಶಾಲೆ ವಿದ್ಯಾರ್ಥಿ ನಿಲಯವನ್ನು ಸ್ವಚ್ಛವಾಗಿರಿಸಬೇಕು. ಪಾತ್ರೆಯನ್ನು ತೊಳೆದು, ಅಡುಗೆ ಕೋಣೆಯನ್ನು ಸ್ವಚ್ಛ ಮಾಡಿ ಅಡುಗೆ ತಯಾರು ಮಾಡಲು ಪ್ರಾರಂಭಿಸಬೇಕು.
ತರಕಾರಿಗಳನ್ನು ಅಚ್ಚುಕಟ್ಟಾಗಿ ತೊಳೆದು, ಹುಳುಕು ಇತ್ಯಾದಿಗಳನ್ನು ತೆಗೆದು ನಂತರ ತರಕಾರಿಯನ್ನು ಅಡುಗೆಗೆ ಉಪಯೋಗಿಸಬೇಕು. ದಾಸ್ತಾನು ಕಡೆಯಿಂದ ಆಹಾರ ಸಾಮಗ್ರಿಗಳನ್ನು ಪಡೆದು ಸ್ವಚ್ಛಗೊಳಿಸಬೇಕು. ಸಾಮಗ್ರಿಗಳಲ್ಲಿ ಕಸ, ಕಡ್ಡಿ, ಕಲ್ಲು ಇದ್ದಲ್ಲಿ ಶುಚಿಗೊಳಿಸಿ ಆಹಾರ ತಯಾರು ಮಾಡಬೇಕು. ಎಲ್ಲಾ ವಿಧವಾದ ಕಾಳುಗಳನ್ನು ಮೊಳಕೆ ಕಟ್ಟಿ ಸಾಂಬಾರು ತಯಾರಿಸಲು ಉಪಯೋಗಿಸಬೇಕು. ಅಡುಗೆ ತಯಾರಿಕೆಗೆ ಶುದ್ಧವಾದ ನೀರನ್ನು ಉಪಯೋಗಿಸಬೇಕು. ಸಿದ್ಧಪಡಿಸಿದ ಆಹಾರದ ಮೇಲೆ ತಟ್ಟೆಗಳಿಂದ ಮುಚ್ಚಬೇಕು.
ವಿದ್ಯಾರ್ಥಿಗಳು ಶಾಲೆಗೆ ಹೋಗುವ ಬೆಳಗ್ಗೆ ಸರಿಯಾದ ಸಮಯಕ್ಕೆ ತಿಂಡಿ ತಯಾರು ಮಾಡಿಕೊಡಬೇಕು. ಬೆಳಗಿನ ತಿಂಡಿ 9 ಗಂಟೆಗೆ, ಮಧ್ಯಾಹ್ನದ ಊಟ 1-30ಕ್ಕೆ ಮತ್ತು ರಾತ್ರಿ ಊಟ 7-30 ರ ಸುಮಾರಿಗೆ ಕೊಡಬೇಕು. ವಿದ್ಯಾರ್ಥಿಗಳೊಂದಿಗೆ ಸಹಕಾರ ಮನೋಭಾವದಿಂದ ವರ್ತಿಸಬೇಕು. ವಿದ್ಯಾರ್ಥಿಗಳು ಹೊಡೆದಾಡಿಕೊಳ್ಳುವ ಹಾಗೆ ಮಾಡಬಾರದು. ಅವರನ್ನು ಜೋಪಾನವಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ತಾಲ್ಲೂಕು ಆಹಾರ ಸುರಕ್ಷತಾಧಿಕಾರಿಗಳಾದ ಡಾ. ರವಿಕುಮಾರ್ ಮಾತನಾಡಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 2011 ರ ಅನ್ವಯ ಎಲ್ಲಾ ವಸತಿ ನಿಲಯದ ನಿಲಯಪಾಲಕರು ಕಡ್ಡಾಯವಾಗಿ ಆಹಾರ ಪರವಾನಿಗೆಯನ್ನೂ ಪಡೆಯಬೇಕು. ಅಡುಗೆ ಸಿಬ್ಬಂದಿಯವರು ಅಡುಗೆ ಕೋಣೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಶುದ್ದವಾದ ಆಹಾರವನ್ನು ನೀಡಬೇಕು. ಅಡುಗೆ ಮಾಡಿದ ನಂತರ ಆಹಾರವನ್ನು ಮುಚ್ಚಿಡಬೇಕು. ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿ ನೀರನ್ನೇ ನೀಡಬೇಕು.
ಪಾತ್ರೆಗಳನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು. ಅಡುಗೆ ಮಾಡುವಾಗ ಹೆಡ್ ಕ್ಯಾಪ್ ಮತ್ತು ಗ್ಲೋಸ್ ಹಾಕಿಕೊಳ್ಳಬೇಕು. ಪ್ಲಾಸ್ಟಿಕ್ ಕವರ್ ಗಳನ್ನು ಉಪಯೋಗಿಸಬಾರದು. ತರಕಾರಿಗಳನ್ನು ತಂದ ನಂತರ ಒಂದು ಕೋಣೆಯಲ್ಲಿ ಅದನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೊಳೆತ ತರಕಾರಿಯನ್ನು ಅಡುಗೆಗೆ ಬಳಸಬಾರದು. ಮಕ್ಕಳಿಗೆ ನೀಡುವ ಆಹಾರದಲ್ಲಿ ಯಾವುದೇ ತೊಂದರೆ ಆದರೂ ಅಡುಗೆ ಸಿಬ್ಬಂದಿಯವರೇ ನೇರ ಜವಾಬ್ದಾರು ಎಂದು ತಿಳಿಸಿದರು.
ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಜನಾಂಗ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಹೇಶ್ ಮಾತನಾಡಿ, ವಸತಿ ನಿಲಯಗಳಲ್ಲಿ ವಸತಿ ನಿಲಯ ಪಾಲಕರ ಜವಾಬ್ದಾರಿಗಿಂತ ಅಡುಗೆಯವರ ಜವಾಬ್ದಾರಿ ಮುಖ್ಯವಾಗಿರುತ್ತದೆ. ಅಡುಗೆಯವರು ವಸತಿ ನಿಲಯದಲ್ಲಿ ಇರಬೇಕು, ಮಕ್ಕಳ ಯೋಗಕ್ಷೇಮವನ್ನೂ ವಿಚಾರಿಸಬೇಕು. ತಮ್ಮ ಮನೆಯನ್ನು ಸ್ವಚ್ಛಗೊಳಿಸುವ ಹಾಗೆ ವಸತಿ ನಿಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮಕ್ಕಳ ಆರೋಗ್ಯ ಮತ್ತು ಮಕ್ಕಳ ಸೌಕರ್ಯವನ್ನು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಸ್ವಾಮಿ ಮಾತನಾಡಿ ವಸತಿ ನಿಲಯದ ಖಾಲಿ ಜಾಗಗಳಲ್ಲಿ ತರಕಾರಿ, ಸೊಪ್ಪು ಮತ್ತು ಇನ್ನಿತರ ಗಿಡಗಳನ್ನು ನೆಡಬೇಕು. ತಾವೇ ಬೆಳೆದ ತರಕಾರಿ ಮತ್ತು ಸೊಪ್ಪುಗಳನ್ನು ವಿದ್ಯಾರ್ಥಿಗಳ ಅಡುಗೆಗೆ ಉಪಯೋಗಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಆರೋಗ್ಯವನ್ನು ನೋಡಿಕೊಳ್ಳಬೇಕು. ಅಡುಗೆ ಮಾಡಿದ ನಂತರ ಮನೆಗೆ ಹೋಗಬಾರದು. ವಸತಿ ನಿಲಯದಲ್ಲಿ ಕಡ್ಡಾಯವಾಗಿ ಉಳಿದುಕೊಳ್ಳಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ತುಳಿದಷ್ಟು ಪುಟಿದೇಳುವ ರಾಹುಲ್ ಎಂಬ ಜನನಾಯಕ
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ರವಿರಾಜ್, ಶರಣಪ್ಪ, ರಮಣಿ , ಅರ್ಚನಾ ಆಶೀಮ ಸುಲ್ತಾನ್, ರೇಖಾ, ಪ್ರತಾಪ್, ವಸತಿ ನಿಲಯದ ನಿಲಯ ಪಾಲಕರು, ಅಡುಗೆ ಸಿಬ್ಬಂದಿ ವರ್ಗದವರು ಇನ್ನಿತರರು ಇದ್ದರು.