ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ, ಮೂಡಬಿದ್ರೆ, ಬಂಟ್ವಾಳ, ವೇಣೂರು, ಕಾರ್ಕಳ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಯುವಕರೇ ಕಟ್ಟಿಕೊಂಡ ‘ವಿಧವೆಗೊಂದು ಆಸರೆ’ ತಂಡದಿಂದ ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ ಮಾಡಲಾಯಿತು.
ಈ ಬಾರಿ ವಿಧವೆಗೊಂದು ಆಸರೆ ಇದರ ಎರಡನೇ ವಾರ್ಷಿಕ ಹಾಗೂ ರಮಝಾನ್ ತಿಂಗಳ ಪ್ರಯುಕ್ತ ಗ್ರಾಮಾಂತರ ಪ್ರೇಶಗಳಲ್ಲಿ ವಾಸಿಸುತ್ತಿರುವ ವಿಧವೆ, ಅನಾಥ ಹಾಗೂ ಬಡ ಕುಟುಂಬಗಳಿಗೆ ಸುಮಾರು 123 ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಲಾಯಿತು.

“ಇಸ್ಲಾಮಿನಲ್ಲಿ ಕಲ್ಪಿಸಿದ ಅತ್ಯಂತ ಶ್ರೇಷ್ಠವಾದ ದಾನ ಅನ್ನದಾನ. ಯಾರ ಸಹಾಯ ಇಲ್ಲದೆ ತನ್ನ ಅನಾಥ ಮಕ್ಕಳನ್ನು ಸಾಕಲು ಕಷ್ಟಪಡುವ ಕುಟುಂಬಿಕರಿಗೆ ಹಾಗೂ ಪುರುಷರಿಲ್ಲದ ಬಡಕುಟುಂಬಗಳಿಗೆ ರೇಷನ್ ನೀಡುತ್ತಿದ್ದೇವೆ. ಜನರು ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದು, ನಾವು ಅದನ್ನು ಅರ್ಹ ಕುಟುಂಬಗಳಿಗೆ ತಲುಪಿಸುತ್ತಿದ್ದೇವೆ” ಎಂದು ‘ವಿಧವೆಗೊಂದು ಆಸರೆ’ ತಂಡದ ಸದಸ್ಯ ಅಶ್ರಫ್ ವೇಣೂರು ತಿಳಿಸಿದ್ದಾರೆ.

“ಸೋಷಿಯಲ್ ಮೀಡಿಯಾ ದುರ್ಬಳಕೆಯಾಗುತ್ತಿದೆ. ಅದರ ಮಧ್ಯೆಯೂ ಒಳ್ಳೆಯ ಕೆಲಸ ಮಾಡಬಹುದು ಎಂದು ನಮ್ಮ ತಂಡದ ಸದಸ್ಯರು ತೋರಿಸಿಕೊಟ್ಟಿದ್ದಾರೆ. 8 ಮಂದಿ ಅಡ್ಮಿನ್‌ಗಳನ್ನು ಹೊಂದಿರುವ ವಿಧವೆಗೊಂದು ಆಸರೆ ಗ್ರೂಪ್ ಮೂಲಕ ಪ್ರತಿ ತಿಂಗಳು ರೇಷನ್ ಕಿಟ್ ಸಂಗ್ರಹ ಮಾಡುತ್ತಿದ್ದೇವೆ. ನಮ್ಮ ಸಹಾಯವನ್ನು ಎದುರು ನೋಡುತ್ತ ಹಲವು ಕುಟುಂಬಗಳಿವೆ. ಅವರಿಗೂ ನೆರವು ನೀಡಲು ಇಚ್ಛಿಸುವವರು(9632035506) ನಮ್ಮ ಜೊತೆಗೆ ಕೈಜೋಡಿಸಬಹುದು” ಎಂದು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಹಮೀದ್ ಪುಂಜಾಲಕಟ್ಟೆ, ಅಶ್ರಫ್ ವೇಣೂರು, ಸಾಜಿ ಪುಂಜಾಲಕಟ್ಟೆ, ಆಸಿಫ್ ಪುಂಜಾಲಕಟ್ಟೆ, ಹನೀಫ್ ಮೂರ್ಜೆ, ಅಬ್ದುಲ್ ಸಲಾಂ ಪುಂಜಾಲಕಟ್ಟೆ, ಬಶೀರ್ ಕೆ.ಬಿ.ವೇಣೂರು, ಅಶ್ರಫ್ ಪುಂಜಾಲಕಟ್ಟೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
