ಕಲ್ಯಾಣ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತತ್ತರಿಸಿಹೋಗಿದ್ದಾರೆ. ಕಲುಷಿತ ನೀರು ಕುಡಿದು ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಸೇರಿದ್ದಾರೆ. ಕಲುಷಿತ ನೀರಿನಿಂದ ಸಂಭವಿಸಿದ ಪ್ರಕರಣಗಳಿಂದಾಗಿ ಈ ಭಾಗದ ಜನರು ನೀರು ಕುಡಿಯುವುದಕ್ಕೂ ಭಯ ಪಡುವ ಸನ್ನಿವೇಶವನ್ನು ಸೃಷ್ಟಿಸಿವೆ. ಕುಡಿಯುವ ನೀರಿನ ಸಮಸ್ಯೆ ಜನರನ್ನು ಬಾಧಿಸುತ್ತಿದ್ದರೂ, ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಣು-ಕಿವಿ ಮುಚ್ಚಿ ಕುಳಿತಿದ್ದಾರೆ. ಆಳುವವರ ನಿರ್ಲಕ್ಷ್ಯತನವನ್ನು ಬಿಜೆಪಿ ಶಾಸಕ ಬಸವರಾಜ್ ಮತ್ತಿಮುಡ್ ಪ್ರತಿನಿಧಿಸುವ ಕಲಬುರಗಿ ಗ್ರಾಮಾಂತರ ಕ್ಷೇತ್ರದ ಹಳ್ಳಿಗಳು ಎತ್ತಿ ತೋರಿಸುತ್ತಿವೆ.
ಕಲುಷಿತ ನೀರಿನಿಂದಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಕಲಬುರಗಿ ಗ್ರಾಮೀಣ ಕ್ಷೇತ್ರದ ಪತ್ರಿ ಹಳ್ಳಿಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾರೀ ಹುಮ್ಮಸ್ಸಿನಿಂದ ಉದ್ಘಾಟನೆಯನ್ನೂ ಮಾಡಿದ್ದರು. ಆದರೆ, ಉದ್ಘಾಟನೆಯಾಗಿದ್ದೇ ಭಾಗ್ಯವೆಂಬಂತೆ, ಅವುಗಳು ಅಂದಿನಿಂದ ಇಂದಿನವರೆಗೂ ಕಾರ್ಯಾಚರಣೆ ಆರಂಭಿಸಿಲ್ಲ. ಅವುಗಳಿಂದ ಶುದ್ಧ ಕುಡಿಯುವ ನೀರನ್ನು ಸ್ಥಳೀಯರು ಪಡೆಯಲೂ, ಕುಡಿಯಲೂ ಸಾಧ್ಯವಾಗಿಲ್ಲ.
ಅಲ್ಲದೆ, ಕ್ಷೇತ್ರದ ಹಲವಾರು ಹಳ್ಳಿಗಳಲ್ಲಿ ಶುದ್ಧ ನೀರಿನ ಘಟಕವನ್ನೂ ನಿರ್ಮಾಣ ಮಾಡಿಲ್ಲ. ಕ್ಷೇತ್ರದ ಸಿದ್ದೇಶ್ವರ ಬಡಾವಣೆ, ಕುಸುನೂರ್ ತಾಂಡಾ, ನಂದೂರ್ ತಾಂಡಾ ಕಿಣ್ಣಿ ಸಡಕ್, ಕುದಮುಡ್, ಕಟ್ಟಳ್ಳಿ, ಹಾರಕಂಚಿ, ಬಬಲಾದ್, ಓಕಳಿ, ಜಂಬಗಾ ಹಳ್ಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳೇ ಇಲ್ಲ. ಇಲ್ಲಿಯ ಜನರು ಶುದ್ಧ ಕುಡಿಯುವ ನೀರಿನ ಘಟಕಕ್ಕಾಗಿ ಕಾಯುತ್ತಿದ್ದಾರೆ.
ಘಟಕಗಳು ಇರುವ ಹಳ್ಳಿಗಳ ಪೈಕಿ, ನಂದೂರ್, ಕುಸುನೂರು, ಗಣಜಲಖೇಡ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು, ಅವುಗಳು ಬಳಕೆಗೆ ಬಾರದ ಸ್ಥಿತಿಯಲ್ಲಿವೆ.
ಹಲವೆಡೆ, ನೀರಿನ ಘಟಕಗಳ ಸುತ್ತಮುತ್ತ ಕಸ-ಕಡ್ಡಿ ತುಂಬಿಕೊಂಡಿದೆ. ಕೊಳಚೆ ನೀರು ನಿಂತು ಗಬ್ಬು ನಾರುತ್ತಿದೆ. ಆ ಕೊಳಚೆಯ ನಡುವೆಯೇ ನೀರು ತುಂಬಬೇಕಾದ ಅನಿವಾರ್ಯತೆ ಇದೆ. ಮಹಾಗಾಂವ, ನಂದೂರ್, ಕುಸುನೂರು ಗ್ರಾಮಗಳಲ್ಲಿ ಜನಸಂಖ್ಯೆ ಜಾಸ್ತಿ ಇದ್ದು, ಘಟಕವು 2 ಕಿ.ಮೀ ದೂರದಲ್ಲಿದೆ. ಅಷ್ಟು ದೂರ ಹೋಗಿ ನೀರು ತರುವುದು ಕಷ್ಟವೆಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಿದ್ದಾರೆ.
ಮಳೆಗಾಲದಲ್ಲಿ ನೀರು ಕಲುಷಿತಗೊಂಡು ಕುಡಿಯಲು ಯೋಗ್ಯವಾಗಿರುವುದಿಲ್ಲ. ಇದರಿಂದ ಜನರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತವೆ. ಕಲುಷಿತ ನೀರು ಸೇವಿಸುವುದರಿಂದ ವಾತಿಭೇದಿ ಕಾಣಿಸಿಕೊಂಡು, ಸಾವು-ನೋವುಗಳಾಗುತ್ತಿವೆ. ಇಷ್ಟೆಲ್ಲ ನಮ್ಮ ಕಣ್ಣೆದುರೇ ನಡೆಯುತ್ತಿದೆ. ಕುಡಿಯಲು ಶುದ್ಧ ಕುಡಿಯುವ ನೀರು ಒದಗಿಸುವುದು ಆಳುವವರ ಕರ್ತವ್ಯ ಅಲ್ಲವೇ ಎಂದು ಕ್ಷೇತ್ರದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀರಿನ ಸಮಸ್ಯೆ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಿದ್ದೇಶ್ವರ ಬಡಾವಣೆ ಗ್ರಾಮ ಪಂಚಾಯತಿ ಸದಸ್ಯ ಅಂಬರಾಯ, “ಕುಡಿಯುವ ನೀರಿನ ಘಟಕ ನಿರ್ಮಾಣದ ಬಗ್ಗೆ ಈ ಹಿಂದೆಯೇ ಶಾಸಕರ ಗಮನಕ್ಕೆ ತಂದಿದ್ದೇನೆ. ಈಗಲೂ ಮತ್ತೊಮ್ಮೆ ಶಾಸಕರಿಗೆ ಮನವಿ ಸಲ್ಲಿಸಿ, ಘಟಕ ನಿರ್ಮಾಣ ಮಾಡುವಂತೆ ಕೇಳುತ್ತೇನೆ” ಎಂದು ಹೇಳಿದ್ದಾರೆ.
ಮಾಜಿ ಗ್ರಾಮ ಪಂಚಾಯತ್ ಸದಸ್ಯರು ವಿಜಯಕುಮಾರ ರಾವುರ್ ಮಾತನಾಡಿ, “ಸಿದ್ದೇಶ್ವರ ಬಡಾವಣೆಯಲ್ಲಿ ಹಲವು ಮೂಲಭೂತ ಸೌಕರ್ಯಗಳು ಕೊರತೆ ಇವೆ. ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಮುಖ್ಯವಾಗಿ, ಶುದ್ಧ ಕುಡಿಯುವ ನೀರು ದೊರೆಯುವಂತೆ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮುಡ್ ಅವರನ್ನು ಈದಿನ.ಕಾಮ್ ಫೋನ್ ಮೂಲಕ ಸಂಪರ್ಕಿಸಲು ಯತ್ನಿಸಿದ್ದು, ಅವರು ಸಂಪರ್ಕಕ್ಕೆ ಸಿಗಲಿಲ್ಲ.