ಉಡುಪಿ ಜಿಲ್ಲೆಯ ಅಡಳಿತದಲ್ಲಿ ಕನ್ನಡ ಭಾಷೆಯು ಪ್ರತಿಶತಃ ನೂರರಷ್ಟು ಅನುಷ್ಠಾನವಾಗಬೇಕು. ಕನ್ನಡ ಭಾಷೆಯ ಬಳಕೆ ನಿರಂತರವಾಗಿರಲು ಕನ್ನಡ ಭಾಷೆ ಪರಿಣಾಮಕಾರಿ ಪ್ರಚಲಿತದಲ್ಲಿರಲು ಒತ್ತು ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಕರೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಭಾಷೆ ಉಳಿವಿಗಾಗಿ ಹೆಚ್ಚು ಸಂವೇದನಾಶೀಲತೆಯಿಂದ ಅಧಿಕಾರಿಗಳು ಕೆಲಸಮಾಡಬೇಕು. ಸರ್ಕಾರ ಕನ್ನಡ ಭಾಷೆ ಅನುಷ್ಠಾನಕ್ಕೆ ಅನೇಕ ಅದೇಶ ಹೊರಡಿಸಿದೆ. ಇದು ಸಮರ್ಪಕವಾಗಿ ಆಗಬೇಕು. ಕನ್ನಡ ಭಾಷೆಯನ್ನು ಆಡಳಿತದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು. ಜಿಲ್ಲಾಡಳಿತ ಕನ್ನಡ ಪರ ಸಂಘಟನೆಗಳೊಂದಿಗೆ ಕನಿಷ್ಠ ಮೂರು ತಿಂಗಳಿಗೊಮ್ಮೆ ಸಭೆಯನ್ನು ನಡೆಸುವುದರೊಂದಿಗೆ ಕನ್ನಡ ಭಾಷಾ ಅನುಷ್ಠಾನದ ಸಮಸ್ಯೆಗಳ ಕುರಿತು ಚರ್ಚಿಸಿ, ಕಾನೂನಾತ್ಮಕವಾಗಿ ಕನ್ನಡ ಅನುಷ್ಠಾನಕ್ಕೆ ಒತ್ತು ನೀಡಬೇಕು ಎಂದ ಅವರು, ಕನ್ನಡ ಭಾಷೆಯ ಪರ ಕಾನೂನಾತ್ಮಕವಾಗಿ ಹೋರಾಟ ನಡೆಸಿದ ಕನ್ನಡ ಪರ ಹೋರಾಟ ಸಂಘಟನೆಗಳ ಸದಸ್ಯರುಗಳ ಮೇಲೆ ಹಾಕಿರುವ ಪ್ರಕರಣಗಳನ್ನು ಸರ್ಕಾರ ವಾಪಾಸು ಪಡೆಯಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಬೇಕು ಎಂದರು.

ಜಿಲ್ಲೆಯಲ್ಲಿ ಶಿಕ್ಷಣ ಸೇರಿದಂತೆ ಉದ್ಯೋಗ ಅರಸಿ ಬಂದ ಹೊರರಾಜ್ಯದ ಕನ್ನಡಯೇತರಿಗೆ ಕನ್ನಡ ಕಲಿಯಲು ಉತ್ಸಾಹಕರಾಗಿದ್ದರೆ 20 ಜನ ಮೇಲ್ಪಟ್ಟಿದ್ದಲ್ಲಿ ಕನ್ನಡ ಪ್ರಾಧಿಕಾರದ ವತಿಯಿಂದ ಕಲಿಕಾ ಕೇಂದ್ರಗಳನ್ನು ತೆರೆದು ಕನ್ನಡವನ್ನು ಕಲಿಸಿ ಕೊಡುವ ಕಾರ್ಯ ಮಾಡಲಾಗುವುದು ಎಂದ ಅವರು, ಜಿಲ್ಲಾ ತರಬೇತಿ ಕೇಂದ್ರಗಳು ಕ್ರಿಯಾಶೀಲವಾಗಿ ಕಾರ್ಯಚಟುವಟಿಕೆ ನಡೆಸುವುದರೊಂದಿಗೆ ಕನ್ನಡ ಅನುಷ್ಟಾನಕ್ಕೆ ಮುಂದಾಗಬೇಕು ಎಂದರು. ಜಿಲ್ಲೆಯಲ್ಲಿರುವ ಮಲ್ಪೆ ಬೀಚ್‌ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಶಸ್ತ್ಯ ದೊರೆತಿದ್ದರೂ ವಾಣಿಜ್ಯ ಕಟ್ಟಡಗಳ ನಾಮಫಲಕಗಳು ಕನ್ನಡ ಭಾಷೆಯಲ್ಲಿ ಇರುವುದಿಲ್ಲ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಹಾಗೂ ಪ್ರವಾಸೋದ್ಯಮ ಇಲಾಖೆಯವರು ನಿಯಮಾನುಸಾರ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸಲು ಕ್ರಮ ವಹಿಸಬೇಕು ಎಂದ ಅವರು, ಐತಿಹಾಸಿಕ ಪ್ರಸಿದ್ದ ತಾಣಗಳ ಸವಿವರವನ್ನು ಕನ್ನಡ ಭಾಷೆಯಲ್ಲಿ ಪ್ರದರ್ಶಿಸುವ ಕೆಲಸವಾಗಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಜಿಲ್ಲೆಯ ಆಡಳಿತದಲ್ಲಿ ಕನ್ನಡ ಅನುಷ್ಟಾನ ಸಮರ್ಪಕವಾಗಿ ಅಗುತ್ತಿದೆ. ಜಿಲ್ಲೆಯಲ್ಲಿ ನಡೆಸುವ ಕೆ.ಡಿ.ಪಿ ಸಭೆಗಳಲ್ಲಿ ಕನ್ನಡ ಭಾಷೆಯ ಅನುಷ್ಠಾನ ಸಮಸ್ಯೆಯ ಕುರಿತು ಪ್ರಥಮ ಪ್ರಾಶಸ್ತ್ಯಡಿಯದಲ್ಲಿ ಆದ್ಯತೆ ನೀಡಲಾಗುವುದು. ಕನ್ನಡ ಭಾಷೆಯನ್ನು ಆಡಳಿತದಲ್ಲಿ ನಿಷ್ಠೆಯಿಂದ ಮಾಡಲು ಪ್ರತಿಯೊಬ್ಬ ಅಧಿಕಾರಿಗಳು ಮುಂದಾಗೋಣ ಎಂದ ಅವರು, ಇಂದಿನ ಸಭೆಯಲ್ಲಿ ನೀಡಿದ ಸಲಹೆ ಸೂಚನೆಗಳನ್ನು ಪಾಲಿಸುವುದರೊಂದಿಗೆ ಕನ್ನಡ ಭಾಷೆಗೆ ಮತ್ತಷ್ಟು ಒತ್ತು ನೀಡೋಣ ಎಂದರು.
ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನ್‌ಗಲ್, ಸದಸ್ಯರಾದ ಯಾಕೂಬ್ ಖಾದರ್ ಗುಲ್ವಾಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಅಪ್ತ ಕಾರ್ಯದರ್ಶಿ ಫಣಿಕುಮಾರ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.