ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿಯನ್ನು ಪುತ್ತೂರು ಬಿಜೆಪಿ ಮುಖಂಡನ ಪುತ್ರನೋರ್ವ ತಾಯಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆದಿದ್ದು, ಸಂತ್ರಸ್ತೆಯ ವಿದ್ಯಾರ್ಥಿನಿಯ ಪರ ವಿಶ್ವಕರ್ಮ ಸಮಾಜ ನಿಲ್ಲಲು ನಿರ್ಧರಿಸಿದೆ.
ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿಸಿ ಬಿಜೆಪಿ ಮುಖಂಡನ ಪುತ್ರ ಸದ್ಯ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವ ಕುರಿತು ವಿಶ್ವಕರ್ಮ ಒಕ್ಕೂಟದ ನೇತೃತ್ವದಲ್ಲಿ ಸಮಾಜದ ತುರ್ತು ಸಭೆಯು ಜು.2ರಂದು ಪುತ್ತೂರು ತಾಲೂಕಿನ ಕರ್ಮಲ ವಿಶ್ವಕರ್ಮ ಸಮಾಜ ಸೇವಾ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಸಮಾಜಬಾಂಧವರ ಅಭಿಪ್ರಾಯ ಪಡೆದು ಮುಂದೆ ಸಂತ್ರಸ್ತೆಯನ್ನು ಭೇಟಿ ಮಾಡಿ ಅಲ್ಲಿಂದ ಮಹಿಳಾ ಪೊಲೀಸ್ ಠಾಣೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಯವರಿಗೆ ಮನವಿ ನೀಡಿ ಒಂದೆರಡು ದಿನದಲ್ಲಿ ಯಾವುದೇ ಬೆಳವಣಿಗೆ ಕಂಡು ಬಾರದಿದ್ದಲ್ಲಿ ಸಮಾಜ ಬಾಂಧವರನ್ನು ಒಂದುಗೂಡಿಸಿ ಪ್ರತಿಭಟನೆ ನಡೆಸುವುದಾಗಿ ನಿರ್ಣಯಿಸಲಾಯಿತು.
ಸಭೆಯಲ್ಲಿ ವಿಶ್ವಕರ್ಮ ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಅವರು ಮಾತನಾಡಿ, “ಇವತ್ತು ನಮ್ಮ ಸಮಾಜ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ಸಂತ್ರಸ್ತೆ ಮತ್ತು ತಾಯಿ ನಮ್ಮಲ್ಲಿ ಬಂದಿಲ್ಲ ಎಂಬ ವಿಷಯ ಬೇಡ. ಒಗ್ಗಟ್ಟು ಹಾಗೆ ಹೀಗೆ ಹೇಳುವಾಗ ನಮ್ಮ ಹಿಂದೂ ಮಗಳಿಗೆ ಅನ್ಯಾಯ ಆದಾಗ ಸುಮ್ಮನೆ ಕೂತುಕೊಳ್ಳಲಾಗುವುದಿಲ್ಲ. ನಮ್ಮ ಸಮುದಾಯವೇ ಆಗಲಿ ಇನ್ನೊಂದು ಸುಮದಾಯವೇ ಆಗಲಿ ಅದು ಸಣ್ಣ ವಿಷಯವಲ್ಲ. ವಿಶ್ವಕರ್ಮ ಸಮಾಜದವರು ಅಂದ್ರೆ ಅಷ್ಟೊಂದು ಕೀಳು ಭಾವನೆ ಏಕೆ?” ಎಂದು ಪ್ರಶ್ನಿಸಿದರು.
“ಬಿಜೆಪಿ ಮುಖಂಡನ ಮಗ ನಮ್ಮ ಸಮಾಜದ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದ್ದಾನೆ. ಈ ಕುರಿತು ನಾವು ಮೊದಲು ಆಕೆಯ ಮನೆಗೆ ಹೋಗಿ ಮಾತನಾಡಿ ಬಳಿಕ ಎಸ್ಪಿಗೆ ಮನವಿ ಕೊಡುವುದು. ಆ ಬಳಿಕ ಪೊಲೀಸರು ಕ್ರಮ ಸರಿಯಾಗಿ ಕೈಗೊಳ್ಳದಿದ್ದಲ್ಲಿ ನಾವು ಅನ್ಯಾಯ ಮಾಡಿದ ಯುವಕನ ಮನೆ ಮುಂದೆ ಮತ್ತು ಪೊಲೀಸ್ ಠಾಣೆ ಮುಂದೆ ಉಗ್ರ ಪ್ರತಿಭಟನೆ ಮಾಡಲಿದ್ದೇವೆ” ಎಂದರು.
“ಶಾಸಕರೇ ಕುದ್ದು ನಿಂತು ಮದುವೆ ಮಾಡಿಸಲಿ”
ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಶಾಸಕರ ಮನವಿಯಂತೆ ಮದುವೆ ಮಾತುಕತೆ ಮತ್ತು ಮುಚ್ಚಳಿಕೆಯನ್ನು ಆರೋಪಿಯ ತಂದೆ ಕೊಟ್ಟಿದ್ದಾರೆ. ಆ ಬಳಿಕ ಹುಡುಗ ಮದುವೆಯಾಗಲು ಒಪ್ಪದೆ ಮೋಸ ಮಾಡಿದ್ದಾನೆ. ಈಗ ಶಾಸಕರೇ ಖುದ್ದು ನಿಂತು ಅವರಿಗೆ ಮದುವೆ ಮಾಡಿ ಕೊಡಬೇಕು. ಯಾಕೆಂದರೆ ಅವರು ಈಗಾಗಲೇ ಈ ಪ್ರಕರಣಕ್ಕೆ ಎಂಟ್ರಿ ಆಗಿದ್ದಾರೆ. ನಾವು ಈಗ ಶಾಸಕರಲ್ಲಿ ಹೋಗಿ ಮನವಿ ಕೊಡಬೇಕಾಗಿದೆ. ಮಾಡಿಲ್ಲ ಎಂದರೆ ಮುಂದೆ ವಿಶ್ವಕರ್ಮದವರು ಸಂತ್ರಸ್ತೆಗೆ ನ್ಯಾಯ ಕೊಡುವ ತನಕ ಹೋರಾಟ ಮಾಡಬೇಕಾಗಿದೆ ಎಂದು ಮಧು ಆಚಾರ್ಯ ಹೇಳಿದರು.
ಹೆಣ್ಣಿಗೆ ಅನ್ಯಾಯ ಆಗಿದ್ದರೂ ಸಂಘಪರಿವಾರ, ಹಿಂದೂ ಮುಖಂಡರು ಮೌನ
ರಾಜಕೀಯ ಪಕ್ಷದಲ್ಲಿ ನಮ್ಮ ಸಮಾಜದವರಿಗೆ ಯಾವ ಸೀಟ್ ಕೊಡುವುದಿಲ್ಲ. ನಮಗೆ ದೊಡ್ಡ ಅನ್ಯಾಯ ಆಗಿದೆ. ಸಂತ್ರಸ್ತೆಯ ಕುರಿತು ನಮ್ಮವರಲ್ಲಿ ವಿಚಾರಿಸಿದರೆ ಯಾರೋ ಎನೋ ಆಗಿದೆ ಎಂದು ಹೇಳಿದವರೂ ಇದ್ದಾರೆ. ಆರೋಪಿಯ ತಂದೆ ಬಿಜೆಪಿ ಮುಖಂಡರಾಗಿರಬಹುದು, ಜ್ಯೋತಿಷಿ ಆಗಿರಬಹುದು, ದೇವಸ್ಥಾನದಲ್ಲಿ ಇರಬಹುದು. ನಾವೆಲ್ಲ ಒಗ್ಗಟ್ಟಿನಲ್ಲಿರಬೇಕು. ನಮ್ಮಲ್ಲಿ ಅದು ಇದು ಇಲ್ಲ. ಹೆಣ್ಣಿಗೆ ಅನ್ಯಾಯ ಆದ್ರೂ ಸಂಘಪರಿವಾರ, ಹಿಂದೂ ಮುಖಂಡರು ಮೌನ ವಹಿಸಿರುವುದು ಯಾಕೆ ಎಂದು ಮಧು ಆಚಾರ್ಯ ಪ್ರಶ್ನಿಸಿದ್ದಾರೆ.
ನಮ್ಮಲ್ಲಿ ಅದು ಇದು ಇಲ್ಲ. ನಾವೆಲ್ಲ ಒಂದು. ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ಯಾಯ ಆಗಲು ನಮ್ಮ ಒಕ್ಕೂಟ ಬಿಡುವುದಿಲ್ಲ. ನಮಗೆ ಯಾರನ್ನು ಗೆಲ್ಲಿಸಲಾಗದಿದ್ದರೂ ಸೋಲಿಸಲಂತು ಖಂಡಿತಾ ಆಗುತ್ತದೆ ಎಂದು ಮಧು ಆಚಾರ್ಯ ಹೇಳಿದರು.
ಇದನ್ನು ಓದಿದ್ದೀರಾ? ಪುತ್ತೂರಿನಲ್ಲೊಂದು ʼಲವ್ ಸೆಕ್ಸ್ ದೋಖಾʼ ಪ್ರಕರಣ; ಹಿಂದುತ್ವದ ಹುಲಿಗಳು ಈಗ ಎಲ್ಲಿ ಅವಿತಿದ್ದಾರೆ?
ಸಭೆಯಲ್ಲಿ ಅವಿಭಜಿತ ದ.ಕ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುರಳೀಧರ ಆಚಾರ್ಯ, ಉಪಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಹರ್ಷವರ್ದನ್ ನಿಟ್ಟೆ, ಜಯರಾಮ ಆಚಾರ್ಯ ಸಾಲಿಗ್ರಾಮ, ಜಯರಾಮ ಆಚಾರ್ಯ ಕುಳಾಯಿ, ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಗೌರವಾಧ್ಯಕ್ಷ ಜನಾರ್ಧನ ಆಚಾರ್ಯ ಕಾಣಿಯೂರು, ವಿಶ್ವಕರ್ಮ ಬೀರಮಲೆ ಅಧ್ಯಕ್ಷ ಗಂಗಾದರ ಆಚಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ಇಂದಿರಾ ಪುರುಷೋತ್ತಮ ಆಚಾರ್ಯ, ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ, ಪುರಸಭೆ ಮಾಜಿ ಸದಸ್ಯ ಉದಯ ಆಚಾರ್ಯ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.