ಬೈಕ್‌ನಲ್ಲಿ ತೆರಳುವಾಗ ರಸ್ತೆಗೆ ಬಿದ್ದು ಗಾಯಗೊಂಡಿದ್ದ ಅರ್ಚಕನನ್ನು ಮುಸ್ಲಿಂ ಮುಖಂಡರು ರಕ್ಷಿಸಿದ್ದು, ಅವರನ್ನು ಸಮೀಪವೇ ಇದ್ದ ಮಸೀದಿಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ. ಮುಸ್ಲಿಂ ಮುಖಂಡರ ಉಪಚಾರವನ್ನು ಹಲವರು ಶ್ಲಾಘಿಸಿದ್ದು, ಇದೇ ಸೌಹಾರ್ದ ಕರ್ನಾಟಕದ ಪರಂಪರೆ ಎಂದಿದ್ದಾರೆ.
ಕೋಮುವಾದಿಗಳ ಪ್ರಯೋಗ ಶಾಲೆ ಎಂಬ ಕುಖ್ಯಾತಿಗೆ ಗುರಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಕರಾವಳಿ ಭಾಗದಲ್ಲಿ ಸೌಹಾರ್ದತೆ, ಸಹಬಾಳ್ವೆ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿದೆ.
ಪುತ್ತೂರುನ ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಘಟನೆ ನಡೆದಿದೆ. ಬಿದ್ದು ಗಾಯಗೊಂಡಿದ್ದ ಅರ್ಚಕ ರಘುರಾಮ್ ಭಟ್ ಅವರಿಗೆ ಮುಸ್ಲಿಂ ಮುಖಂಡರು ಚಿಕಿತ್ಸೆ ನೀಡಿ ಉಪಚರಿಸಿದ್ದಾರೆ. ಮಾನವೀಯತೆ ಮರೆದಿದ್ದಾರೆ.
ಅರ್ಚಕ ರಘುರಾಮ್ ಭಟ್ ಅವರು ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯದಲ್ಲಿರುವ ಶಾಸ್ತಾರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಅವರು ಬೈಕ್‌ನಲ್ಲಿ ತೆರಳುವಾಗ ಕುಂಬ್ರ ಬದ್ರಿಯಾ ಮಸೀದಿಯ ಎದುರು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಅವರ ಕಾಲಿಗೆ ಪೆಟ್ಟು ಬಿದ್ದು, ರಕ್ತಸ್ರಾವ ಆಗುತ್ತಿತ್ತು. ಅವರನ್ನು ಕಂಡ ಮುಸ್ಲಿಂ ಮುಖಂಡರು ತಕ್ಷಣವೇ ಅವರನ್ನು ಮಸೀದಿಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ್ದಾರೆ ಬಳಿಕ, ಅವರನ್ನು ಆಟೋ ಚಾಲಕ ಬಶೀರ್ ಕಡ್ತಿಮಾರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಸೀದಿಗೆ ಮರಳಿದ ಅರ್ಚಕ, ಮಸೀದಿಯಲ್ಲೇ ಕೆಲ ಗಂಟೆಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ. ಬಳಿಕ ಅವರನ್ನು ಮುಸ್ಲಿಂ ಮುಖಂಡರು ಮನೆಗೆ ಕಳುಹಿಸಿಕೊಟ್ಟಿದ್ದಾರೆ.