ಬಿಜೆಪಿ ಮುಖಂಡನ ಪುತ್ರ ಶ್ರೀಕೃಷ್ಣ ಜೆ. ರಾವ್ ನಿಂದ ಅತ್ಯಾಚಾರ, ವಂಚನೆಗೆ ಒಳಗಾದ ಸಹಪಾಠಿ ವಿದ್ಯಾರ್ಥಿನಿ ಜನ್ಮ ನೀಡಿರುವ ಮಗುವಿನ ಡಿಎನ್‌ಎ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ.
ಮಂಗಳವಾರ ಪುತ್ತೂರಿನ ನ್ಯಾಯಾಲಯದಲ್ಲಿ ಡಿಎನ್‌ಎ ಪರೀಕ್ಷೆಗೆ ಸಂತ್ರಸ್ತೆ ಮಗು ಹಾಗೂ ಆರೋಪಿಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಶ್ರೀಕೃಷ್ಣನನ್ನು ಪೊಲೀಸರು ಮಂಗಳವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಸಂತ್ರಸ್ತೆ, ಆಕೆಯ ಮಗು ಮತ್ತು ಸಂತ್ರಸ್ತೆಯ ತಾಯಿ ಹಾಜರಿದ್ದರು.
ಇದನ್ನೂ ಓದಿ: ಮಂಗಳೂರು | ಕಡಬ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ
ನ್ಯಾಯಾಧೀಶರ ಸಮ್ಮುಖದಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರ ನೇತೃತ್ವದಲ್ಲಿ ವಿಧಿವಿಜ್ಞಾನ ಇಲಾಖೆಯ ಸಿಬ್ಬಂದಿ ಮೂವರ ರಕ್ತದ ಮಾದರಿಗಳನ್ನು ಪಡೆದುಕೊಂಡಿದ್ದಾರೆ. ಅವುಗಳನ್ನು ಡಿಎನ್‌ಎ ಪರೀಕ್ಷೆಗಾಗಿ ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮಹಿಳಾ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರು ಬಸ್‌ನಲ್ಲಿ ರಕ್ತದ ಮಾದರಿಯನ್ನು ಬೆಂಗಳೂರಿಗೆ ಕೊಂಡೊಯ್ದರು. ಈ ವೇಳೆ ಸಂತ್ರಸ್ತೆಯ ತಾಯಿಯೂ ಪೊಲೀಸ್ ಸಿಬ್ಬಂದಿಯೊಂದಿಗೆ ಬೆಂಗಳೂರಿಗೆ ತೆರಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಒಂದು ವಾರದಲ್ಲಿ ಎಫ್‌ಎಸ್‌ಎಲ್ ವರದಿ ಬರುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪಣ ಪಟ್ಟಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವುದಾಗಿ ತಿಳಿದು ಬಂದಿದೆ.