ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಖಾಝಿ ಕಾಯ್ದೆ ರದ್ದುಗೊಂಡಿಲ್ಲ. ಆದರೂ ವಕ್ಫ್ ಇಲಾಖೆಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಸಮುದಾಯದ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಖಾಝೀಸ್ ವೆಲ್‌ಫೇರ್ ಅಂಜುಮನ್ ಟ್ರಸ್ಟ್ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ರಾಯಚೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಖಾಝೀಸ್ ವೆಲ್‌ಫೇರ್ ಅಂಜುಮನ್ ಟ್ರಸ್ಟ್ ಕಾರ್ಯದರ್ಶಿ ಮೊಹಮ್ಮದ್ ಆದಂ ಖಾನ್, “ಒಂದು ತಿಂಗಳೊಳಗೆ ಕಲ್ಬುರ್ಗಿ ಹೈಕೋರ್ಟ್ ಆದೇಶದಂತೆ ಖಾಝಿಗಳಿಗೆ ಅವಕಾಶ ನೀಡದೆ ಹೋದಲ್ಲಿ ನ್ಯಾಯಾಂಗ ನಿಂದನೆ ಕೇಸು ದಾಖಲಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
“2012 ಮಾರ್ಚ್ 19ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ ಕಲ್ಯಾಣ ಕರ್ನಾಟಕ ಜಿಲ್ಲೆ ಹೊರತುಪಡಿಸಿ ಖಾಝಿ ಕಾಯ್ದೆ ರದ್ದುಗೊಳಿಸಿದೆ. ಅಧಿಸೂಚನೆ ಕಲಂ 4(1) ಮತ್ತು (3)ರಲ್ಲಿ ಉಲ್ಲೇಖಿಸಿರುವಂತೆ ಖಾಝಿಗಳಿಗೆ ಮದುವೆ ಪ್ರಮಾಣ ಪತ್ರ ನೀಡಲು ಅಧಿಕಾರ ಮಂದುವರೆಸಿದೆ. ಆದರೆ ಕೆಲವು ಅಧಿಕಾರಿಗಳು ಖಾಝಿಗಳಿಗೆ ಅಧಿಕಾರ ರದ್ದುಗೊಂಡಿದ್ದು, ಮಸೀದಿ ಕಮಿಟಿಗಳಿಗೆ ಅಧಿಕಾರ ನೀಡಿರುವುದಾಗಿ ತಪ್ಪು ಮಾಹಿತಿ ನೀಡುತ್ತಿರುವ ಕುರಿತು ವಕ್ಫ್ ಸಚಿವರು, ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ” ಎಂದರು.
ಖಾಝಿಗಳಿಗೆ ಇರುವ ಅಧಿಕಾರ ಕುರಿತಂತೆ ಕಲ್ಬುರ್ಗಿ ಹೈಕೋರ್ಟಿನಲ್ಲಿ ದೂರು ದಾಖಲಿಸಲಾಗಿತ್ತು. ದೂರಿನ ವಿಚಾರಣೆ ನಡೆಸಿ ಹೈಕೋರ್ಟ್ ಆದೇಶ ನೀಡಿದೆ. ಕಲ್ಯಾಣ ಕರ್ನಾಟಕದಲ್ಲಿ ಖಾಝಿಗಳಿಗೆ ಅಧಿಕಾರ ಮುಂದುವರೆಸಿದ್ದು, ಮಸೀದಿ ಕಮಿಟಿಗಳಿಗೆ ಅಧಿಕಾರವಿಲ್ಲ ಎಂದು ಸ್ಪಷ್ಟತೆಯನ್ನು ನೀಡಿದೆ. ವಕ್ಫ್ ಇಲಾಖೆಗೆ ಯಾವುದೇ ಅಧಿಕಾರ ಇಲ್ಲದೇ ಇದ್ದರೂ ಮಧ್ಯಪ್ರವೇಶಿಸಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಮೊಹಮ್ಮದ್ ಆದಂ ಖಾನ್ ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಫಲಶೃತಿ | ಬೆಳಗಾವಿ: ಶಾಲಾ ಶೌಚಾಲಯ ಸಮಸ್ಯೆ; ತಾತ್ಕಾಲಿಕ ಪರಿಹಾರ ಕಲ್ಪಿಸಿದ ಅಧಿಕಾರಿಗಳು
ವಕ್ಫ್ ಕಾಯ್ದೆ 1995ರಂತೆ ಖಾಝಿಗಳನ್ನು ನೇಮಿಸುವ ಅಧಿಕಾರ ವಕ್ಫ್ ಕಮಿಟಿಗೆ ಇಲ್ಲ. ಕಲ್ಯಾಣ ಕರ್ನಾಟಕ ಹೊರತುಪಡಿಸಿ ಉಳಿದ 24 ಜಿಲ್ಲೆಗಳಲ್ಲಿ ಮಾತ್ರ ಖಾಝಿ ಕಾಯ್ದೆ ಸಮಾಪನಗೊಂಡಿದೆ. ದುರುದ್ದೇಶಪೂರ್ವಕವಾಗಿ ಖಾಝಿಗಳ ಸೇವೆ ರದ್ದುಗೊಂಡಿದೆ ಸುಳ್ಳು ಹರಡುವದನ್ನು ನಿಲ್ಲಿಸಬೇಕು. ವಕ್ಫ್ ಸಚಿವರು ಕೂಡಲೇ ಸ್ಪಷ್ಟತೆ ನೀಡಬೇಕು. ಒಂದು ತಿಂಗಳೊಳಗೆ ಕ್ರಮವಾಗದೇ ಇದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಖಾಝೀಸ್ ವೆಲ್‌ಫೇರ್ ಅಂಜುಮನ್ ಟ್ರಸ್ಟ್ ಅಧ್ಯಕ್ಷ ಖಾಝಿ ಮೀರ್ ಇಬ್ರಾಹಿಂ ಅಲಿ, ಸೈಯದ್ ಜಾಫರ್ ಹುಸೇನ್ ಖಾದ್ರಿ, ಎಂ.ಡಿ.ಅಬ್ದುಲ್ಲಾ ಖಾಝಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಖಾಝಿಗಳು ಉಪಸ್ಥಿತರಿದ್ದರು.
