ಬೀದರ್ ಜಿಲ್ಲೆಗೆ ಡಿಡಿಪಿಐ ಬಂದು ಎರಡು ವರ್ಷವಾಯ್ತು, ನಾನು ಇಲ್ಲಿಯವರೆಗೆ ಅವರ ಮುಖ ನೋಡಿಲ್ಲ. ಅವರು ತಾಲ್ಲೂಕಿಗೆ ಒಮ್ಮೆಯೂ ಭೇಟಿ ನೀಡಿಲ್ಲ, ಸಭೆ ನಡೆಸಿಲ್ಲ. ಶಿಕ್ಷಣ ಸುಧಾರಣೆ ಕುರಿತು ಅನೇಕ ಬಾರಿ ಕರೆ ಮಾಡಿದರೂ ಅವರು ಸ್ಪಂದಿಸಲಿಲ್ಲ. ಹೀಗಾಗಿ ಔರಾದ್ ತಾಲ್ಲೂಕಿನ ಶಿಕ್ಷಣದ ಗುಣಮಟ್ಟ ಕುಸಿದಿದೆʼ ಎಂದು ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ ಹೇಳಿದರು.
ಔರಾದ್ ತಾಲ್ಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ಜ.30ರಂದು ಗ್ರಾಮ ವಾಸ್ತವ್ಯ ನಡೆಸಿ, ಜ.31ರಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಮೇಲಿನಂತೆ ಹೇಳಿದರು.
ಡಿಡಿಪಿಐ ಹಾಗೂ ಔರಾದ್ ಬಿಇಒ ಅವರ ಇಚ್ಚಾಶಕ್ತಿ ಕೊರತೆಯಿಂದ ಕಳೆದ ಎರಡು ವರ್ಷಗಳಲ್ಲಿ ಔರಾದ್ ತಾಲ್ಲೂಕಿನಲ್ಲಿ ಶಿಕ್ಷಣದ ಗುಣಮಟ್ಟ ಸಂಪೂರ್ಣ ಕುಸಿದಿದೆ. ಈ ಹಿಂದೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅತ್ಯಂತ ಸುಧಾರಣೆ ಕಂಡಿತು, ಆದರೆ ಕಳೆದ ಎರಡು ವರ್ಷಗಳಲ್ಲಿ ಅತ್ಯಂತ ಕಳಪೆ ಸಾಧನೆಯಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆಯುವೆʼ ಎಂದು ತಿಳಿಸಿದರು.
ʼಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 16 ವರ್ಷಗಳಿಂದ ಗ್ರಾಮ ಸಂಚಾರ ನಡೆಸುತ್ತಿದ್ದೇನೆ. ಬಹುಶಃ ದೇಶದಲ್ಲಿ ಈ ರೀತಿ ಗ್ರಾಮ ಸಂಚಾರ ಯಾರೂ ಮಾಡುವುದಿಲ್ಲ. ತಾಲ್ಲೂಕು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ದೃಷ್ಟಿಯಿಂದ ಈ ವರ್ಷ ಜ.6 ರಿಂದ 28 ದಿನ ನಡೆದ ಗ್ರಾಮ ಸಂಚಾರದಲ್ಲಿ 157 ಗ್ರಾಮಗಳಿಗೆ ಭೇಟಿ ನೀಡಿದ್ದೇನೆ’ ಎಂದರು.
‘ಅನೇಕ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಶಾಲಾ ಕೊಠಡಿ, ಸಮುದಾಯ ಭವನ ಸೇರಿದಂತೆ ಮೂಲ ಸೌಲಭ್ಯಕ್ಕಾಗಿ ಒಟ್ಟು ₹30 ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಗ್ರಾಮ ಸಂಚಾರದ ಕೊನೆಯ ದಿನವಾದ ಜ.30 ರಂದು ವಡಗಾಂವ ಗ್ರಾಮದಲ್ಲಿ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಲು ಪ್ರಯತ್ನಿಸಿದ್ದೇನೆʼ ಎಂದರು.
ʼಮೊದಲಿನಿಂದಲೂ ತಾಲ್ಲೂಕಿನ ಶಿಕ್ಷಣ ಸುಧಾರಣೆಗಾಗಿ ಎಲ್ಲ ರೀತಿಯ ಸಹಕಾರ ನೀಡುತ್ತಾ ಬಂದಿದ್ದೇನೆ. ಈ ವರ್ಷ ಕೂಡ ಶಿಕ್ಷಣ ಸುಧಾರಣೆಗೆ ಹೆಚ್ಚಿನ ಅನುದಾನ ನೀಡಿದ್ದೇನೆ. ಆದರೆ ಗ್ರಾಮ ಸಂಚಾರದ ವೇಳೆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರೆ, ಶಿಕ್ಷಕರ ಕೊರತೆ, ಮಕ್ಕಳ ದಾಖಲಾತಿ ಕುಸಿತ, ಶಿಕ್ಷಣದ ಗುಣಮಟ್ಟ ಎದ್ದು ಕಾಣುತ್ತಿತ್ತು, ಇದರಿಂದ ತುಂಬಾ ನೋವಾಗಿದೆ. ಯಾರೂ ಶಿಕ್ಷಣದ ಜೊತೆ ಚೆಲ್ಲಾಟ ಆಡಬೇಡಿʼ ಎಂದು ಎಚ್ಚರಿಕೆ ನೀಡಿದರು.
ʼಗ್ರಾಮ ಸಂಚಾರ ವೇಳೆ ತಾಲ್ಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ನನ್ನೊಂದಿಗೆ ಬಂದಿದ್ದಾರೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದೆರಡು ದಿನ ಮಾತ್ರ ಬಂದಿದ್ದಾರೆ. ತೋರಣವಾಡಿ, ಲಿಂಗದಳ್ಳಿ, ಬೆಡಕುಂದಾ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಅಧಿಕವಾಗಿದೆ, ಆದರೆ ಮಕ್ಕಳ ದಾಖಲಾತಿ ಕಡಿಮೆ ಇದೆ. ಇನ್ನು ಕೆಲವೆಡೆ ದಾಖಲಾತಿ ಇದ್ದರೂ ಶಿಕ್ಷಕರ ಕೊರತೆಯಿದೆ. ಇದೆಲ್ಲವೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಪಡಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ :
ತಾಲ್ಲೂಕಿನ ಅಂಗನವಾಡಿಗಳಿಗೆ ಸಂಪೂರ್ಣ ಕಳಪೆ ಆಹಾರ ಪೂರೈಕೆಯಾಗುತ್ತಿದ್ದು, ಇಂತಹ ಆಹಾರ ಮಕ್ಕಳಿಗೆ ಕೊಡಬೇಕಾ ಎಂದು ಪತ್ರಿಕಾಗೋಷ್ಠಿಯಲ್ಲಿ ಕಳಪೆ ಮಟ್ಟದ ಬೆಲ್ಲ, ಹೆಸರು ಕಾಳು, ಹಿಟ್ಟು ಪೊಟ್ಟಣಗಳನ್ನು ಮಾಧ್ಯಮದ ಎದುರು ಪ್ರದರ್ಶಿಸಿದರು.
‘ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡಲಾಗುತ್ತಿತ್ತು. ಆದರೆ ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ನಂತರ ಸ್ಥಳೀಯ ಎಜೆನ್ಸಿಗಳ ಮೂಲಕ ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ ಮಾಡುತ್ತಿರುವುದು ಖಂಡನೀಯ’ ಎಂದರು.
‘ಕ್ಷೇತ್ರದ ಬಹುತೇಕ ಅಂಗನವಾಡಿಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿದ್ದರೂ ಹಾಜರಾತಿ ಬೆರಳಣಿಕೆಯಷ್ಟಿದೆ. ಆದರೆ ಗೈರಾದ ಮಕ್ಕಳಿಗೆ ಆಹಾರ ಪೂರೈಕೆ ಮಾಡದಿದ್ದರೂ ಬಿಲ್ ಮಾಡಲಾಗುತ್ತಿದೆʼ ಎಂದು ದೂರಿದರು.
3 ವರ್ಷ ಕಳೆದರೂ ಪೂರ್ಣಗೊಳ್ಳದ ಜೆಜೆಎಂ ಕಾಮಗಾರಿ :
ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಜಾರಿಯಾದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಲ ಜೀವನ್ ಮಿಷನ್ ಯೋಜನೆಯಡಿ (ಜೆಜೆಎಂ) ಔರಾದ್ ಕ್ಷೇತ್ರಕ್ಕೆ ಒಟ್ಟು ₹250 ಕೋಟಿ ಅನುದಾನ ಮಂಜೂರಾಗಿತ್ತು. ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಬಹುತೇಕ ಕಡೆ ಶಂಕುಸ್ಥಾಪನೆ ಸಹ ನೆರೆವೇರಿಸಲಾಗಿತ್ತು. ಆದರೆ ಮೂರು ವರ್ಷ ಕಳೆದರೂ ತಾಲ್ಲೂಕಿನಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲʼ ಎಂದು ಹೇಳಿದರು.
ʼಕ್ಷೇತ್ರದಲ್ಲಿ ಒಟ್ಟು 276 ಕಡೆ ಜೆಜೆಎಂ ಕಾಮಗಾರಿ ನಡೆಯುತ್ತಿದ್ದು, ಅದರಲ್ಲಿ 40 ಕಡೆ ಮಾತ್ರ ಕಾಮಗಾರಿ ಪೂರ್ಣಗೊಂಡಿದ್ದರೂ ಕೆಲವೆಡೆ ಕಾಮಗಾರಿ ಗುಣಮಟ್ಟದಿಂದ ನಡೆದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಟೆಂಡರ್ ಆದ ಬಳಿಕ 9 ತಿಂಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಬೇಕೆಂಬ ನಿಯಮವಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆದಾರರ ಇಚ್ಚಾಶಕ್ತಿ ಕೊರತೆಯಿಂದ ಮೂರು ವರ್ಷ ಕಳೆದರೂ ಕ್ಷೇತ್ರದಲ್ಲಿ ಜೆಜೆಎಂ ಕೆಲಸ ಪೂರ್ಣಗೊಂಡಿಲ್ಲʼ ಎಂದು ಆರೋಪಿಸಿದರು.
ತಾಲ್ಲೂಕಿನ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜೆಜೆಎಂ ಕಾಮಗಾರಿಗೆ ಹೆಚ್ಚಿನ ಅನುದಾನ ತಂದಿದ್ದೇನೆ. ಆದರೆ ಅಧಿಕಾರಿಗಳು, ಗುತ್ತಿಗೆದಾರರು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಗ್ರಾಮ ಸಂಚಾರದ ವೇಳೆ ಅನೇಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಕಳಪೆ ನಡೆದಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ತಾಲ್ಲೂಕಿನಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿ ಬಗ್ಗೆ ಮರುಪರಿಶೀಲನೆ ನಡೆಸಿ, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕುʼ ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ್ ಹೇಡೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಪ್ರಕಾಶ ಮೇತ್ರೆ, ಮಲ್ಲಪ್ಪ ನೇಳಗೆ, ನಾಗಶೆಟ್ಟಿ ಗಾದಗೆ, ಕೇರಬಾ ಪವಾರ್ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಬಿ.ವೈ. ವಿಜಯೇಂದ್ರ ರಾಜಾಧ್ಯಕ್ಷ ಆಗೋದು ಪಕ್ಕಾ :
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು ʼಪಕ್ಷದೊಳಗೆ ಕೆಲ ನಾಯಕರು ಬಂಡಾಯವಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಬಿಜೆಪಿ ಅತ್ಯಂತ ಗಟ್ಟಿ ಬೆಳೆಯುತ್ತಿದ್ದು, ಹೊಸ ಚೈತನ್ಯ ನಿರ್ಮಾಣವಾಗಿದೆ. ಹೀಗಾಗಿ ರಾಜಾಧ್ಯಕ್ಷ ಸ್ಥಾನ ಚುನಾವಣೆ ನಡೆದರೂ ಮತ್ತೆ ಬಿ.ವೈ.ವಿಜಯೇಂದ್ರ ಅವರೇ ಗೆಲ್ಲುವುದು ಖಚಿತʼ ಎಂದು ಹೇಳಿದರು.

ವಡಗಾಂವ(ದೇ) ಗ್ರಾಮದಲ್ಲಿ ಗುರುವಾರ ರಾತ್ರಿ ಶಾಸಕ ಪ್ರಭು ಚವ್ಹಾಣ ಹಾಗೂ ಅಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರು ಸಮಸ್ಯೆಗಳು ಹೇಳಿಕೊಂಡರು.
ಈ ಸುದ್ದಿ ಓದಿದ್ದೀರಾ? ಮುಡಾ | ಮನಿಲಾಂಡ್ರಿಂಗ್ ಬಗ್ಗೆ ಸಾಕ್ಷಿಯಿಲ್ಲ, ಇ.ಡಿ ವರದಿ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ
ಜಿಲ್ಲಾ ಪಂಚಾಯಿತಿ ಕ್ಷೇತ್ರವಾದ ವಡಗಾಂವ್(ದೇ) ಗ್ರಾಮದಲ್ಲಿ ಬಸ್ ನಿಲ್ದಾಣ, ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ಸರ್ಕಾರಿ ಪಿಯು ಕಾಲೇಜು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.