ಭೂಮಿ ಯೋಜನೆಯಡಿ ಸಾರ್ವಜನಿಕರ ಅರ್ಜಿಗಳ ತ್ವರಿತ ವಿಲೇವಾರಿಯಲ್ಲಿ ಹೊನ್ನಾವರ ತಾಲ್ಲೂಕು ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸಿ ಗಮನಾರ್ಹ ಸಾಧನೆ ಮಾಡಿದೆ. ಜುಲೈ 2025ರ ತಿಂಗಳಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರವಾಗಿ ವಿಲೇವಾರಿ ಮಾಡಿದ್ದರಿಂದ, ಹೊನ್ನಾವರ ತಾಲ್ಲೂಕು 6.9 ಸಿಗ್ರಾ ಮೌಲ್ಯ ಮತ್ತು 5.771 ವಿಲೇವಾರಿ ಸೂಚ್ಯಂಕದೊಂದಿಗೆ ಈ ಗೌರವಕ್ಕೆ ಪಾತ್ರವಾಗಿದೆ.
ತಹಶೀಲ್ದಾರ್ ಪ್ರವೀಣ ಕರಂಡೆ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮತ್ತು ತಮ್ಮ ತಂಡದ ಸಹಕಾರದೊಂದಿಗೆ ಈ ಸಾಧನೆ ಮಾಡಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ಹಲವು ಸುಧಾರಣೆಗಳನ್ನು ತಂದಿರುವ ಪ್ರವೀಣ ಕರಂಡೆ, ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ತ್ವರಿತವಾಗಿ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಈ ಕಾರ್ಯಕ್ಷಮತೆಗೆ ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಭೂಮಿ ಉಸ್ತುವಾರಿ ಕೋಶದ ಪರವಾಗಿ ಜಿಲ್ಲಾಡಳಿತವು ಹೊನ್ನಾವರ ತಾಲ್ಲೂಕು ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಿದೆ. ಮುಂದೆಯೂ ಇದೇ ರೀತಿ ಸಹಕಾರ ಮತ್ತು ಕಾರ್ಯಕ್ಷಮತೆ ಮುಂದುವರಿಯಲಿ ಎಂದು ಶುಭ ಹಾರೈಸಲಾಗಿದೆ. ಈ ಸಾಧನೆಯಿಂದ ಹೊನ್ನಾವರ ತಾಲೂಕು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದ್ದು, ಇದು ತಾಲೂಕಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ.