ನಾಡಿನಾದ್ಯಂತ ದೀಪಾವಳಿ ಆಚರಿಸಲಾಗುತ್ತಿದೆ. ಆದರೆ, ರಾಯಚೂರು ನಗರದ ಪ್ರಮುಖ ರಸ್ತೆಗಳಲ್ಲಿರುವ ಬೀದಿದೀಪಗಳಿಗೆ ಕೂಡ ಬೆಳಕು ಹರಿಸುವ ಭಾಗ್ಯ ದೊರಕಿಲ್ಲ.
ಬೀದಿಗಳಲ್ಲಿ ವಿದ್ಯುತ್ ಕಂಬಗಳಿದ್ದರು ಕೂಡ ಇಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಓಡಾಡುವಂತಹ ಪರಿಸ್ಥಿತಿ ಇದೆ. ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಾದ ನಗರಸಭೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ದೀಪಾವಳಿಗೆ ದೀಪವಿಲ್ಲದೆ ಕತ್ತಲಲ್ಲಿ ನಗರವಾಗಿದೆ ಎಂಬುದು ನಗರದ ನಿವಾಸಿಗಳು, ವಾಹನ ಚಾಲಕರು ಶಾಪ ಹಾಕುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಯಲ್ಲಿ ವಿದ್ಯುತ್ ಕಂಬಗಳಿದ್ದರೂ ಬೆಳಕಿನ ವ್ಯವಸ್ಥೆ ಇಲ್ಲ. ಹೆಸರಿಗೆ ಮಾತ್ರ ಕಂಬಗಳಿವೆ. ಇದನ್ನು ಕಂಡರೂ ನಗರಸಭೆ ಅಧಿಕಾರಿಗಳು ದುರಸ್ತಿಗೆ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.
ನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳಿಗೆ ಅಲ್ಲೊಂದು ಇಲ್ಲೊಂದು ಬೀದಿ ದೀಪಗಳು ಬೆಳಗುತ್ತವೆ. ಹಗಲು-ರಾತ್ರಿ ಬೀಡಾಡಿ ದನಗಳು ಈ ರಸ್ತೆಯಲ್ಲಿ ಓಡಾಡುತ್ತಾ ಇರುತ್ತವೆ. ಸ್ವಲ್ಪ ಅಜಾಗರೂಕತೆಯಾದರೂ ವಾಹನ ಸವಾರರು ಅಪಘಾತಕ್ಕೀಡಾಗುವುದು ಖಚಿತ.
ಹಿರಿಯ ನಾಗರಿಕರು, ಮಕ್ಕಳು ರಾತ್ರಿ ವೇಳೆ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಾರೆ. ಬೀದಿ ದೀಪ ನಿರ್ವಹಣೆಗೆ ನಗರಸಭೆಗೆ ಪ್ರತ್ಯೇಕ ಅನುದಾನ ಇಲ್ಲ. ಹೀಗಾಗಿ ದುರಸ್ತಿ ಭಾಗ್ಯ ಸಿಗುತ್ತಿಲ್ಲ ಎಂಬ ವಿಚಾರ ಕೂಡ ತಿಳಿದುಬಂದಿದೆ.
ಈ ಸಮಸ್ಯೆಯ ಬಗ್ಗೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಅಝೀಝ್ ಜಾಗೀರದಾರ್, “ಬೀಡಾಡಿ ದನಗಳು ಇಡೀ ರಾತ್ರಿಯಲ್ಲೇ ಮಲಗಿರುತ್ತವೆ. ಸ್ವಲ್ಪ ಜಾಗರೂಕತೆ ತಪ್ಪಿದ್ದರೆ ದೊಡ್ಡ ಅನಾಹುತಗಳು ಸಂಭವಿಸಲಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ವಕ್ಫ್ ಆಸ್ತಿ | ರೈತರಿಗೆ ನೋಟಿಸ್ ಕೊಟ್ಟಿದ್ದರೆ ತಕ್ಷಣ ವಾಪಸ್: ಸಚಿವ ಜಮೀರ್
“ವಿದ್ಯುತ್ ಕಂಬಗಳಿಗೆ ಬೆಳಕು ಇಲ್ಲದೆ ಕತ್ತಲಲ್ಲಿ ಓಡಾಡುವ ಪರಿಸ್ಥಿತಿಯಿದೆ. ವಿದ್ಯುತ್ ಕಂಬಗಳಿಗೆ ಬೆಳಕು ಹೋಗುವುದು ಬರೋದು ಚಾಲ್ತಿ ಇರುತ್ತದೆ. ನಗರಸಭೆಯ ಅಧಿಕಾರಿಗಳು ನಗರದ ಬಗ್ಗೆ ತಮಗೆ ಸಂಬಂಧವಿಲ್ಲದಂತೆ ಇದ್ದಾರೆ .ಇದಕ್ಕೆ ಗಮನ ಹರಿಸಿ ಕಾರ್ಯನಿವಹಿಸಬೇಕು. ಏನಾದರೂ ಅಹಿತಕರ ಘಟನೆ ಸಂಭವಿಸಿದರೆ ನಗರಸಭೆಯೇ ನೇರ ಕಾರಣ ಎಂದು ಹೇಳಿದರು.

