ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಬಡ ರೈತರನ್ನು ಒಕ್ಕಲೆಬ್ಬಿಸದೆ, ಅವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಂಘಟನೆ ನೇತೃತ್ವದಲ್ಲಿ ರೈತರು ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಸರ್ವೆ ನಂ.297/2, 955ರಲ್ಲಿರುವ ಸರ್ಕಾರಿ ಭೂಮಿಯಲ್ಲಿ ಸುಮಾರು ವರ್ಷಗಳಿಂದ ಆರು ಮಂದಿ ಭೂಹೀನ ಬಡವರು ಸಾಗುವಳಿ ಮಾಡುತ್ತಿದ್ದಾರೆ. ಅವರಿಂದ ಭೂಮಿಯನ್ನು ಕಸಿದುಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ. ಸರ್ಕಾರಿ ಭೂಮಿಯಲ್ಲಿ ಬಿತ್ತನೆ ಮಾಡಿದ ಹತ್ತಿ ಬೆಳೆಯನ್ನು ನಾಶ ಮಾಡಲಾಗಿದೆ. ದಬ್ಬಾಳಿಕೆಗೆ ತುತ್ತಾಗಿರುವ ರೈತರಿಗೆ ಕೂಡಲೇ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
“ಕುರ್ಡಿ ಗ್ರಾಮದಲ್ಲಿ ಸಿದ್ದಪ್ಪ ಎಂಬುವವರು ತಹಸೀಲ್ದಾರರ ಆದೇಶ ಸಿಕ್ಕಿದೆ ಎಂದು ಸುಳ್ಳು ಪ್ರಚಾರ ಮಾಡಿ ಭೂಹೀನ ಬಡವರು ಬಿತ್ತನೆ ಮಾಡಿದ ಹತ್ತಿ ಬೆಳೆಯನ್ನು ನಾಶಪಡಿಸಿದ್ದಾರೆ. ಹೀಗಾಗಿ ಭೂಹೀನ ಬಡವರು ಕಣ್ಣೀರುವಂತಾಗಿದೆ” ಎಂದು ಆರೋಪಿಸಿದ್ದಾರೆ.
“ಕಳೆದ 30-40 ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಬಡಜನರು ಸಾಗುವಳಿ ಮಾಡುತ್ತಾ ಬಂದಿದ್ದು, ಪಟ್ಟಕ್ಕಾಗಿ ಅರ್ಜಿ ಸಲ್ಲಿಸಿದರೂ ಇದುವರೆಗೂ ಪಟ್ಟಾ ನೀಡಿಲ್ಲ. ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವ ಬಡವರಿಗೆ ಕಾನೂನಾತ್ಮಕ ರಕ್ಷಣೆ ನೀಡಿ, ಬಡವರ ಪಾಲಿನ ಭೂಮಿ ಸಂರಕ್ಷಣೆಗೆ ಮುಂದಾಗಬೇಕು” ಎಂದು ಒತ್ತಾಯಿಸಿದ್ದಾರೆ.
“ಭೂಹೀನ ಬಡವರು ತಮ್ಮ ಜೀವನಕ್ಕಾಗಿ ಸರ್ಕಾರದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವುದರಿಂದ ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವುದಿಲ್ಲ. ಬಡವರು ಸಾಗುವಳಿ ಮಾಡುವ ತುಂಡು ಭೂಮಿಯನ್ನು ಕಾನೂನುಬಾಹೀರವಾಗಿ ಕೈವಶ ಮಾಡಿಕೊಳ್ಳುವುದು ನ್ಯಾಯಸಮ್ಮತವಲ್ಲ. ಬಡವರು ಸರ್ಕಾರಿ ಭೂಮಿಯಲ್ಲಿ ಬಿತ್ತನೆ ಮಾಡಿರುವುದನ್ನು ಅಕ್ರಮವಾಗಿ ನಾಶ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಸೂಕ್ತ ರಕ್ಷಣೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಬಿ.ಬಸವಲಿಂಗಪ್ಪ, ತಾಲ್ಲೂಕ ಅಧ್ಯಕ್ಷ ವಿ.ಮುದುಕಪ್ಪ ನಾಯಕ, ಉಪಾಧ್ಯಕ್ಷ ಆನಂದಪ್ಪ ಬೋವಿ, ಸದಸ್ಯರಾದ ಯಲ್ಲಪ್ಪ ನಾಯಕ ಕುರ್ಡಿ, ಅಮರೇಶಪ್ಪ ಚೀಕಲಪರ್ವಿ ಸೇರಿದಂತೆ ಅನೇಕರಿದ್ದರು.
ವರದಿ : ಹಫೀಜುಲ್ಲ