ರಾಯಚೂರಿನ ಈರಣ್ಣ ವೃತ್ತದಲ್ಲಿ ನಡೆಯುತ್ತಿದ್ದ ತರಕಾರಿ ಮಾರುಕಟ್ಟೆಯನ್ನು ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಜಿಲ್ಲಾಧಿಕಾರಿ ಸ್ಥಳಾಂತರಿಸಿದ್ದಾರೆ. ಅಧಿಕೃತ ಟೆಂಡರ್ ಕರೆದು ಈರಣ್ಣ ವೃತ್ತದಲ್ಲಿ ಮಾರುಕಟ್ಟೆ ನಡೆಸಲಾಗುತ್ತಿತ್ತು. ಈಗ ಮಾರುಕಟ್ಟೆ ಸ್ಥಳಾಂತರವಾಗಿದೆ. ಅಲ್ಲದೆ, ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಕೊಡಬೇಕಾದ 16 ಲಕ್ಷ ರೂ.ಗಳನ್ನು ನಗರಸಭೆ ಬಾಕಿ ಉಳಿಸಿಕೊಂಡಿದೆ ಎಂದು ಬಿಜೆಪಿ ಮುಖಂಡ ರವೀಂದ್ರ ಜಲ್ದಾರ ಆರೋಪಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಕೊರೊನಾ ಸಂದರ್ಭದಲ್ಲಿ ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟ ಪ್ರಾರಂಭಿಸಲಾಗಿತ್ತು. ಆಗಿನಿಂದಲೂ ಯಾವುದೇ ರಸ್ತೆ ಅಪಘಾತ ಸಂಭವಿಸಿಲ್ಲ. ಜನರಿಗೆ ತೊಂದರೆಯೂ ಆಗಿಲ್ಲ. ವ್ಯಾಪಾರ ಬೆಳಿಗಿನ ಜಾವ ಪ್ರಾರಂಭವಾಗಿ 9 ಗಂಟೆ ವೇಳೆಗೆ ಸ್ಥಗಿತಗೊಳ್ಳುತ್ತಿತ್ತು. ಆದರೆ, ನಗರಸಭೆಯೇ ಟೆಂಡರ್ ಕರೆದು ಅಧಿಕೃತವಾಗಿ ಮಾರಾಟಕ್ಕೆ ಅವಕಾಶ ನೀಡಿತ್ತು. ಇದೀಗ, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಏಕಾಏಕಿ ಮಾರುಕಟ್ಟೆಯನ್ನು ನಗರಸಬೆ ತೆರವುಗೊಳಿಸಿದೆ” ಎಂದು ಆರೋಪಿಸಿದ್ದಾರೆ.
“ಜಿಲ್ಲಾಡಳಿತದ ನಿರ್ಧಾರದಿಂದ ವ್ಯಾಪಾರಿಗಳು ಬೀದಿಗೆ ಬರುವಂತಾಗಿದೆ. ತರಕಾರಿ ಮಾರಾಟಗಾರರ ಸಂಘದ ಅಧ್ಯಕ್ಷ ಎಂದು ಹೇಳಿಕೊಂಡು ಎನ್ ಮಹಾವೀರ ಎಂಬವರು ನಗರಸಭೆ ಆದಾಯಖೋತಾ ಆಗುವಂತೆ ಮಾಡಿದ್ದಾರೆ. 2019 ರಿಂದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿಗಳ ಬಾಡಿಗೆ ಹಣ ಸೇರಿ, 16 ಲಕ್ಷ ರೂ.ಗಳನ್ನು ನಗರಸಭೆ ಪಾವತಿಸಿಲ್ಲ” ಎಂದು ದೂರಿದ್ದಾರೆ.
“ಈರಣ್ಣ ವೃತದಲ್ಲಿಯೇ ತರಕಾರಿ ಮಾರಾಟಕ್ಕೆ ಅವಕಾಶ ನೀಡಲು ನ್ಯಾಯಾಲಯದ ಮೊರೆ ಹೋಗಲಾಗಿದದೆ. ನ್ಯಾಯಾಲಯ ಆದೇಶದ ನಂತರ ತರಕಾರಿ ಮಾರಾಟ ಪ್ರಾರಂಭಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ಸಾಜೀದ್ ಸಮೀರ್, ಶಂಕರರೆಡ್ಡಿ, ಅಲಂಪಾಷಾ, ಜಾನಕಿರಾಮ್, ವೆಂಕಪ್ಪ ಉಪಸ್ಥಿತರಿದ್ದರು.