ಮುಂದಿನ ವರ್ಷ ನಡೆಯುವ 25ನೇ ವರ್ಷದ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಆಹ್ವಾನಿಸಲಾಗುವುದು ಎಂದು ಹಬ್ಬದ ರೂವಾರಿ ಮತ್ತು ಮಾಜಿ ಶಾಸಕ ಎ ಪಾಪಾರೆಡ್ಡಿ ಹೇಳಿದರು.
ರಾಯಚೂರು ನಗರದ ಗಂಜ್ ಆವರಣದಲ್ಲಿ ಮುನ್ನೂರುಕಾಪು ಸಮಾಜದಿಂದ ಆಯೋಜಿಸಿದ್ದ ಕೊನೆಯ ದಿನದ ಮುಂಗಾರು ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂಗಾರು ಸಾಂಸ್ಕೃತಿಕ ಹಬ್ಬದ ಅಂಗವಾಗಿ ನಡೆದ ಎರಡೂವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯ ಭಾರೀ ಯಶಸ್ವಿಗೆ ಕಾರಣರಾದ ಎಲ್ಲ ಗಣ್ಯರು, ಸಮಾಜದ ಮುಖಂಡರು ವೀಕ್ಷಣೆಗೆ ಕಿಕ್ಕಿರಿದ ಜನರಿಗೆ ಹಾಗೂ ಜಿಲ್ಲೆಯ ರೈತರಿಗೆ ಧನ್ಯವಾದ ತಿಳಿಸಿದರು.
“ಕಳೆದ 24 ವರ್ಷಗಳಿಂದ ಸಮಾಜದ ಸಮ್ಮುಖದಲ್ಲಿ ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಮುಂಗಾರು ಹಬ್ಬ ಭಾರೀ ಜನಪ್ರಿಯತೆಗಳಿಸುವುದರ ಮೂಲಕ ದೇಶಕ್ಕೆ ಮಾದರಿಯಾಗಿದೆ. ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಮುನ್ನೂರುಕಾಪು ಸಮಾಜಕ್ಕೆ ಮತ್ತಷ್ಟು ವರ್ಚಸ್ಸು ತಂದಿದೆ” ಎಂದು ಹೇಳಿದರು.
“ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳಿಂದ ಅಲ್ಲಿಯ ಪ್ರತಿಭಾನ್ವಿತ ಕಲಾ ತಂಡಗಳು ಅಲ್ಲಿಯ ಸಂಸ್ಕೃತಿ ನೃತ್ಯರೂಪಕ ಪ್ರದರ್ಶಿಸಿ ನಮ್ಮ ಭಾಗದ ಜನರಿಗೆ ಮನೋರಂಜನೆ ನೀಡುವ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಪ್ರದರ್ಶನಕ್ಕೆ ಈ ಹಬ್ಬ ವೇದಿಕೆಯಾಗಿದೆ” ಎಂದರು.
“ಈ ಹಿಂದೆ ಎತ್ತುಗಳ ಪ್ರದರ್ಶನವೆಂದರೆ, ಕೇವಲ ಕೃಷಿಯ ಎತ್ತುಗಳಿಗೆ ಮಾತ್ರ ಸೀಮಿತವಾಗಿದ್ದು, ಮುಂಗಾರು ಸಮಾಜ ಆರಂಭಿಸಿದ ಭಾರದ ಕಲ್ಲು ಎಳೆಯುವ ಎತ್ತುಗಳ ಸ್ಪರ್ಧೆ ಇಂದು ಎತ್ತುಗಳನ್ನು ಕೃಷಿಗೆ ಮಾತ್ರವಲ್ಲದೇ, ಇಂತಹ ಸ್ಪರ್ಧೆಗಳಿಗೂ ಸಾಕಾಣಿಕೆ ಮಾಡುವಂತಹ ಪರಂಪರೆಗೆ ಮುಂಗಾರು ಸಾಂಸ್ಕೃತಿಕ ಹಬ್ಬ ನಾಂದಿಯಾಗಿದೆ. ಆರಂಭದಲ್ಲಿ ಕೇವಲ ಆಂಧ್ರದ ಎತ್ತುಗಳು ಮಾತ್ರ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದವು. ಕರ್ನಾಟಕದಲ್ಲಿ ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಭಾರದ ಕಲ್ಲು ಎಳೆಯುವ ಎತ್ತುಗಳನ್ನು ಸಾಕುವ ಬಹುದೊಡ್ಡ ಹವ್ಯಾಸಕ್ಕೆ ಈ ಹಬ್ಬ ಕಾರಣವಾಗಿದೆ” ಎಂದರು.
“ಜಿಲ್ಲೆಯ ಅನೇಕ ಕಡೆ ಮುಂಗಾರು ಸಾಂಸ್ಕೃತಿಕ ಹಬ್ಬಗಳನ್ನು ಆಯೋಜಿಸುವ ಮತ್ತು ಭಾರದ ಕಲ್ಲು ಎಳೆಯುವ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿವೆ. ಇದು ನಿಜಕ್ಕೂ ಸಂತೋಷದ ಸಂಗತಿಯಾಗಿದೆ. ಈ ಕಾರ್ಯಕ್ರಮ ನಡೆಯಲು ಮುನ್ನೂರುಕಾಪು ಸಮಾಜ ಮಾದರಿಯಾಗಿರುವುದು ಈ ಸಮಾಜದ ಪ್ರಾಬಲ್ಯ ಪ್ರದರ್ಶಿಸುತ್ತದೆ. ಮೂಲತಃ ಕೃಷಿಯನ್ನು ಅವಲಂಬಿತ ಮುನ್ನೂರುಕಾಪು ಸಮಾಜ ತನ್ನ ಕಷ್ಟಾರ್ಜಿತ, ವಿಶ್ವಾರ್ಹತೆ ಮತ್ತು ಸ್ವಾವಲಂಬಿ ತನದಿಂದ ಇಂದು ಎಲ್ಲ ರಂಗಗಳಲ್ಲೂ ಪ್ರಬಲ ಸಮುದಾಯವಾಗಿ ಬೆಳೆದು ನಿಂತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕನ್ನಡ ಮಾಧ್ಯಮದಲ್ಲಿ ಓದಿದವರು ಸರ್ವಾಂತರ್ಯಾಮಿಗಳಾಗಿದ್ದಾರೆ: ಡಾ ಅಶೋಕ್
ಈ ಸಂದರ್ಭದಲ್ಲಿ ಶಾಸಕ ಶಿವರಾಜ ಪಾಟೀಲ್, ಸಮಾಜದ ಹಿರಿಯ ಮುಖಂಡ ಬೆಲ್ಲಂ ನರಸರೆಡ್ಡಿ, ಜಿ ಬಸವರಾಜ ರೆಡ್ಡಿ, ಯು ಕೃಷ್ಣಮೂರ್ತಿ, ಮುನ್ನೂರುಕಾಪು ಸಮಾಜದ ಮುಖಂಡರು ಸೇರಿದಂತೆ ಅನೇಕರು ಇದ್ದರು.
ವರದಿ : ಹಫೀಜುಲ್ಲ
