ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ 07 ಜಿಲ್ಲೆಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಿ, ಮುಂದಿನ 5 ವರ್ಷಗಳಲ್ಲಿ 50 ಸಾವಿರ ಸರ್ಕಾರಿ ನೌಕರರ ಭರ್ತಿ ಮಾಡಿ, ಕೆಕೆ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ನ್ಯಾಯ ಒದಗಿಸಲು ಪ್ರಯತ್ನ ಮಾಡಲಿದೆ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.
ಸಿಂಧನೂರು ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಹಲವು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ 371(ಜೆ) ಕಲಂಗೆ ದಶಕದ ಸಂಭ್ರಮದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“2012ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ 371(ಜೆ) ಕಲಂಗೆ ತಿದ್ದುಪಡಿ ತಂದು ಕಾನೂನು ಜಾರಿಗೊಳಿಸಿ ಈ ಭಾಗಕ್ಕೆ ವಿಶೇಷ ಪ್ರಾತಿನಿಧ್ಯ ನೀಡಲಾಯಿತು. ಸರ್ಕಾರಿ ನೌಕರಿ ಭರ್ತಿಯಲ್ಲೂ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಎಂಜಿನಿಯರ್, ಮೆಡಿಕಲ್ ಕಾಲೇಜು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸೌಕರ್ಯ ಕಲ್ಪಿಸಿ ಯುವಸಮೂಹದ ಬದುಕು ಹಸನು ಮಾಡಲು ದಿಟ್ಟ ಹೆಜ್ಜೆ ಇಡಲಾಗಿದೆ” ಎಂದರು.
“ಕಳೆದ 2013 ರಿಂದ 18 ರವರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕೆಕೆ ಭಾಗಕ್ಕೆ 30 ಸಾವಿರ ನೌಕರಿಗಳನ್ನು ಕಲ್ಪಿಸಿಕೊಡಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರದ ನ್ಯೂನ್ಯತೆಗಳಿಂದ ಯಾವುದೇ ಹುದ್ದೆ ಭರ್ತಿಯಾಗಿಲ್ಲ. ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು” ಎಂದು ಭರವಸೆ ನೀಡಿದರು.
“ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಸಿಂಧನೂರಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶಪ್ರೇಮದ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ಉತ್ತಮವಾದ ವಿಧ್ಯಾಭ್ಯಾಸ ಮಾಡುವ ಮೂಲಕ 371(ಜೆ) ಕಲಂನ ಸೌಲಭ್ಯ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕುʼ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, “ಗಾಂಧಿಜಿ ನೇತೃತ್ವದಲ್ಲಿ ಸತ್ಯ, ಅಹಿಂಸೆ ಮತ್ತು ಶಿಸ್ತಿನ ಚಳವಳಿ ನಡೆಸುವ ಮೂಲಕ ಭಾರತ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯ ಸಂಗ್ರಾಮಗಳನ್ನು ಮೆಲುಕು ಹಾಕುತ್ತಾ, ಯುವ ಪೀಳಿಗೆ ಸಾಮಾಜಿಕ, ರಾಜಕೀಯ, ಕೃಷಿ ಸೇರಿದಂತೆ ಇನ್ನಿತರ ಬದಲಾವಣೆಯ ಕಡೆ ಸಾಗುವ ಅನಿವಾರ್ಯತೆ ಇದೆ” ಎಂದರು.
“ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದ ಜನತೆಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ 03 ತಿಂಗಳಲ್ಲಿ ಎಲ್ಲ ಗ್ಯಾರಂಟಿಗಳನ್ನು ಜಾರಿಮಾಡುವುದರೊಂದಿಗೆ ರಾಜ್ಯದ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ. ವಿದ್ಯಾರ್ಥಿಗಳು ದೇಶದ ಸ್ವಾಭಿಮಾನದ ಕಿಚ್ಚನ್ನು ಮೈಗೂಡಿಸಿಕೊಂಡು ಸುಭದ್ರ ದೇಶ ಕಟ್ಟಲು ಮುಂದಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪಡಿತರ, ಮನರೇಗಾ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತಾಯ
ಈ ಸಂದರ್ಭದಲ್ಲಿ ಶಾಸಕ ಆರ್ ಬಸನಗೌಡ ತುರವಿಹಾಳ, ವಿಧಾನಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪುರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ ದೊಡ್ಡಬಸವರಾಜ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕರಾಂ ಪಾಂಡ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ನಿಖಿಲ್, ಲಿಂಗಸೂಗುರು ಸಹಾಯಕ ಆಯುಕ್ತ ಶಿಂಧೆ ಅವಿನಾಶ ಸೇರಿದಂತೆ ಹಲವು ಚುನಾಯಿತ ಪ್ರತಿನಿಧಿಗಳು, ತಾಲೂಕು ಮಟ್ಟದ ಹಲವು ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.