ಏಮ್ಸ್ ಮಂಜೂರಾತಿಗೆ ನಡೆಯುತ್ತಿರುವ ಸುದೀರ್ಘ ಹೋರಾಟ 700ನೇ ದಿನಕ್ಕೆ ಕಾಲಿಟ್ಟಿದ್ದಕ್ಕೆ ಸಾಕ್ಷಿಯಾಗುತ್ತಿರುವುದು ನೋವಿನ ಸಂಗತಿ. ಅಭಿವೃದ್ಧಿ ತಾರತಮ್ಯ ಸರಿಪಡಿಸಬೇಕಾದ ಸರ್ಕಾರಗಳೇ ಜನರ ತಾಳ್ಮೆ ಪರೀಕ್ಷಿಸುತ್ತಿರುವುದು ವಿಷಾಧನೀಯ ಎಂದು ರಾಜ್ಯೋತ್ಸವ ಪುರಸ್ಕೃತ ಸಾಹಿತಿ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಖೇದ ವ್ಯಕ್ತಪಡಿಸಿದರು.
ಏಮ್ಸ್ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, “ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಗೂ ಸಮಾಜದ ಜವಾಬ್ದಾರಿಯಿದ್ದು, ಸಮಾಜ ಮುಖಿಯಾಗಿ ಯೋಚಿಸಬೇಕಿದೆ. ಸಾಂಸ್ಕೃತಿಕ ಶ್ರೀಮಂತಿಕೆಯ ಶಾಂತತೆ ನೆಲೆಯಾಗಿರುವ ಜಿಲ್ಲೆಯಲ್ಲಿ ಜನರನ್ನು ತೀವ್ರ ಸ್ವರೂಪದ ಹೋರಾಟಕ್ಕೆ ಅಣಿಗೊಳಿಸಬಾರದು. ಹಿಮಾಲಯ ಬೆಟ್ಟದಂತೆ ಅಚಲವಾಗಿ ಶಾಂತಿಯುತ ಹೋರಾಟ ನಡೆಯುತ್ತಿದೆ. ಆದರೆ 700 ದಿನಗಳ ಸುದೀರ್ಘ ಹೋರಾಟವನ್ನು ಕಡೆಗಣಿಸುವ ವ್ಯವಸ್ಥೆಯನ್ನು ಪ್ರಜ್ಞಾವಂತರು ಎನಿಸಿಕೊಂಡರುವವರು ಪ್ರಶ್ನಿಸಬೇಕಿದೆ” ಎಂದರು.
ಶಾಲೆ-ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ, ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ. ಮಾನವೀಯತೆ ಪ್ರಶ್ನೆಯಲ್ಲ. ಸಮಾನ ಅಭಿವೃದ್ಧಿ ಕಡೆಗಣಿಸಿರುವ ಕೇಂದ್ರ ಸರ್ಕಾರ ನ್ಯಾಯ ಒದಗಿಸಬೇಕಿದೆ. ರಾಜ್ಯ ಸರ್ಕಾರ ಈಗಾಗಲೇ ಸ್ಪಂದಿಸಿದೆ. ಮುಖ್ಯಮಂತ್ರಿಯವರು ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಬೇಕೆನ್ನುವ ಒತ್ತಾಯದ ಪತ್ರ ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರ ಯಾವುದೇ ಸ್ಪಂದನೆ ನೀಡದೇ ಕಳವಳಕಾರಿ ಮೂಡಿಸಿದೆ. ಏಮ್ಸ್ ಹೋರಾಟಕ್ಕೆ ಮಹಿಳೆಯರೂ ಭಾಗಿಯಾಗಬೇಕು. ಹೋರಾಟಗಾರರು ನಿರಾಶರಾಗದೆ ಹೋರಾಟಕ್ಕೆ ಮತ್ತಷ್ಟು ಬಲ ತುಂಬುವ ಕೆಲಸಕ್ಕೆ ಮುಂದಾಗಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ ಲೋಕಸಭಾ ಕ್ಷೇತ್ರ | ಮೊದಲ ದಿನ ಐದು ಮಂದಿ ಅಭ್ಯರ್ಥಿಗಳಿಂದ ಆರು ನಾಮಪತ್ರ ಸಲ್ಲಿಕೆ
ಡಾ. ಶಾರದಾ ನಾಯಕ, ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಡಾ ಬಸವರಾಜ ಕಳಸ, ಅಶೋಕುಮಾರ ಜೈನ್, ಎಂ ಆರ್ ಭೇರಿ, ಬಾಬುರಾವ ಶೇಗುಣಸಿ, ಜಾನ್‌ವೆಸ್ಲಿ, ಪ್ರಭುನಾಯಕ, ಬಸವರಾಜ, ಉದಯಕುಮಾರ ಸೇರಿದಂತೆ ಅನೇಕ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ವರದಿ : ಹಫೀಜುಲ್ಲ
