ರಾಯಚೂರು ಜಿಲ್ಲೆಯ ಲೇಖಕರ ಪುಸ್ತಕಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಖರೀದಿಸಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ಲೇಖಕರ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಅನೇಕ ಸಾಹಿತಿಗಳು, ಲೇಖಕರು, ಕಥೆಗಾರರಿದ್ದಾರೆ. ಪ್ರತಿ ವರ್ಷ ಪುಸ್ತಕಗಳನ್ನು ಹೊರ ತರುತ್ತಿದ್ದಾರೆ. ಆದರೆ ಪ್ರಕಟಣೆಯಾದ ಪುಸ್ತಕಗಳನ್ನು ಮಾರಾಟ ಮಾಡುವ ಕೌಶಲ್ಯವಿಲ್ಲದೇ ಆರ್ಥಿಕ ಸಮಸ್ಯೆಗೆ ಸಿಲುಕಿದ್ದಾರೆ. ಕೇಂದ್ರ ಗ್ರಂಥಾಲಯದಿಂದ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಆರೋಪಿಸಿದರು.
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯವರು ಒಂದು ವರ್ಷ ಹೈ.ಕ. ವಿಭಾಗದ ಲೇಖಕರಿಗೆ ಪ್ರೋತ್ಸಾಹ ನೀಡಿ ಪುಸ್ತಕ ಖರೀದಿಸಿದ್ದರು. ಈಗ ಐದಾರು ವರ್ಷಗಳಿಂದ ಖರೀದಿ ಮಾಡಿಲ್ಲ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದ ಕವಿ-ಸಾಹಿತಿಗಳ ಪುಸ್ತಕ ಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು, 1200 ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಕಲ್ಯಾಣ ಕರ್ನಾಟಕದಲ್ಲಿದ್ದು,ಇವುಗಳಿಗೆ ಪುಸ್ತಕಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಖರೀದಿಸಿ ಗ್ರಂಥಾಲಯಗಳಿಗೆ ಒದಗಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ನಿರ್ದೇಶಕರು,ಈ ಕುರಿತು ಪುಸ್ತಕ ಖರೀದಿಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲು ಸೂಚನೆ ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ವೀರಹನುಮಾನ್, ಈರಣ್ಣ ಬೆಂಗಾಲಿ, ಬಶೀರ್ ಅಹ್ಮದ್, ಅಯ್ಯಪ್ಪಯ್ಯ ಹುಡಾ, ಭಗತರಾಜ ನಿಜಾಮಕರ್, ಆಂಜನೇಯ ಜಾಲಿಬೆಂಚಿ ಹೊಸಮನಿ, ಯಲ್ಲಪ್ಪ ಎಂ. ಮರ್ಚೇಡ, ಎಂ.ಬಿ. ನರಸಿಂಹಲು ವಡವಾಟಿ ರಾಮಣ್ಣ ಬೋಯರ್ ಸೇರಿದಂತೆ ಅನೇಕರು ಇದ್ದರು.
ವರದಿ : ಹಫೀಜುಲ್ಲ
