ರಾಯಚೂರು ನಗರದ ಮಡ್ಡಿಪೇಟೆ ಬಡಾವಣೆಯಲ್ಲಿ ಬೀದಿನಾಯಿಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ ಪ್ರಜ್ಞಾಹೀನ ಸ್ಥಿತಿಗೆ ತೆರಳಿ ಸಾವು ನೋವಿನೊಂದಿಗೆ ಹೋರಾಡುತ್ತಿದ್ದ ಯುವತಿ ಬುಧವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಹಾದೇವಿ ಮುನಿಯಪ್ಪ(20) ಮೃತಪಟ್ಟ ದುರ್ದೈವಿ. ಕಳೆದ ಒಂದು ವಾರದ ಹಿಂದೆ ಮನೆಯ ಮುಂದೆ ಬೀದಿ ನಾಯಿಗಳ ದಂಡು ಏಕಾಏಕಿ ಯುವತಿ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ಯುವತಿಯನ್ನು ಹಲವು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚೇತರಿಸಿಕೊಳ್ಳದ ಕಾರಣ ರಾಯಚೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇದೀಗ ಸಾವನ್ನಪ್ಪಿದ್ದಾಳೆ.
“ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನವೆಂಬರ್ ತಿಂಗಳಲ್ಲಿ ಮೂರು ಶಾಲಾ ಮಕ್ಕಳ ಮೇಲೆ ದಾಳಿ ಮಾಡಿದ್ದವು. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾದರೂ ನಗರಸಭೆ ಇಲಾಖೆ ಕಣ್ಮುಚ್ಚಿ ಕುಳಿತಿದೆ” ಎಂದು ಬಡಾವಣೆಯ ಸ್ಥಳೀಯರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀದಿನಾಯಿ ದಾಳಿ; ಯುವತಿ ಸಾವು ಬದುಕಿನೊಂದಿಗೆ ಹೋರಾಟ
“ಬೀದಿನಾಯಿಗಳ ಹಾವಳಿಯಿಂದ ಶಾಲೆ ಕಾಲೇಜು ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಎಚ್ಚೆತ್ತುಕೊಂಡು ತಡೆಯಬೇಕು” ಎಂದು ಸಂಘಟನಾಕಾರರು ಒತ್ತಾಯಿಸಿದರು.
ಯುವತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
