ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕೋಠಾ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ಅಕ್ರಮ ಎಸಗಿರುವವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆಯಿಂದ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕರಿಗೆ ಮನವಿ ಸಲ್ಲಿಸಿದರು.
“ಸದಸ್ಯರಾದ ದ್ಯಾವಮ್ಮ ಶೀಲವಂತ ಮತ್ತು ನಾಗಪ್ಪ ಅವರು ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ತಮ್ಮ ಹೆಸರಿನಲ್ಲಿ ಆಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಸದಸ್ಯರಿಂದಲೇ ಭಾರೀ ಅವ್ಯವಹಾರ ನಡೆದಿದ್ದು, ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ” ಎಂದು ಆರೋಪಿಸಿದರು.
“ಸದರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇದನಾಪೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ನಿಯಮಾವಳಿಗಳನ್ನು ಗಾಳಿಗೆ ತೂರಿ, ಯಾವುದೇ ಗ್ರಾಮಸಭೆಯನ್ನು ಕರೆಯದೆ ತಮ್ಮ ದಾಖಲೆಗಳನ್ನು ತಾವೇ ಸೃಷ್ಟಿಸಿಕೊಂಡು ಅಧಿಕಾರಲೋಪ ಎಸಗಿದ್ದಾರೆ” ಎಂದು ಆಗ್ರಹಿಸಿದರು.
“ಬಾಕಿ ಕೆಲವು ಸದಸ್ಯರು ಮನೆಗಳನ್ನು ಕಟ್ಟಿಕೊಳ್ಳದೇ ಬೇರೆ ಕಟ್ಟಡಗಳ ಮುಂದೆ ನಿಂತು ಫೋಟೋ ತೆಗೆದುಕೊಂಡು ಮನೆ ಕಟ್ಟಿರುವಂತೆ ತಿಳಿಸಿ ಹಣವನ್ನು ಲೂಟಿ ಮಾಡಿದ್ದಾರೆ. ತಾವುಗಳು ಕೂಡಲೇ ತನಿಖಾಧಿಕಾರಿಗಳನ್ನು ನೇಮಿಸಿ ತನಿಖೆ ಮಾಡಿ ತಪ್ಪಿತಸ್ಥರು ದುರುಪಯೋಗ ಮಾಡಿಕೊಂಡಿರುವ ಸರ್ಕಾರದ ಹಣವನ್ನು ವಸೂಲಿ ಮಾಡಿ ತಕ್ಷಣವೇ ಸದಸ್ಯತ್ವವನ್ನು ರದ್ದುಪಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅಕ್ರಮ ಚಟುವಟಿಕೆ ತಾಣವಾದ ಇಂದಿರಾ ಕ್ಯಾಂಟಿನ್; ಅಧಿಕಾರಿಗಳ ನಿರ್ಲಕ್ಷ್ಯ
“ಕೋಠಾ ಗ್ರಾಮ ಪಂಚಾಯಿತಿ ಸದಸ್ಯರ ಅವ್ಯವಹಾರದಲ್ಲಿ ಶಾಮೀಲಾಗಿ, ನಿರ್ಲಕ್ಷ್ಯ ವಹಿಸಿದರೆ ಜಿಲ್ಲಾ ಕಚೇರಿ ಎದುರು ಬೃಹತ್ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಕೊಂಡಪ್ಪ ಕೆ, ವೀರೇಶ್ ಜಲಗಾರ, ಎಂ ಎಸ್ ವೆಂಕಟೇಶ, ನರಸಿಂಹಲು ಕುರುಬದೊಡ್ಡಿ ಸೇರಿದಂತೆ ಇತರರು ಇದ್ದರು.
