ರಾಜ್ಯದಲ್ಲಿ ತೀವ್ರವಾಗಿ ಮಳೆಯ ಕೊರತೆ ಉಂಟಾಗಿದೆ. ರಾಜ್ಯದ 195 ತಾಲೂಕುಗಳನ್ನು ಬರಪೀಡಿತವೆಂದು ಸರ್ಕಾರ ಘೋಷಣೆ ಮಾಡಿದ್ದು, ಕೂಡಲೇ ಬರಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಬರ ಘೋಷಣೆ ಬಳಿಕ ಕುಡಿಯಲು ಶುದ್ಧ ನೀರು, ಜಾನುವಾರುಗಳಿಗೆ ಮೇವು, ಮಳೆಯ ಅಭಾವದಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ 200 ದಿನಗಳವರೆಗೆ ಕೆಲಸ ಒದಗಿಸಬೇಕು. ಕೂಲಿಕಾರರ ಕನಿಷ್ಠ ದಿನಗೂಲಿ ಮಾಸಿಕ ₹600ಕ್ಕೆ ಹೆಚ್ಚಿಸಬೇಕು. ರೈತರು ಕೂಲಿಕಾರರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ಸಂದಾಯ ಮಾಡಬೇಕು” ಎಂದು ಒತ್ತಾಯಿಸಿದರು.
“ಕೂಲಿಕಾರರು ಸರ್ಕಾರಿ ಹಾಗೂ ಸರ್ಕಾರೇತರ ಬ್ಯಾಂಕುಗಳಿಂದ ಪಡೆದ ಸಾಲವನ್ನು ಬಲವಂತವಾಗಿ ವಸೂಲಿ ಮಾಡಬಾರದು. ಕಿರುಕುಳವನ್ನು ನಿಲ್ಲಿಸಬೇಕು. ಮೈಕ್ರೋಫೈನಾನ್ಸ್ ಮೂಲಕ ಪಡೆದ ಸಾಲವನ್ನು ಮನ್ನಾ ಮಾಡಬೇಕು. ವಲಸೆ ಕಾರ್ಮಿಕರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಬರಗಾಲದ ಸಮಯದಲ್ಲಿ ಯಂತ್ರಗಳ ಬಳಕೆ ನಿಲ್ಲಿಸಿ ಕೂಲಿಕಾರರಿಗೆ ಕೆಲಸದ ಕೊರತೆಯಾಗದಂತೆ ನೋಡಿಕೊಳ್ಳಬೇಕು” ಎಂದು ಮನವಿ ಮಾಡಿದರು.
“ಖಾಸಗಿ ಬ್ಯಾಂಕ್, ವಿಎಸ್‌ಎನ್ ಸೊಸೈಟಿ ಮತ್ತು ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡಲೇಬೇಕು. ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿದವರಿಗೆ ಆ ಭೂಮಿಯ ಪಟ್ಟಾ ಕೊಡಬೇಕು. ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆಯವರು ನಡೆಸುತ್ತಿರುವ ದಬ್ಬಾಳಿಕೆಯನ್ನು ತಡೆಗಟ್ಟಬೇಕು ಮತ್ತು ಅವರ ಮೇಲೆ ಹಾಕುತ್ತಿರುವ ಸುಳ್ಳು ಪ್ರಕರಣ ಹಿಂಪಡೆಯಬೇಕು. ಬೆಳೆಹಾನಿಯಾಗಿದ್ದು, ನಷ್ಟವುಂಟಾಗಿರುವ ಎಲ್ಲ ರೈತರಿಗೆ ಎಕರೆಗೆ ₹35,000 ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಆನಂದೂರು ಕೃಷಿ ಪತ್ತಿನ ಸಹಕಾರ ಸಂಘ ಆರಂಭಕ್ಕೆ ಆಗ್ರಹ
ಈ ಸಂದರ್ಭದಲ್ಲಿ ಅಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ, ಅಮೃತಗೌಡ, ಗೋವಿಂದ ನಾಯಕ, ಕೆ ಇಸ್ಮಾಯಿಲ್, ಲಕ್ಷ್ಮಣ, ಮಲ್ಲಯ್ಯ, ವೆಂಕಟೇಶ, ಹನುಮಯ್ಯ ನಾಯಕ, ಶಂಕರ, ಹೊನ್ನಪ್ಪ, ಗೂಖೂರಪ್ಪ, ಈಶ್ವರಪ್ಪ, ರವಿ, ದೊಡ್ಡಪ್ಪ, ಹನುಮಂತ, ಮಾರೆಪ್ಪ, ಜಿಲಾನಿ ಸೇರಿದಂತೆ ಇತರರು ಇದ್ದರು.