ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಕಾರ್ಯಕ್ರಮವು ಜು.28ರಂದು ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ ಗೇಹ್ಲೋಟ್ ಉದ್ಘಾಟಿಸಲಿದ್ದಾರೆ. ಅಂದು 408 ವಿದ್ಯಾರ್ಥಿಗಳಿಗೆ ಪದವಿ ಮತ್ತು 42 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಕುಲಪತಿ ಡಾ. ಹನುಮಂತಪ್ಪ ಹೇಳಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಘಟಿಕೋತ್ಸವ ಸಮಾರಂಭದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮಹಾನಿರ್ದೇಶಕ ಡಾ.ಹಿಮಾಂಶು ಪಾಠಕ್ ಭಾಗವಹಿಸಲಿದ್ದಾರೆ. 408 ವಿದ್ಯಾರ್ಥಿಗಳಿಗೆ ಪದವಿ, 42 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನಮಾಡಲಾಗುತ್ತದೆ. ಜೊತೆಗೆ, 25 ಚಿನ್ನದ ಪದಕ ನೀಡಲಾಗುತ್ತದೆ” ಎಂದು ವಿವರಿಸಿದರು.
“2020-21ನೇ ಸಾಲಿನಲ್ಲಿ 71 ತಂತ್ರಜ್ಞಾನ ಅಭಿವೃದ್ದಿಪಡಿಸಲಾಗಿದೆ. ಅವುಗಳಲ್ಲಿ 33 ಬೆಳೆ ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ, 16 ಸಸ್ಯ ಸಂರಕ್ಷಣೆ ಹಾಗೂ 17 ಕೃಷಿ ತಾಂತ್ರಿಕ ಅನ್ವಯಿಕವಾಗಿದೆ” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಎಂ.ಜಿ ಪಾಟೀಲ್, ಡಾ.ಎಸ್.ಕೆ ಗೌಡಪ್ಪ, ಡಾ.ಗುರುರಾಜ ಸುಂಕದ, ಡಾ.ಸತ್ಯನಾರಾಯಣ, ಡಾ.ಸಂಜೀವ ಪಾಟೀಲ್ ಮತ್ತು ಇತರರು ಇದ್ದರು.