ಕೃಷಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೀಮಿತವಾಗದೇ ಉದ್ಯೋಗ ಸೃಷ್ಟಿದಾತರಾಗಬೇಕು. ತಾವು ಕಲಿತಿದ್ದನ್ನು ಸಮಾಜದ ಹಿತಕ್ಕಾಗಿ ಬಳಸಿಕೊಳ್ಳಬೇಕು ಎಂದು ರಾಜ್ಯಪಾಲ ಡಾ. ಥಾವರ ಚಂದ್ ಗೆಹ್ಲೋಟ್ ಹೇಳಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. “ಕೃಷಿ ಪ್ರಧಾನವಾಗಿರುವ ದೇಶದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಸಂಬಂಧಿತ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ರೈತರ ಆದಾಯ ದ್ವಿಗುಣ, ಉತ್ಪನ್ನಕ್ಕೆ ಸರಿಯಾದ ಬೆಲೆ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಅನೇಕ ಅವಿಷ್ಕಾರಗಳು, ಸಂಶೋಧನೆಗಳು ನಡೆಯುತ್ತಿವೆ. ಕೃಷಿ ವಿದ್ಯಾರ್ಥಿಗಳು ಇಂತಹ ಯೋಜನೆಗಳನ್ನು ರೈತರಿಗೆ ತಲುಪಿಸುವ ಮೂಲಕ ಕೃಷಿಯನ್ನು ಮತ್ತಷ್ಟು ಉತ್ತೇಜಿಸುವ ಕೆಲಸ ಮಾಡಬೇಕು” ಎಂದರು.
“ಕೃಷಿ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಹವಮಾನದ ಬದಲಾವಣೆಯಿಂದ ಉತ್ಪಾದನೆ ಮೇಲೆ ಗಂಭೀರ ಪರಿಣಾಮವಾಗುತ್ತಿದೆ. ವಿಜ್ಞಾನ ತಂತ್ರಜ್ಞಾನ ಒಳಗೊಂಡಂತೆ ಹೊಸ ಸಂಶೋಧನೆಗಳು ಕೃಷಿಯನ್ನು ಶ್ರೀಮಂತಗೊಳಿಸುವ ಮೂಲಕ ದೇಶವನ್ನು ಆತ್ಮನಿರ್ಭರಗೊಳಿಸಬೇಕು” ಎಂದರು.
“ಸ್ವಾತಂತ್ರ್ಯ ನಂತರದಲ್ಲಿ ಕೃಷಿ ಅನೇಕ ಮೈಲಿಗಲ್ಲು ಸಾಧಿಸಿದೆ. ದೇಶದ ಆರ್ಥ ವ್ಯವಸ್ಥೆಯನ್ನು ಸುಧಾರಿಸಲು ಕೃಷಿ ವಿಜ್ಞಾನಿಗಳು ಕೈ ಜೋಡಿಸಬೇಕು. ದೇಶದಲ್ಲಿಯೇ ಕರ್ನಾಟಕವು ಕೃಷಿಗೆ ವಿಶೇಷ ಕೊಡುಗೆ ನೀಡಿದೆ. ಕರ್ತವ್ಯನಿಷ್ಠೆ, ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಮೂಲಕ ಕೃಷಿ ಮಹತ್ವವನ್ನು ಮತ್ತಷ್ಟು ಹೆಚ್ಚಿಸುವ ಕೆಲಸವಾಗಬೇಕು” ಎಂದರು.