ಭಾನುವಾರ ನಡೆದ ಪಿಡಿಒ ನೇಮಕಾತಿ ಹುದ್ದೆಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದನ್ನು ಖಂಡಿಸಿ ಕೂಡಲೇ ಮರು ಪರೀಕ್ಷೆಯನ್ನು ನಿಗದಿ ಮಾಡುವಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಒ) ರಾಜ್ಯಾಧ್ಯಕ್ಷ ಶರಣಪ್ಪ ಉದ್ಭಾಳ ಆಗ್ರಹಿಸಿದ್ದಾರೆ.
ಭಾನುವಾರದಂದು ಬೆಳಗ್ಗೆ ಪ್ರಶ್ನೆ ಪತ್ರಿಕೆ-1ರ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಒಂದು ಬ್ಲಾಕ್‌ನಲ್ಲಿ 24 ಜನ ಅಭ್ಯರ್ಥಿಗಳಿದ್ದರೆ, ಕೇವಲ 12 ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಪ್ರಶ್ನೆ ಪತ್ರಿಕೆಯ ಬಂಡಲ್ ಅನ್ನು ಅಭ್ಯರ್ಥಿಗಳ ಮುಂದೆ ತೆರೆಯಬೇಕು ಎಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ಮುಂಚಿತವಾಗಿಯೇ ತೆರೆಯಲಾಗಿದೆ ಎಂದು ಆರೋಪಿಸಿದರು.
24 ಅಭ್ಯರ್ಥಿಗಳಿಗೆ ಕೇವಲ 12 ಪ್ರಶ್ನೆ ಪತ್ರಿಕೆಗಳನ್ನು ಹಂಚಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕೆಪಿಎಸ್ಸಿಯ ಈ ಬೇಜವಾಬ್ದಾರಿ ನಡೆಯಿಂದಾಗಿ ಅಭ್ಯರ್ಥಿಗಳಲ್ಲಿ ಅನುಮಾನ ಉಂಟಾಗಿದೆ ಎಂದು ಖಂಡಿಸಿದರು.ಕಲ್ಯಾಣ್ ಕರ್ನಾಟಕ ಭಾಗದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿನ ಸರ್ಕಾರಿ ಪದವಿ ಕಾಲೇಜು ಸೇರಿ ಕಲಬುರ್ಗಿ, ಬೀದರನಲ್ಲಿಯೂ ಕೂಡ ಇದೇ ರೀತಿ ಜರುಗಿದೆ ಎಂದರೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ವಿದ್ಯಾರ್ಥಿಗಳು ಹಲವಾರು ತಿಂಗಳುಗಳಿಂದ ಪರೀಕ್ಷಾ ತಯಾರಿ ನಡೆಸಿ, ತರಬೇತಿ ಪಡೆದು, ಹಗಲು ರಾತ್ರಿ ಅಭ್ಯಾಸ ನಡೆಸಿದ ಅಭ್ಯರ್ಥಿಗಳಿಗೆ ಸೋರಿಕೆಯಿಂದ ನಿರಾಸೆ ಉಂಟಾಗಿದೆ. ಇದಕ್ಕೆ ಕೆಪಿಎಸ್‌ಸಿಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯೇ ಕಾರಣವಾಗಿದೆ ಎಂದು ದೂರಿದರು. ಯಾವುದೇ ಪಕ್ಷ ಅಧಿಕಾರಕ್ಕೆ ಬಂದಿದ್ದರು ಸಹ ಕೆಪಿಎಸ್ಸಿಯ ಕರ್ಮಕಾಂಡಗಳನ್ನು ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.
ಇದೊಂದು ಪರೀಕ್ಷೆಯಲ್ಲ, ಪಿಎಸ್ಐ ನೇಮಕಾತಿ ಪ್ರಶ್ನೆ ಪತ್ರಿಕೆ ತಯಾರಿಕೆಯಲ್ಲಿ ಗೊಂದಲ, ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮ- ಹಗರಣಗಳಿಲ್ಲದೆ ಪರೀಕ್ಷೆ ನಡೆಸಿದ ಇತಿಹಾಸವೆ ಕೆಪಿಎಸ್ಸಿ ಗೆ ಇಲ್ಲ. ಪ್ರತಿಯೊಂದು ಪರೀಕ್ಷೆ ನಡೆದಾಗ ಅಭ್ಯರ್ಥಿಗಳು ಇದೇ ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಪಿಡಿಒ ಪ್ರಶ್ನೆಪತ್ರಿಕೆ ಸೋರಿಕೆ ; ಪ್ರತಿಭಟಿಸಿದ್ದ ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್!
ಉದ್ಯೋಗದ ಭರವಸೆಯನ್ನು ಹೊಂದಿರುವ ಅಭ್ಯರ್ಥಿಗಳ ಬದುಕಿದ ಜೊತೆ ಕೆಪಿಎಸ್ಸಿಯು ಚೆಲ್ಲಾಟವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಪಿಎಸ್ಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಈ ಕೂಡಲೇ ಮರು ಪರೀಕ್ಷೆಯನ್ನು ನಡೆಸಬೇಕೆಂದು, ಈ ರೀತಿಯಾಗಿ ಎಡವಟ್ಟು ಜರುಗಿರುವ ಕುರಿತು ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ತಿಳಿಸಿದರು.
