ರಾಯಚೂರು ಜಿಲ್ಲೆ ಕೇಂದ್ರ ಸರಕಾರದ ನೀತಿ ಆಯೋಗ ಪಟ್ಟಿ ಮಾಡಿರುವ ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿ ಇದ್ದರು ಏಮ್ಸ್ ಮಂಜೂರು ಮಾಡಲು ಕೇಂದ್ರದ ಬಿಜೆಪಿ ಸರಕಾರ ನಿರ್ಣಯ ಮಾಡದೆ ನಿರ್ಲಕ್ಷ್ಯವಹಿಸಿದ್ದು ತೀವ್ರ ಖಂಡನೀಯಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ವಕ್ತಾರ ಡಾ.ರಝಾಕ್ ಉಸ್ತಾಧ್ ತಿಳಿಸಿದ್ದಾರೆ.
ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ಸರಕಾರ ರಾಯಚೂರು ಜಿಲ್ಲೆಗೆ ಏಮ್ಸ್ ಸ್ಥಾಪಿಸುವ ಕುರಿತು ಸಂಸದ ಜಿ.ಕುಮಾರ ನಾಯಕ ಮತ್ತು ಈ.ತುಕಾರಾಂ ಅವರು ಕೇಳಿದ ಪ್ರಶ್ನೆಗೆ ಕರ್ನಾಟಕ ರಾಜ್ಯಕ್ಕೆ ಯಾವುದೇ ಏಮ್ಸ್ ಮಂಜೂರು ಮಾಡಿಲ್ಲವೆಂದು ಉತ್ತರ ನೀಡಿರುವದು ಅತ್ಯಂತ ಬೇಸರದ ಸಂಗತಿ ಎಂದರು.
ಈಗಾಗಲೇ ದೇಶದಲ್ಲಿ 25 ಏಮ್ಸ್ ಮಂಜೂರು ಮಾಡಿ, ಕೆಲವೊಂದು ಕಾರ್ಯನಿರ್ವಹಿಸುತ್ತಿವೆ. ಇಡೀ ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಗೆ ಮಾತ್ರ ಏಮ್ಸ್ ನೀಡಲಾಗಿದೆ. ಇನ್ನುಳಿದಂತೆ ಎಲ್ಲಾ 22 ಏಮ್ಸ್ ಸಂಸ್ಥೆಗಳನ್ನು ಉತ್ತರ ಭಾರತಕ್ಕೆ ನೀಡಿ ತಾರತಮ್ಯ ಮಾಡಿದ್ದಾರೆ. ಕೇವಲ ಉತ್ತರ ಭಾರತ ಕೇಂದ್ರೀಕರಿಸಿ ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸುವದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ?
ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದು, ದೇಶದ ಆರ್ಥಿಕತೆಗೆ ಅತೀ ಹೆಚ್ಚು ಕೊಡುಗೆ ನೀಡುತ್ತಿದೆ. ಇಂತಹ ರಾಜ್ಯಕ್ಕೆ ಏಮ್ಸ್ ಮಂಜೂರು ಮಾಡಲು ಕೇಂದ್ರ ಸರಕಾರ ಮೀನಾಮೇಷ ಏಣಿಸುತ್ತಿರುವದು ಸರಿಯಲ್ಲ. ಕಲ್ಯಾಣ ಕರ್ನಾಟಕದ ಐದು ಲೋಕಸಭಾ ಸದಸ್ಯರು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ಒತ್ತಾಯಿಸಿದ್ದಾರೆ.
ರಾಯಚೂರು ಜಿಲ್ಲೆಗೆ ಈಗಾಗಲೇ ಬಿಜೆಪಿ ಸರಕಾರ ಐಐಟಿ ನೀಡುವಲ್ಲಿ ಮೋಸ ಮಾಡಿದೆ. ಈಗ ಕಳೆದ ಮೂರು ವರ್ಷಗಳಿಂದ ಏಮ್ಸ್ ಮಂಜೂರು ಮಾಡಲು ಒತ್ತಾಯಿಸಿ ನಿರಂತರ ಹೋರಾಟ ನಡೆಯುತ್ತಿದೆ. ರಾಜ್ಯ ಸರಕಾರ ಕೂಡ ಹಲವು ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರ ನೇತೃತ್ವದ ನಿಯೋಗ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮೂರು ಸಲ ಪತ್ರ ಬರೆದು ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೋರಿದ್ದಾರೆ. ಆದರೂ ಕೇಂದ್ರ ಸರಕಾರ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಹಿಂದೇಟು ಹಾಕುತ್ತಿರುವದು ಹಿಂದುಳಿದ ಜಿಲ್ಲೆಗಳ ವಿರೋಧಿ ಭಾವನೆ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾರು ಪಲ್ಟಿ : ಮಹಿಳೆ ಸಾವು, ಕುಟುಂಬದ ಐವರಿಗೆ ಗಾಯ
ರಾಯಚೂರು ಜಿಲ್ಲೆ ಕರ್ನಾಟಕ ರಾಜ್ಯದಲ್ಲಿದ್ದರೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಗಡಿ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಏಮ್ಸ್ ಸ್ಥಾಪನೆಯಾದರೆ ಮೂರು ರಾಜ್ಯಗಳ ಜನರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ತಕ್ಷಣ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು.
