ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಶುಲ್ಕ ಹೆಚ್ಚಳ ಹಾಗೂ ವಿದ್ಯಾರ್ಥಿವೇತನ ನಿಲ್ಲಿಸಿರುವುದನ್ನು ರಾಯಚೂರು ಜಿಲ್ಲೆಯ ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ(ಎಐಆರ್‌ಎಸ್‌ಒ) ರಾಜ್ಯ ಸಮಿತಿ ಸದಸ್ಯ ಅಜೀಜ್ ಜಾಗೀರ್ದಾರ್ ಖಂಡಿಸಿದರು.
“ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಏಕಾಏಕಿ ಶುಲ್ಕವನ್ನು ಹೆಚ್ಚಿಸಲಾಗಿದೆ. ಕಳೆದ ಶೈಕ್ಷಣಿಕ ಸಾಲಿನ ಶುಲ್ಕ ₹3,000 ಆಸುಪಾಸಿನಲ್ಲಿತ್ತು. ಪ್ರಸ್ತುತ ಸಾಲಿನಲ್ಲಿ ₹3,500ಕ್ಕೆ ಹೆಚ್ಚಿಸಲಾಗಿದ್ದು, ಪರಿಕ್ಷೆ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಇದರಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಬಡಕುಟುಂಬದ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟವಾಗಿದೆ. ಹಾಗಾಗಿ ಅನೇಕ ಬಡಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಕೂಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದರು.
“ಕಳೆದ ಒಂದು ವರ್ಷದಿಂದ ವಿದ್ಯಾರ್ಥಿವೇತನ ಬಿಡುಗಡೆಯಾಗಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಪ್ರತಿಭಟನೆ ನಡೆಸಲಾಗಿತ್ತು. ನಂತರ ಹಣ ಬಿಡುಗಡೆ ಮಾಡಿದ್ದರು. ಈಗ ಒಂದು ವರ್ಷ ಕಳೆದರೂ ಕೂಡ ವೇತನ ಬಿಡುಗಡೆ ಮಾಡಿಲ್ಲ. ಇದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟಕರವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಜ್ಞಾನ ವಲಯವೆಂದು ಕರೆಯಲಾಗುವ ಭಾರತದ ಶೈಕ್ಷಣಿಕ ರಂಗವನ್ನು ಸಂಪೂರ್ಣ ಶೈಕ್ಷಣಿಕ ಉದ್ಯಮವನ್ನಾಗಿ ಮಾರ್ಪಡಿಸಲಾಗಿದೆ. ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ಸ್ಥಳೀಯ ಮಾರುಕಟ್ಟೆಗೆ ಅದನ್ನು ತೆರೆದಿಡಲಾಗಿದ್ದು, ಬಂಡವಾಳ ಹಾಕಿ ಲಾಭ ಮಾಡಿಕೊಳ್ಳಲು ಮುಕ್ತ ಅವಕಾಶವನ್ನು ನಿರ್ಮಾಣ ಮಾಡಲಾಗಿದೆ” ಎಂದು ತಿಳಿಸಿದರು.
“ಹೊಸ ಸಮಾಜವನ್ನು ನಿರ್ಮಾಣ ಮಾಡಲು ಒಂದು ತಲೆಮಾರನ್ನು ಭೌತಿಕವಾಗಿ ಹಾಗೂ ಮಾನಸಿಕವಾಗಿ ಸಿದ್ಧ ಮಾಡಬೇಕಿದ್ದ ಶಿಕ್ಷಣವು ಕಾರ್ಯಾಚರಣೆಯಲ್ಲಿ ಅದನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಶಿಕ್ಷಣ ಎಂಬುದು ವ್ಯಾಪಾರವಾಗಿದ್ದು, ಹಣ ಹೂಡಿಕೆ ಮಾಡಿ ಪುನಃ ಲಾಭ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೈಜ್ಞಾನಿಕ ಶಿಕ್ಷಣ ಪದ್ಧತಿ ಹಾಗೂ ಸಾರ್ವತ್ರಿಕ ಉಚಿತ ಹಾಗೂ ಕಡ್ಡಾಯ ಶಿಕ್ಷಣ ರಾಜ್ಯದಲ್ಲಿ ಜಾರಿಗೆ ತರಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ದಲಿತರನ್ನು ಒಳಗೊಳ್ಳದ ಭಾರತ ಸಮೃದ್ಧವಾಗಲು ಸಾಧ್ಯವಿಲ್ಲ: ಎಚ್ ಸಿ ಮಹದೇವಪ್ಪ
“ಶಾಲಾ ಪಠ್ಯಪುಸ್ತಕಗಳ ಮರು ಪರಿಷ್ಕರಣೆ ಯಾರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆಯೆಂದು ತಿಳಿಸಬೇಕು. ಆನ್‌ಲೈನ್ ಮೂಲಕ ನೇರವಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವೇತನ ಬಿಡುಗಡೆ ಮಾಡಬೇಕು. ವಿಶ್ವವಿದ್ಯಾಲಯಗಳ ಶುಲ್ಕ ಕಡಿಮೆ ಮಾಡಬೇಕು. ವಿದ್ಯಾರ್ಥಿ ಯುವಜನರ ಮಧ್ಯೆ ಭಯೋತ್ಪಾದನೆ, ಕೋಮುವಾದ, ಜಾತಿವಾದ, ಗಡಿಭಾಷಾವಾದಗಳನ್ನು ಬಿತ್ತುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.